ಬೆಂಗಳೂರಿಗೆ ಬರ್ತಾಯಿದೆ ವಿದೇಶಿ ಡ್ರಗ್ಸ್​….!

ಬೆಂಗಳೂರು

    ಅದು ದೇಶದ ಮಹಾನಗರಗಳಿಗೆ ಡ್ರಗ್ಸ್ ಸರಬರಾಜು ಮಾಡುವ ಬೃಹತ್ ಜಾಲ. ಸರ್ಕಾರಿ ಸಂಸ್ಥೆಯನ್ನೇ ಬಳಸಿಕೊಂಡು ಮಾದಕವಸ್ತುಗಳನ್ನ ಸರಬರಾಜು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಾಗಾದರೆ ಪೊಲೀಸರ ಬಲೆಗೆ ಬಿದ್ದ ಆ ಜಾಲ ಯಾವುದು, ಸಿಕ್ಕ ಡ್ರಗ್ಸ್ ಎಷ್ಟು ಎಂದು ಕೇಳಿದರೆ ಶಾಕ್ ಆಗುವುದಂತೂ ನಿಜ.

    ಅಂದಹಾಗೇ ಎಲ್ಲಾ ಡ್ರಗ್ಸ್ ಕೂಡ ವಿದೇಶಗಳಿಂದ ನಗರಕ್ಕೆ ಸರಬರಾಜು ಆಗುತ್ತಿದ್ದು, ಪೊಲೀಸರ ಪರಿಶೀಲನೆ ವೇಳೆ ಅದು ಭಾರತೀಯ ಅಂಚೆ ಇಲಾಖೆ ಮೂಲಕ ಬಂದಿರುವುದು ಗೊತ್ತಾಗಿದೆ. ಬಳಿಕ ಪ್ರಕರಣದ ಜಾಡು ಹಿಡಿದ ಸಿಸಿಬಿ ಪೊಲೀಸರು, ಕಸ್ಟಮ್ಸ್ ಅಧಿಕಾರಗಳ ಸಹಯೋಗದೊಂದಿಗೆ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್​​ನಲ್ಲಿ ಪರಿಶೀಲನೆ ಮಾಡಿದ್ದಾರೆ. ಶ್ವಾನದಳದ ಸಹಾಯದಿಂದ ಸುಮಾರು 3500 ಪೋಸ್ಟ್​​ಗಳನ್ನ ಪರಿಶೀಲನೆ ನಡೆಸಿದಾಗ ಅದರಲ್ಲಿ ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್​ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್​ಗಳು ಬಂದಿರುವುದು ಗೊತ್ತಾಗಿದೆ.
   ಸದ್ಯ ವಶಕ್ಕೆ ಪಡೆದಿರುವ ಪೋಸ್ಟ್​ಗಳ ವಿಳಾಸ ಪರಿಶೀಲನೆ ನಡೆಸಿದ್ದು, ಯಾರ ಯಾರ ಹೆಸರಲ್ಲಿ ಈ ಡ್ರಗ್ಸ್ ಬಂದಿದೆ ಎನ್ನುವುದು ತನಿಖೆ ನಡೆಸಿದ್ದಾರೆ. ಒಟ್ಟನಲ್ಲಿ ಬೆಂಗಳೂರಿಗೆ ಕೇವಲ ದೇಶದ ವಿವಿಧ ರಾಜ್ಯಗಳಿಂದ ಮಾತ್ರ ಡ್ರಗ್ಸ್ ಬರುತ್ತಿಲ್ಲ, ಬದಲಿಗೆ ವಿದೇಶಗಳಿಂದಲೂ ಬರುತ್ತಿದೆ ಅನ್ನೋದು ಈ ದಾಳಿಯಿಂದ ಗೊತ್ತಾಗಿದೆ. ಅದರಿಂದ ಸಿಸಿಬಿ ಪೊಲೀಸರು ವಿದೇಶಿ ಪಾರ್ಸೆಲ್​ಗಳ ಮೇಲೆ ನಿಗಾ ಇಟ್ಟಿದ್ದು, ಮಾದಕ ವಸ್ತುಗಳ ಜಾಲ ಮಟ್ಟ ಹಾಕಲು ಶತಪ್ರಯತ್ನ ನಡೆಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap