ಅಮೆರಿಕದಿಂದ 2ನೇ ಹಂತದ ಗಡಿಪಾರು: ತಾಯ್ನಾಡಿಗೆ ಬಂದಿಳಿಯಲಿದ್ದಾರೆ 119 ಅಕ್ರಮ ಭಾರತೀಯ ವಲಸಿಗರು

ನವದೆಹಲಿ:

    ಅಮೆರಿಕದಲ್ಲಿರುವ ಭಾರತೀಯ ಅಕ್ರಮ ವಲಸಿಗರ 2ನೇ ಹಂತದ ಗಡಿಪಾರು ಪ್ರಕ್ರಿಯೆ ಆರಂಭವಾಗಿದೆ. ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಎರಡು ವಿಮಾನಗಳು ಅಮೃತಸರದ ಗುರು ರಾಮ ದಾಸ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫೆಬ್ರವರಿ 15 ಹಾಗೂ 16ರಂದು ಬಂದಿಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   119 ಅಕ್ರಮ ಭಾರತೀಯ ವಲಸಿಗರ ಎರಡನೇ ತಂಡವನ್ನು ಹೊತ್ತ ಅಮೆರಿಕದ ವಿಮಾನ ಫೆಬ್ರವರಿ 15ರಂದು ಅಮೃತಸರ ವಿಮಾನ ನಿಲ್ದಾಣದಲ್ಲಿ ರಾತ್ರಿ 10 ಗಂಟೆಗೆ ಇಳಿಯಲಿದೆ. ಅಕ್ರಮ ಭಾರತೀಯ ವಲಸಿಗರ ಪೈಕಿ ಪಂಜಾಬ್‌ನ 67, ಹರಿಯಾಣದ 33, ಗುಜರಾತಿನ 8, ಉತ್ತರಪ್ರದೇಶದ ಮೂವರು, ಮಹಾರಾಷ್ಟ್ರ, ರಾಜಸ್ಥಾನ, ಗೋವಾದ ತಲಾ ಇಬ್ಬರು ಹಾಗೂ ಹಿಮಾಚಲಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ತಲಾ ಒಬ್ಬರು ಇದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಇನ್ನಷ್ಟು ಅಕ್ರಮ ಭಾರತೀಯರ ವಲಸಿಗರನ್ನು ಹೊತ್ತ ಇನ್ನೊಂದು ವಿಮಾನ ಫೆಬ್ರವರಿ 16ರಂದು ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಕಳೆದ ವಾರ 104 ಅಕ್ರಮ ಭಾರತೀಯ ವಲಸಿಗರಿದ್ದ ವಿಮಾನ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಈ ವೇಳೆ ಜನರ ಕೈಗೆ ಕೋಳಗಳನ್ನು ತೊಡಿಸಿ ಕರೆತಂದಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.ಅದರಲ್ಲಿ ಪಂಜಾಬ್‌ನ 30 ಮಂದಿ, ಹರ್ಯಾಣ, ಗುಜರಾತ್‌ನ ತಲಾ 33 ಮಂದಿ, ಮಹಾರಾಷ್ಟ್ರ, ಉತ್ತರಪ್ರದೇಶ ತಲಾ 3 ಮಂದಿ ಹಾಗೂ ಚಂಡಿಗಢದ ಇಬ್ಬರು ಇದ್ದರು.

   ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ ತೆಗೆದುಕೊಂಡ ಕ್ರಮದ ಭಾಗವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಗಡಿಪಾರು ವಿಚಾರವಾಗಿ, ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ‘ಕಾನೂನುಬಾಹಿರವಾಗಿ’ ವಾಸಿಸುವ ಭಾರತೀಯ ಪ್ರಜೆಗಳ ಕಾನೂನುಬದ್ಧ ಮರಳುವಿಕೆಗೆ ಭಾರತ ಮುಕ್ತವಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.

Recent Articles

spot_img

Related Stories

Share via
Copy link