ಹೊಸಪೇಟೆ:
ಜುಲೈ 9 ರಿಂದ 16ರವರೆಗೆ ಹಂಪಿಯಲ್ಲಿ ನಡೆಯುವ ಜಿ20 ಶೃಂಗಸಭೆಯ ಮೂರನೇ ಪ್ರಮುಖ ಸಭೆಯಲ್ಲಿ ಜಾಗತಿಕ ಮಟ್ಟದ ಒಟ್ಟು ಜಿ20 ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿ 43 ರಾಷ್ಟ್ರಗಳು ಭಾಗವಹಿಸಲಿವೆ.
ಭಾನುವಾರ ನೀತಿ ಆಯೋಗದ ಸಿಇಒ ಮತ್ತು ಜಿ20 ಶೃಂಗಸಭೆ ಆಯೋಜನೆಯ ಮುಖ್ಯಸ್ಥ (ಶೆರ್ಪಾ) ಅಮಿತಾಭ್ ಕಾಂತ್ ಅವರು ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಿದ್ಧತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು.
‘ಈಗಾಗಲೇ ಹಂಪಿ ಪಾರಂಪರಿಕ ಪ್ರದೇಶದಲ್ಲಿ ಶೆರ್ಪಾ ಸಭೆಗಾಗಿ ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಈ ಶೆರ್ಪಾ ಸಭೆಯು ‘ವಸುದೈವ ಕುಟುಂಬಕಂ’ ಎಂಬ ಧ್ಯೇಯದಡಿ, ‘ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ’ ಎಂಬ ಘೋಷವಾಕ್ಯದಡಿ ಶೃಂಗಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಜಿ20 ಶೃಂಗಸಭೆಯ ಮೂರನೆೇ ಶೆರ್ಪಾ ಸಭೆಗಳು ಜುಲೈ 9 ರಿಂದ 16 ರವರೆಗೆ ಹಂಪಿಯಲ್ಲಿ ನಡೆಯಲಿದೆ. ನಾನು ಅಧಿಕಾರಿಗಳೊಂದಿಗೆ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇನೆ’ ಎಂದು ಕಾಂತ್ ಹೇಳಿದರು.
