ತುಮಕೂರು : ಯುವ ರೈತ ಪ್ರಶಸ್ತಿಗೆ ಲೋಕೇಶ್ ನಾಯ್ಕ ಭಾಜನ!!

  ಚಿಕ್ಕನಾಯಕನಹಳ್ಳಿ :

      ಓದಿದ್ದು ಬದುಕು ಕಟ್ಟಿಕೊಳ್ಳಲು ನೆರವಾಗಲಿಲ್ಲವೆಂದು ಕೈಕಟ್ಟಿ ಕೂರಲಿಲ್ಲ, ಪಡೆದ ಅಕ್ಷರ ಜ್ಞಾನವನ್ನು ಬಂಡವಾಳ ಮಾಡಿಕೊಂಡು ಭೂ ತಾಯಿ ನಂಬಿ ಉಳುಮೆಗೆ ನಿಂತು, ನೂರಾರು ಅನುಭವಿ ರೈತರ ಸಂಪರ್ಕ ಮಾಡಿ, ಕೃಷಿಯತ್ತ ಮುಖ ಮಾಡಿದ, ಪರಿಣಾಮ ಇಂದು ತಾಲ್ಲೂಕಿನ ಸಾಸಲು ಗ್ರಾಮದ ಲೋಕೇಶ್ ನಾಯ್ಕ ಎಂಬ ಯುವಕ ಯುವ ರೈತ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

     ಲೋಕೇಶ್ ನಾಯ್ಕ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡಿ ಯಶಸ್ಸು ಪಡೆದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯ ಕೊಡ ಮಾಡುವ ಯುವ ರೈತ ಕೃಷಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರು ಸಮಗ್ರ ಕೃಷಿ ಪದ್ದತಿ ಅನುಸರಿಸಿಕೊಂಡು ಯುವ ರೈತರಿಗೆ ಮಾದರಿಯಾಗಿದ್ದಾರೆ.

      ಲೋಕೇಶ್ ನಾಯ್ಕ ತಮ್ಮ ಜಮೀನಿನಲ್ಲಿ, ಅರಣ್ಯ ಕೃಷಿ, ಸಮಗ್ರ ಕೃಷಿ, ಸಾವಯವ ಕೃಷಿ, ಹೈನುಗಾರಿಕೆ, ಕುರಿ ಸಾಕಾಣಿಕೆ, ಹನಿ ನೀರಾವರಿ ಪದ್ದತಿ ಅಳವಡಿಕೆ, ತರಕಾರಿ ಬೆಳೆ, ಉಪಕಸುಬು, ಅಡಿಕೆ ತಟ್ಟೆ ತಯಾರಿಕೆ ಘಟಕ ಆರಂಬಿಸಿದ್ದಾರೆ.

      ಕೃಷಿಗೆ ಮುಖ್ಯವಾಗಿ ಗೊಬ್ಬರದ ಅವಶ್ಯಕತೆ ಇರುತ್ತದೆ, 10 ಕುರಿ, ಮೇಕೆ, 2ಹಸುಗಳನ್ನು ಸಾಕಾಣಿಕೆ ಮಾಡಿದ್ದೇ ಆದರೆ ಅದರಲ್ಲಿ ಹಣದ ಉಳಿತಾಯದ ಜೊತೆ ಅನಿವಾರ್ಯ ಸಂದರ್ಭಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಗೊಬ್ಬರವನ್ನು ಬಳಸಿಕೊಳ್ಳಬಹುದು. ರೈತರು ಕೃಷಿ ಮಾಡುವ ಜೊತೆಗೆ ಸಾವಯುವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ನೀರಿನ ಸಮರ್ಪಕ ಬಳಕೆಗೆ ಹನಿ ನೀರಾವರಿ, ತುಂತುರು ನೀರಾವರಿ ಪದ್ದತಿ ಅನುಸರಿಸಲೂ ಲೋಕೇಶ್ ನಾಯ್ಕ್ ತಿಳಿಸಿದ್ದಾರೆ.

      ಲೋಕೇಶ್ ನಾಯ್ಕ ತನ್ನ ಜಮೀನಿನಲ್ಲಿ, 500 ಹೆಬ್ಬೇವು, 100 ಮಹಾಗನಿ, 150 ಗೋಡಂಬಿ, 50 ಶ್ರೀಗಂಧ, 400 ತೆಂಗು, 1000 ಅಡಿಕೆ, 50 ರಕ್ತ ಚಂದನ, 600 ಬಾಳೆ, 10 ಹುಣಸೆ, 10 ನಿಂಬೆ, 10 ಮಾವು ಜೊತೆಗೆ ಎಲ್ಲಾ ರೀತಿಯ ಹಣ್ಣಿನ ಗಿಡಗಳು ಬೆಳೆದಿದ್ದಾರೆ. ಧಾನ್ಯಗಳಲ್ಲಿ ರಾಗಿ ಹಾರಕ, ಹುರಳಿ, ತೊಗರಿ, ಅಲಸಂದೆ ಹಾಗೂ ತರಕಾರಿಗಳಲ್ಲಿ ಟಮೊಟೋ, ಹುರಳಿಕಾಯಿ, ಬೆಂಡೆ, ಮೆಣಸಿನಕಾಯಿ, ಬದನೆ ಹಾಗೂ ಜೊತೆಗೆ ಹಸುಸಾಕಾಣಿಕೆ, ಕುರಿಸಾಕಾಣಿಕೆ, ಅಡಕೆ ಪಟ್ಟಿ ತಯಾರಿಕಾ ಘಟಕವನ್ನು ಆರಂಭಿಸಿ ಉಪಕಸುಬು ಮಾಡುತ್ತಿದ್ದಾರೆ.

      ತರಕಾರಿ ಬೆಳೆ ಬೆಳೆಯುವ ಜೊತೆಗೆ, ಕುರಿ ಸಾಕಾಣಿಕೆ, ಹಸು ಸಾಕಾಣಿಕೆ ಮಾಡುವುದು ಹೇಗೆ ಎಂಬ ಹಲವಾರು ವಿಷಯಗಳ ಅಂಶಗಳನ್ನು ಅನುಭವಸ್ತ ರೈತರೊಂದಿಗೆ, ತೋಟಗಾರಿಕೆ, ಕೃಷಿ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿದ್ದಾರೆ, ಹಲವು ಕೃಷಿ ಕೂಟಗಳಿಗೆ ಭಾಗವಹಿಸಿದ್ದಾರೆ, ವಿಜ್ಞಾನಿ ಕೂಟಗಳಿಗೆ ತೆರಳಿ ಅಲ್ಲಿ ನಡೆಯುವ ಅಂಶಗಳನ್ನು ಆಲಿಸಿ ಅರಣ್ಯ ಕೃಷಿ ಎಂದರೆ, ಲಾಭದಾಯಕವೇ, ಮರದ ಜೊತೆ ಯಾವ ಬೆಳೆ ಬೆಳೆಯಬೇಕು, ಎಷ್ಟು ನೀರು ಸಿಂಪಡಿಸಬೇಕು ಎಂಬ ಹಲವಾರು ವಿಷಯಗಳನ್ನು ತಿಳಿದು ತಮ್ಮ ತೋಟದಲ್ಲಿ ಅಳವಡಿಸಿದ್ದಾರೆ.

     ಲೋಕೇಶ್ ನಾಯ್ಕ ತನ್ನ ಪ್ರಶಸ್ತಿಗೆ ಕಾರಣ ನಮ್ಮ ಪೂರ್ಣ ಕುಟುಂಬದವರ ಸಹಕಾರವೇ ಆಗಿದೆ ಎನ್ನುತ್ತಾರೆ, ಡಿ.ಇಡಿ ಮುಗಿಸಿದ ನಂತರ ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಕೃಷಿ ಕ್ಷೇತ್ರ ಆರಿಸಿಕೊಂಡೆ, ಯಶಸ್ವಿಯೂ ಆಗಿದ್ದೇನೆ. ಈ ಯಶಸ್ಸು ನನ್ನೊಬ್ಬನಿಂದಲೇ ಅಲ್ಲದೆ ನಮ್ಮ ಕುಟುಂಬದ ಪರಿಶ್ರಮವೂ ಇದೆ, ಅವರು ಕೆಲಸದ ವಿಂಗಡಣೆಯಿಂದ ನನ್ನನ್ನು ಕೃಷಿ ಕ್ಷೇತ್ರದಲ್ಲಿ ಗುರುತಿಸಿದ್ದಾರೆ.

      ಯುವ ರೈತರು ಕೃಷಿಯಲ್ಲಿ ಲಾಭ ಪಡೆಯಬೇಕೆಂದರೆ ಸಮಗ್ರ ಕೃಷಿ ಪದ್ದತಿ ಅನುಸರಿಸುವುದು ಸೂಕ್ತ, ಬೆಳೆಗಳ ಜೊತೆ ಪೂರಕವಾದ ಬೆಳೆ ಬೆಳೆಯುವುದರಿಂದ ತಿಂಗಳಿಗೆ, ಮೂರು ತಿಂಗಳಿಗೆ, ವರ್ಷಕ್ಕೆ ಈ ರೀತಿ ಆದಾಯಗಳಿಸಬಹುದು, ಸಮಗ್ರ ಕೃಷಿ ಪದ್ದತಿಯಲ್ಲಿ ತೆಂಗು, ಜೊತೆ ಅಡಿಕೆ, ಬಾಳೆ, ತರಕಾರಿ ಬೆಳೆಗಳು ಬೆಳೆಯವುದು ಉತ್ತಮ.

-ಲೋಕೇಶ್ ನಾಯ್ಕ. ಸಾಸಲು ಯುವ ರೈತ

 

Recent Articles

spot_img

Related Stories

Share via
Copy link
Powered by Social Snap