ಶಿರಾ:
ಶಾಸಕರ ಸಮ್ಮುಖದಲ್ಲಿಯೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಕಳ್ಳಂಬೆಳ್ಳ ಕೆರೆಯ ಏರಿಯಲ್ಲಿ ಚಿಕ್ಕ ಮಂಗೆ ಕಾಣಿಸಿಕೊಂಡು ತುಂಬಿದ ಕೆರೆಯಿಂದ ಕಳೆದ ಎರಡು ದಿನಗಳಿಂದಲೂ ನೀರು ಹೊರ ಬರುತ್ತಿದ್ದು ಸಣ್ಣ ನೀರಾವರಿ ಇಲಾಖೆಯ ಬೇಜವಾಬ್ದಾರಿಗೆ ಬೇಸತ್ತ ಗ್ರಾಮಸ್ಥರು ಹಾಗೂ ರೈತರು ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಸಮ್ಮುಖದಲ್ಲಿಯೇ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.
ಸೋಮವಾರ ಬೆಳಗ್ಗೆ ಕಳ್ಳಂಬೆಳ್ಳ ಕೆರೆಯ ಏರಿಯ ಬುಡದಲ್ಲಿ ಅದರಲ್ಲೂ ಗ್ರಾಮದ ಪಕ್ಕದ ಕೋಡಿಯ ಸಮೀಪದ ಏರಿಯ ಬಳಿ ಸಣ್ಣ ಮಂಗೆ (ರಂಧ್ರ) ಕಾಣಿಸಿಕೊಂಡು, ನೀರು ಹೊರ ಬರುವ ವಿಚಾರ ರೈತರು ಹಾಗೂ ಗ್ರಾಮಸ್ಥರಿಗೆ ತಿಳಿಯಿತು. ಕೂಡಲೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸೋಮವಾರವೆ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಇಲಾಖೆಯ ಅಧಿಕಾರಿಗಳು ಸದರಿ ವಿಚಾರವು ಅಷ್ಟೇನೂ ಪ್ರಮುಖವಲ್ಲವೆಂಬಂತೆ ವರ್ತಿಸಿದ್ದರಿಂದ ಮಂಗಳವಾರ ಕೆರೆಗೆ ಭೇಟಿ ನೀಡಿದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಸಮ್ಮುಖದಲ್ಲಿ ಗ್ರಾಮದ ಕೆಲ ಪ್ರಮುಖರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಶಾಸಕರು ಹಾಗೂ ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದಾಗ ಪುನಃ ಅಧಿಕಾರಿಗಳ ಮಂಗೆಯ ಬಗ್ಗೆ ಹಾಗೂ ಏರಿ ಭದ್ರಪಡಿಸುವ ಬಗ್ಗೆ ಮಾತನಾಡದೆ, ಆತಂಕಬೇಡ, ಏನೂ ಆಗುವುದಿಲ್ಲವೆಂಬ ಮಾತುಗಳನ್ನು ಕೇಳಿ ಗ್ರಾಮಸ್ಥರು ಶಾಸಕರ ಸಮ್ಮುಖದಲ್ಲಿಯೇ ಅಧಿಕಾರಿಗಳ ಮೇಲೆ ಮುಗಿ ಬಿದ್ದರು.
ಕಳೆದ 40 ವರ್ಷಗಳ ಹಿಂದೆ ಇದೇ ಕೆರೆಯಲ್ಲಿ ಮಂಗೆ ಬಿದ್ದು ಕೆಲ ದಿನಗಳ ನಂತರ ಕೆರೆಯೇ ಒಡೆದು ಹೋಯಿತು. ಗ್ರಾಮದ ಮನೆಗಳು, ತೋಟಗಳು ಮುಳುಗಡೆಯಾಗಿದ್ದವು. ನಿಮ್ಮ ಟೆಕ್ನಿಕಲ್ ಐಡಿಯಾಗಳನ್ನು ಮೊದಲು ಬದಿಗಿಟ್ಟು ಜನರ ಜೀವ ಕಾಪಾಡುವ ಚಿಂತನೆ ಮಾಡಿ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿಯೇ ಇದ್ದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡರಿಗೂ ಕಳಕಳಿಯ ಮನವಿ ಮಾಡಿದ ಗ್ರಾಮಸ್ಥರು, ಕಳೆದ ಎರಡು ದಿನಗಳಿಂದಲೂ ನಾವು ಜೀವ ಭಯದಿಂದ ನಿದ್ದೆಯನ್ನೇ ಮಾಡಿಲ್ಲ.
ಕಳೆದ 40 ವರ್ಷಗಳ ಹಿಂದಿನ ದುರ್ಘಟನೆ ಮರುಕಳಿಸಬಾರದು ಎಂಬ ವಿವೇಕ ನಿಮಗಿದ್ದರೆ ಮೊದಲು ಏರಿಯನ್ನು ಭದ್ರ ಪಡಿಸುವ ಮತ್ತು ಗುಣಮಟ್ಟದ ಏರಿ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಿ. ಈ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು.
ಅವರೂ ಕೂಡ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು, ಕೆರೆಯ ನೀರನ್ನಾದರೂ ಖಾಲಿ ಮಾಡಿ ನಮಗೆ ರಕ್ಷಣೆ ಕೊಟ್ಟು ಬಿಡಿ ಎಂದು ಶಾಸಕರನ್ನು ಒತ್ತಾಯಿಸಿದರು.
ಆಗ ಕೆರೆ ಏರಿಯನ್ನು ಭದ್ರಪಡಿಸುವ ಹಾಗೂ ಗ್ರಾಮಸ್ಥರಲ್ಲಿ ಯಾವುದೇ ಆತಂಕ ಇಲ್ಲದಂತೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ