ಲಕ್ನೋ
ಕೆಲ ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಉತ್ತರ ಪ್ರದೆಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಎಸ್‌ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ವಾರದ ಹಿಂದೆ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು, ಅದೇ ಕಾಲೇಜಿನ ನಿರ್ದೇಶಕರಲ್ಲಿ ಒಬ್ಬರಾದ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಕೂಡ ಒಬ್ಬರು ಮತ್ತು ಅವರು ಅನೇಕರ ಜೀವನ ಹಾಳು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಕೆಲ ಸಾಕ್ಷಿಗಳಿವೆ. ಈ ವಿಚಾರ ತಿಳಿದ ಮಾಜಿ ಸಚಿವ ನನಗೆ ಹಾಗೂ ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದ್ದರು. ಅಲ್ಲದೇ ಈ ವಿಚಾರದಲ್ಲಿ ಸಹಾಯ ಮಾಡುವಂತೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರಿಗೆ ಮನವಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯೂ ಈ ವಿಡಿಯೋವನ್ನು ತಾನು ಉಳಿದುಕೊಂಡಿದ್ದ ಹಾಸ್ಟೆಲ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು . ವಿಡಿಯೋ ಗಮನಿಸಿದ್ದ ಸಂಬಂಧಿಕರು ಈ ವಿಚಾರವನ್ನು ವಿದ್ಯಾರ್ಥಿನಿಯ ಹೆತ್ತವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಮಗಳನ್ನು ಭೇಟಿಯಾಗಲು ತಾಯಿ ಹಾಸ್ಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಆಕೆ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆಕೆಯ ಬಳಿಯಿದ್ದ ಎರಡು ಮೊಬೈಲ್ ಫೋನ್‌ಗಳೂ ಸ್ವಿಚ್ ಆಫ್ ಆಗಿದ್ದರಿಂದ ವಿದ್ಯಾರ್ಥಿನಿಯ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನನ್ವಯ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಓಪಿ ಸಿಂಗ್ ಆದೇಶ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ