ಮೈಸೂರು:
ಆಷಾಢ ಶುಕ್ರವಾರದ ಪ್ರಯುಕ್ತ ಮೈಸೂರು ಜಿಲ್ಲಾಡಳಿತ ಮಂಡಳಿ ಭರದ ಸಿದ್ಧತೆ ನಡೆಸಿದ್ದು, ಚಾಮುಂಡಿ ಬೆಟ್ಟಕ್ಕೆ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಉಚಿತ ಬಸ್ ಸೇವೆ ಒದಗಿಸಲಿದೆ. ಲಲಿತ ಮಹಲ್ ಅರಮನೆ ಮೈದಾನದಿಂದ ನಲವತ್ತು ಬಸ್‌ಗಳು ಸಂಚರಿಸಲಿದ್ದು, ಚಾಮುಂಡಿ ಬೆಟ್ಟದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ತಾಯಿ ಚಾಮುಂಡೆಶ್ವರಿಗೆ ವಿಶೇಷವಾದ ಪೂಜೆಯನ್ನ ಸಲ್ಲಿಸಲಾಗುತ್ತದೆ. ಲಕ್ಷಾಂತರ ಭಕ್ತರು ಸಹ ಬೆಟ್ಟಕ್ಕೆ ಭೇಟಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಆಷಾಢ ಶುಕ್ರವಾರದ ಪೂಜೆಗೆ ಯಾವುದೇ ವಿಶೇಷ ಪಾಸ್ ಇರುವುದಿಲ್ಲ. ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
ಸಾಮಾನ್ಯ ಸರತಿ ಸಾಲಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ವಿಶೇಷ ದರ್ಶನಕ್ಕಾಗಿ 50 ಮತ್ತು 300 ರೂ ಟಿಕೆಟ್‌ಗಳನ್ನು ಸಹ ಖರೀದಿಸಬಹುದು. ಬೆಟ್ಟದಲ್ಲಿ ಎಲ್ಲಾ ಖಾಸಗಿ ವಾಹನಗಳಿಗೆ ನಿರ್ಬಂಧಿಸಲಾಗಿದ್ದು, ಉಚಿತ ಬಸ್ ಮೂಲಕವೇ ಪ್ರತಿಯೊಬ್ಬರು ಚಾಮುಂಡಿಬೆಟ್ಟಕ್ಕೆ ತೆರಳಬೇಕು ಎಂದು ತಿಳಿಸಿದರು.
ಪಾರ್ಕಿಂಗ್ ತೊಂದರೆ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಮತ್ತೊಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ. ಮುಂಜಾನೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿ ದರ್ಶನ ಪಡೆಯಬಹುದು ಎಂದರು.
ಡೆಂಗ್ಯೂ ಕುರಿತು ಮಾತನಾಡಿ, ಜಿಲ್ಲೆಯಲವ್ಲಿ ಡೆಂಗ್ಯೂ ನಿಯಂತ್ರಣದಲ್ಲಿದೆ. 496 ಪಾಸಿಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಸಿಟಿವ್ ಪ್ರಮಾಣ ಶೇ.17ರಿಂದ 10ಕ್ಕೆ ಇಳಿಕೆಯಾಗಿದ್ದು, ಕೆ.ಆರ್.ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಆರೋಗ್ಯ ಇಲಾಖೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. 3,595 ಮಂದಿಗೆ ಡೆಂಗ್ಯೂ ಪರೀಕ್ಷೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಚಾಮರಾಜನಗರ ಜಿಲ್ಲೆಯ 32 ಕೆರೆಗಳಿಗೆ ನೀರು ತುಂಬಿಸಲು ಕಬಿನಿ ಜಲಾಶಯದಿಂದ ಬುಧವಾರದಿಂದ ನೀರು ಬಿಡಲು ಜಿಲ್ಲಾಡಳಿತ ನಿರ್ಧರಿಸಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನೀರಾವರಿ ಕಾಲುವೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನ ಮಾಡಲಾಗುವುದು ಎಂದರು.
