ತುಮಕೂರು:
ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದ ಪ್ರೊ.ಮಲ್ಲೆಪುರಂ, ವೂಡೆ ಪಿ. ಕೃಷ್ಣ, ಎಸ್.ನಾಗಣ್ಣ, ಡಿ.ಎಸ್.ವೀರಯ್ಯ
ಅಧ್ಯಯನ, ಪುಸ್ತಕ ಓದು ಎಂದಾಕ್ಷಣ ನನಗೆ ಇಬ್ಬರು ವ್ಯಕ್ತಿಗಳು ಮೊದಲಿಗೆ ನೆನಪಾಗುತ್ತಾರೆ. ಅವರುಗಳೆಂದರೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತೊಬ್ಬರು ಗಾಂಧೀಜಿ ಎಂದು ನಾಡಿನ ಹಿರಿಯ ವಿದ್ವಾಂಸರಾದ ಪ್ರೊ.ಮಲ್ಲೆಪುರಂ ಜಿ ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.
ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿ ಸಂಯುಕ್ತ ಆಶ್ರಯದಲ್ಲಿ ಇತ್ತಿಚೆಗೆ ಹಂಪಿ ಕನ್ನಡ ವಿವಿಯ ಪತ್ರಿಕೋದ್ಯಮ ವಿಭಾಗ ಹಾಗೂ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರೂ ಸಹ ತಮ್ಮ ಸಂಪಾದಕತ್ವದಲ್ಲಿ ಪತ್ರಿಕೆಗಳನ್ನು ಹೊರ ತಂದರು.
ಅಪಾರ ಪುಸ್ತಕ ಪ್ರೇಮಿಗಳಾಗಿದ್ದ ಇವರಿಬ್ಬರು ಅಷ್ಟೇ ಪ್ರಮಾಣದಲ್ಲಿ ಬರವಣೆಗೆ ಮಾಡಿದ್ದಾರೆ. ಗಾಂಧೀಜಿಯವರು ಹಿಂದ್‍ಸ್ವರಾಜ್, ನನ್ನ ಸತ್ಯಾನ್ವೇಷಣೆ ಮೊದಲಾದ 3-4 ಪುಸ್ತಕ ಬರೆದಿರಬಹುದು ಆದರೇ ಅವರು ಮಾಡಿರುವ ಭಾಷಣಗಳು, ಸಂದರ್ಶನಗಳು, ಬರೆದ ಪತ್ರಗಳು, ಲೇಖನಗಳು ಹಾಗೂ ತಮ್ಮದೇ ಹರಿಜನ ಪತ್ರಿಕೆಗೆ ಬರೆದ ಎಲ್ಲಾ ಲೇಖನಗಳನ್ನು ಒಂದೆಡೆ ಒಗ್ಗೂಡಿಸಿ ಭಾರತ ಸರ್ಕಾರವು 100 ಸಂಪುಟಗಳಲ್ಲಿ ಹೊರ ತಂದಿದೆ.
ಮಹಾರಾಷ್ಟ್ರ ಸರ್ಕಾರವು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರಹಗಳನ್ನು 26 ಸಂಪುಟಗಳಲ್ಲಿ ಹೊರ ತಂದಿದೆ. ಕರ್ನಾಟಕ ಸರ್ಕಾರವು ಈ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ಕನ್ನಡದಲ್ಲೂ ಲಭ್ಯವಿರುವ ಈ ಸಂಪುಟಗಳನ್ನು ಪ್ರತಿಯೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯೂ ಅಧ್ಯಯನ ಮಾಡಬೇಕೆಂದು ಮಲ್ಲೆಪುರಂ ಜಿ ವೆಂಕಟೇಶ್ ಅವರು ಮಾಧ್ಯಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಲ್ಲಾ ಜ್ಞಾನ ಶಾಖೆಗಳ ಪರಿಚಯ ಅಗತ್ಯ :
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಎಲ್ಲಾ ಜ್ಞಾನಶಾಖೆಗಳ ಪರಿಚಯ ಅಗತ್ಯವಾಗಿ ಇರಬೇಕು ಈ ಹಿಂದೆ ಪತ್ರಕರ್ತರಾಗಿದ್ದ ಖಾದ್ರಿ ಶಾಮಣ್ಣ, ರಾಮಚಂದ್ರರಾವ್, ಬಿ.ಪುಟ್ಟಸ್ವಾಮಯ್ಯ ಮೊದಲಾದವರು ತಮ್ಮ ವಿಸ್ತಾರ ಓದಿನ ಮೂಲಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಿಗ್ಗಜರೆಂಬ ಕೀರ್ತಿಗೆ ಪಾತ್ರರಾದರು.
ಮೊದಲೆಲ್ಲಾ ಕೆಲ ಪತ್ರಿಕೆಗಳು ತಮ್ಮ ಕಚೇರಿಗಳಲ್ಲಿ ಆಗಿನ ಕಾಲಕ್ಕೆ ಬಿಡುಗಡೆಯಾದ ಯಾವುದಾದರೂ ಒಂದು ಪುಸ್ತಕದ ಬಗ್ಗೆ ಪ್ರತಿವಾರ ಒಂದು ಗಂಟೆ ಚರ್ಚೆ ಏರ್ಪಡಿಸಿ ತಮ್ಮ ಪತ್ರಿಕಾಲಯದ ಎಲ್ಲಾ ಸಿಬ್ಬಂದಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದರು. ಬರವಣೆಗೆ, ವಾಕ್ಯ ತಿದ್ದುವುದು, ಕನ್ನಡ ಭಾಷೆಯ ಲಿಪಿಯ ತಿಳುವಳಿಕೆ, ಭಾಷೆಯನ್ನು ಬಳಸುವ ಕ್ರಮ ಕುರಿತ ಮೊದಲಾದ ಜ್ಞಾನ, ತಿಳುವಳಿಕೆಗಳನ್ನು ಹಿಂದಿನ ತಲೆಮಾರಿನ ಪತ್ರಕೋದ್ಯಮ ವಿದ್ಯಾರ್ಥಿಗಳು ಕಲಿಯುತ್ತಿದ್ದರು.
ಆದರೇ ದುರಾದೃಷ್ಟವಶಾತ್ ಇತ್ತೀಚಿನ ದಿನಮಾನಗಳಲ್ಲಿ ಓದುವ ಅಭ್ಯಾಸವೂ ಹೋಯಿತು. ಪತ್ರಿಕೆಗಳಲ್ಲಿ ಹಾಗೂ ಬಹುತೇಕ ಟಿವಿ ಚಾನೆಲ್‍ಗಳಲ್ಲಿ ಪ್ರಸ್ತುತ ಬರುತ್ತಿರುವ ವರದಿಗಳನ್ನು ಗಮನಿಸಿದರೆ ಮಾಧ್ಯಮಕ್ಷೇತ್ರ ಎದುರಿಸುತ್ತಿರುವ ಸವಾಲುಗಳೇನು ಎಂಬುದು ಅರ್ಥವಾಗುತ್ತದೆ ಎಂದು ಮಲ್ಲೆಪುರಂ ಅವರು ಅಭಿಪ್ರಾಯಪಟ್ಟರು.
ಪತ್ರಿಕೆಯಲ್ಲಿ ಅನೇಕ ಬಗೆಯ ಆಹಾರವಿರಬೇಕು :
ಮಾಧ್ಯಮ ವಿದ್ಯಾರ್ಥಿಗಳು ಬರೀ ಓದುವುದಲ್ಲ, ಓದಿದ್ದನ್ನು ವಿಶ್ಲೇಷಿಸುವ, ವಿಶ್ಲೇಷಿಸಿದ್ದನ್ನು ಅನ್ವಯಿಸಿ ಅದರ ಕುರಿತಾದ ಮುಂದಿನ ಭವಿಷ್ಯ ಹೇಗಿರುತ್ತದೆ, ಕರ್ನಾಟಕ-ಭಾರತದ ಮುಂದಿನ ಭವಿಷ್ಯ ಹೇಗಿದೆ, ಈ ಭವಿಷ್ಯವನ್ನು ತಿದ್ದುತ್ತಿರುವ ಜ್ಞಾನಶಾಖೆಗಳು ಯಾವುವು, ಇಂದು ಯಾವೆಲ್ಲಾ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ ಈ ರೀತಿ ಪ್ರತಿಯೊಂದು ವಿಷಯವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗೆ ಅಧ್ಯಯನ ಬೇಕು.
ಪಡೆದ ಅಧ್ಯಯನವನ್ನು ಪ್ರಯೋಗ ಮಾಡಿ ನೋಡಬೇಕು. ಇದು ಸಾಧ್ಯವೇ? ಇಲ್ಲವೇ? ಎಂದು ವಿಶ್ಲೇಷಣೆ ಮಾಡಬೇಕು. ಅದಕ್ಕಾಗಿಯೇ ಪತ್ರಿಕೆಗಳಲ್ಲಿ ವಿಶ್ಲೇಷಣಾತ್ಮಕ, ಸಾಮಾನ್ಯ, ವಿಶೇಷ ಇತ್ಯಾದಿ ನಿರ್ಧಿಷ್ಟ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ವರದಿಗಳಿರುತ್ತವೆ. ಒಂದು ಪತ್ರಿಕೆ ಎಂದರೇ ಅಲ್ಲಿ ಅನೇಕ ಬಗೆಯ ಆಹಾರ ಇರಬೇಕು. ಒಬ್ಬ ಪತ್ರಕರ್ತನಾದ ವಿದ್ಯಾರ್ಥಿಗೆ ಎಲ್ಲಾ ವಿಷಯಗಳ ಅರಿವಿರಬೇಕು ಎಂದು ಮಲ್ಲೇಪುರಂ ನುಡಿದರು.
ಮಾಧ್ಯಮ ವಿದ್ಯಾರ್ಥಿಗಳು ಸಕಲ ಕಲಾ ವಲ್ಲಭರಾಗಿರಬೇಕು :
ಶೇಷಾದ್ರಿಪುರಂ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ವೂಡೆ ಪಿ ಕೃಷ್ಣ ಅವರು ಮಾತನಾಡಿ, ಇತ್ತೀಚೆಗಷ್ಟೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಮತ್ತು ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಮಲ್ಲೆಪುರಂ ಜಿ ವೆಂಕಟೇಶ್ ಅವರು ಪಾತ್ರರಾದರು. ಸಮ್ಮೇಳನದ ಮುನ್ನಾ ದಿನ ನಾನು ಮತ್ತು ಮಲ್ಲೆಪುರಂ ಅವರು ಧರ್ಮಾಧಿಕಾರಿ ಹೆಗ್ಗಡೆಯವರನ್ನು ಭೇಟಿ ಮಾಡಿ ಅವರ ಜೊತೆ ಸಂವಾದ ನಡೆಸುವಾಗಿನ ಸಂದರ್ಭದಲ್ಲಿ ಒಂದು ವಿಚಾರವನ್ನು ನಾನು ಬಹಳ ಸೂಕ್ಷ್ಮವಾಗಿ ಗ್ರಹಿಸಿದೆ.
ಅದೇನೆಂದರೆ ಅವರು ತಮ್ಮ ಒತ್ತಡದ ಕಾರ್ಯ ಬಾಹುಳ್ಯದ ನಡುವೆಯೂ ದಿನಕ್ಕೆ ಒಂದಾದರೂ ಪುಸ್ತಕ ಓದುತ್ತೇನೆ ಎಂದು ಹೇಳಿದ್ದು. ಧರ್ಮಾಧಿಕಾರಿಗಳು ದಿನಕ್ಕೆ ಒಂದಾದರೂ ಪುಸ್ತಕ ಓದುವುದರಿಂದ ಅವರ ಜ್ಞಾನ ವಿಸ್ತಾರ ಎಷ್ಟಾಗಿರಬೇಕು, ಆದ್ದರಿಂದಲೇ ಅವರ ಮುಖದಲ್ಲಿ ಸರಸ್ವತಿ ತೇಜಸ್ಸು ಕಾಣುತ್ತಿದೆ ಎಂದು ತಿಳಿಸಿದರು.
ಗಾಂಧೀಜಿ ಒಬ್ಬ ದೊಡ್ಡ ಪತ್ರಕರ್ತ :
ಮಾಧ್ಯಮ ವಿದ್ಯಾರ್ಥಿಗಳು ಇಂದು ಸಕಲ ಕಲಾ ವಲ್ಲಭರಾಗಿರಬೇಕು, ಒಳ್ಳೆಯದ್ದು ಕೆಟ್ಟದ್ದರ ಸೂಕ್ಷ್ಮ ಪರಿಚಯವಿರಬೇಕು. ಗಾಂಧೀಜಿಯವರು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೇ ಅವರೊಬ್ಬ ದೊಡ್ಡ ಪತ್ರಕರ್ತರೆಂಬುದನ್ನು ಕೆಲವೇ ಜನ ಗುರುತಿಸುತ್ತಾರೆ.
ಗಾಂಧೀಜಿ ಪತ್ರಕರ್ತರಾಗಿ ಸತ್ಯಕ್ಕೆ ಅಂಟಿಕೊಂಡಿದ್ದರು. ಅಸತ್ಯವಾದ ಒಂದು ಪದವನ್ನು ತಮ್ಮ ಪತ್ರಿಕೆಗಳಾದ ಹರಿಜನ, ಇಂಡಿಯನ್ ಓಪಿನೀಯನ್, ಯಾವುದೇ ಪತ್ರಿಕೆಗಳಲ್ಲಿ ಪ್ರಕಟಿಸಲಿಲ್ಲ.
ತಾತ್ಕಲಿಕವಾಗಿ ಸತ್ಯಕ್ಕೆ ಫಲ ಸಿಗದೇ ಇರಬಹುದು ಆದರೇ ನಮ್ಮಗಳ ವೃತ್ತಿಯಲ್ಲಿ ಬೆಳೆಯುತ್ತಾ ಅದು ಕೊಡುವ ಗಟ್ಟಿತನ, ಮರ್ಯಾದೆ, ಸಮಾಜದಲ್ಲಿ ಸಿಗುವ ಸ್ಥಾನಮಾನ ಅಷ್ಟಿಷ್ಟಲ್ಲ ಎಂಬುದನ್ನು ನಾವುಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವೂಡೆ ಪಿ ಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಕಾರಣಿಗೆ ಬರವಣಿಗೆ ಕೌಶಲ್ಯ ಅಗತ್ಯ :
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಿಡಿನುಡಿ ಮಾಸಪತ್ರಿಕೆಯ ಸಂಪಾದಕರೂ ಆದ ಡಿ.ಎಸ್.ವೀರಯ್ಯ ಅವರು ಮಾತನಾಡಿ, ವಿವೇಕಾನಂದರ ವಾಣಿಯಂತೆ ಮನುಷ್ಯ ಬದುಕಿರುವ ತನಕ ಓದುತ್ತಲಿರಬೇಕು. ಓದು ಮನುಷ್ಯನ ಜೊತೆ ಬರಬೇಕು. ಆಗ ಮಾತ್ರ ಮನುಷ್ಯ ಯಾವುದೇ ವಿಷಯದಲ್ಲಿ ಪಾಂಡಿತ್ಯ ಪಡೆದು ಜ್ಞಾನಿಯಾಗಬಹುದು.
ಆ ಮೂಲಕ ಸಮಾದಲ್ಲಿ ತೊಡಗಿಸಿಕೊಳ್ಳಬಹುದು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ತಮ್ಮ ಪತ್ರಿಕೆಗಳ ಮೂಲಕ ಸಮಾಜವನ್ನು ಕಟ್ಟುವ, ಈ ದೇಶವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಲೇಖಕರು, ಹೋರಾಟಗಾರರು ಆಗಿದ್ದರು.
ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳ ಇದೆ. ವರ್ತಮಾನದಲ್ಲಿ ಹಣಕ್ಕಾಗಿ ಸುಳ್ಳು ಸುದ್ದಿ, ಪ್ರಯೋಜಿತ ಸುದ್ದಿಗಳು ಹೆಚ್ಚಾಗುತ್ತಿವೆ. ದುಡ್ಡಿಗಾಗಿಯೇ ಪತ್ರಿಕೋದ್ಯಮ ಎಂಬಂತಾಗಿದೆ ಇಂದಿನ ಪರಿಸ್ಥಿತಿ.
ದೆಹಲಿ ವಿವಿಯಲ್ಲಿ ಪತ್ರಕೋದ್ಯಮ ಪದವಿ ಪಡೆದ ನನಗೆ ಪತ್ರಕರ್ತ ಆಗಬೇಕೆಂಬ ಹುಚ್ಚು ಹಿಡಿಯಿತು. ಈ ಹುಚ್ಚು ಹಿಡಿಯದಿದ್ದರೆ ಬಹುಶಃ ನಾನು ಪತ್ರಕರ್ತ ಆಗುತ್ತಿರಲಿಲ್ಲ ಎನಿಸುತ್ತದೆ. ಈ ಜೊತೆಗೆ ರಾಜಕೀಯವನ್ನೂ ಮಾಡುತ್ತಾ ಬಂದೆ. ಒಬ್ಬ ರಾಜಕಾರಣಿಗೆ ಪತ್ರಿಕೆ ತರುವ ಹಾಗೂ ಬರವಣಿಗೆ ಬರೆಯುವಂತಹ ಅಭಿರುಚಿ ಕೂಡ ಇರಬೇಕು.
ಇಂದಿನ ದಿನಗಳಲ್ಲಿ ಈ ರೀತಿಯ ಅಭಿರುಚಿಯನ್ನು ಕಾಣಲು ಸಾಧ್ಯವಿಲ್ಲ. ಇಂದು ಬಹಳಷ್ಟು ರಾಜಕಾರಣಿಗಳು ಒಂದು ಪತ್ರ ಬರೆಯುವ ಬೌದ್ಧಿಕ ಸ್ಥಿತಿಯನ್ನೆ ಹೊಂದಿಲ್ಲ, ಅಂತಹದ್ದರಲ್ಲಿ ಪತ್ರಿಕೆಯನ್ನು ಇನ್ನೆಲ್ಲಿ ತರುತ್ತಾರೆ.
ಪ್ರಸ್ತುತ ರಾಜಕೀಯ, ರಾಜಕಾರಣಿಗಳು, ಸಮಾಜ ಶುದ್ಧವಾಗಿದೆಯೆ? ಎಲ್ಲವೂ ಕಲುಷಿತವಾಗಿರುವುದನ್ನು ನಾವೀಂದು ಕಾಣುತ್ತಿದ್ದೇವೆ. ಹಾಗಾದರೇ ಈ ಕಲುಷಿತ ಅವ್ಯವಸ್ಥೆಯನ್ನು ಶುದ್ಧಿಕರಿಸಿ ಕೊಳೆ ತೆಗೆಯುವುದು ಹೇಗೆ? ವಸ್ತು ಸ್ಥಿತಿಯನ್ನು ಜನರಿಗೆ ಮುಟ್ಟಿಸಬೇಕಲ್ಲ.
ಅದಕ್ಕಾಗಿ ಈ ಸಮಾಜಕ್ಕೆ ಪತ್ರಕರ್ತರು, ಲೇಖಕರು, ಸಾಹಿತಿಗಳು, ಬರಹಗಾರರ ಅಗತ್ಯವಿದೆ. ಹಣ ಮಾಡುವ ಉದ್ದೇಶದಿಂದ ಯಾರೂ ಸಹ ಪತ್ರಿಕೋದ್ಯಮಕ್ಕೆ ಬಾರಬಾರದು, ನಡೆಸಲೂ ಬಾರದು. ಪತ್ರಿಕೋದ್ಯಮ ಎಂಬುದು ಸುಲಭದ ಹಾದಿಯಂತೂ ಅಲ್ಲ, ಅದು ಮುಳ್ಳಿನಹಾದಿ ಎಂದು ಡಿ.ಎಸ್.ವೀರಯ್ಯ ಅವರು ತಮ್ಮ ಸುಧೀರ್ಘ ಪತ್ರಿಕಾ ಅನುಭವಗಳನ್ನು ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಇದು ಪತ್ರಿಕೋದ್ಯಮದ ಯುಗ :
ಪ್ರಜಾಪ್ರಗತಿ ಹಾಗೂ ಪ್ರಗತಿ ಟಿ.ವಿ ಸಂಪಾದಕರಾದ ಎಸ್.ನಾಗಣ್ಣ ಅವರು ಮಾತನಾಡಿ, ಪತ್ರಿಕೋದ್ಯಮ ಎಂಬುದು ಯಾವತ್ತು ನಮ್ಮ ಭಾವನೆಗಳಿಗೆ, ಆಲೋಚನೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವಂತಹದ್ದು. ಹಿಂದೆಲ್ಲಾ ಪತ್ರಿಕೆ ನಡೆಸುವವರು ಅದನ್ನು ಒಂದು ಉದ್ಯಮ ಎಂದು ಸಹ ಪರಿಗಣಿಸಿದ್ದರು. ಆದರೇ ಇಂದು ಈ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗಿಬಿಟ್ಟಿದೆ.
ದಿನಗಳೆದಂತೆ ಯಾವುದೇ ಒಂದು ವಿಚಾರವು ಆ ಹೊತ್ತಿನ ಪರಿಸ್ಥಿತಿ, ಆ ಹೊತ್ತಿನ ದಿನಮಾನಗಳಿಗೆ ಹೊಂದಿಕೊಂಡಂತೆ ನಮ್ಮ ಆಲೋಚನೆಗಳು ಯಾವುದೇ ಒಂದು ವಿಚಾರದ ಜೊತೆ ನಾವು ಅವುಗಳನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿರುತ್ತವೆ.
ಇಂದಿನ ದಿನಗಳಲ್ಲಿ ಯಾವುದೇ ಒಂದು ಸುದ್ದಿಯನ್ನು ಜನರಿಗೆ ಮುಟ್ಟಿಸುವ ಸಂದರ್ಭದಲ್ಲಿ ಇಂದು ಯುದ್ಧೋದ್ಯಮ, ಧರ್ಮೋದ್ಯಮ, ಕೈಗಾರಿಕೋದ್ಯಮ, ಪತ್ರಿಕೋದ್ಯಮ ಈ ರೀತಿ ಪ್ರಪಂಚವೇ ಸಕಲ ಉದ್ಯಮಯವೇ ಆಗಿದೆ.
ಹಿಂದೆ ನಿದ್ದೆ ಬಿಟ್ಟು ಕೆಲಸ ಮಾಡುತ್ತಿದ್ದರು :
ಈ ಹಿಂದೆ ಪತ್ರಿಕಾರಂಗವು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಕಾರ್ಯ ನಿರ್ವಹಿಸುತ್ತಿತ್ತು. ಒಂದು ಗುಣಮಟ್ಟದ ಸುದ್ದಿ ತಡವಾಗಿ ಬಂದಾಗ ಆ ಸುದ್ದಿ ಪ್ರಸಾರ ಆಗಲೇಬೇಕೆಂಬ ಉದ್ದೇಶ, ಬದ್ಧತೆಯಿಂದ ಬಹಳಷ್ಟು ಜನರು ಆಗ ಇಡೀ ರಾತ್ರಿ ನಿದ್ದೆ ಇಲ್ಲದೇ ಕೆಲಸ ಮಾಡಿದ ಉದಾಹರಣೆಗಳಿವೆ. ಇಂದು ಪತ್ರಿಕೋದ್ಯಮದಲ್ಲಿ ಈ ರೀತಿ ತನ್ನನ್ನು ತಾನು ತೊಡಗಿಸಿಕೊಳ್ಳವ ಎಷ್ಟು ಜನ ಸಿಗುತ್ತಾರೆ.
ಇಂತಹ ಸುದ್ದಿ ಬರಲೇಬೇಕು. ಈ ಸುದ್ದಿಯಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತದೆ, ಉತ್ತಮ ಸಂದೇಶ ಬೀರಿ ಸಮಾಜ ಮಾರ್ಪಾಟು ಆಗುತ್ತದೆ ಎಂಬ ಗುಣಾತ್ಮಕ ಉದ್ದೇಶಗಳು ಪತ್ರಿಕೆ ನಡೆಸುವವರಲ್ಲಿರಬೇಕು.
ಆದರೇ ಒಬ್ಬ ಪತ್ರಕರ್ತನನ್ನು ಉಳಿಸಿಕೊಂಡು ಹೋಗುವಂತದ್ದು ಪತ್ರಿಕೋದ್ಯಮಿಗೆ ಬಿಟ್ಟ ವಿಚಾರವಾಗಿರುತ್ತದೆ. ಪತ್ರಕರ್ತ ಮತ್ತು ಪತ್ರಿಕೋದ್ಯಮಿ ಇವರಿಬ್ಬರೂ ಸಮತೋಲನದಿಂದ ಸಮಾಜವನ್ನು ತಿದ್ದುವ ಪರಿಸ್ಥಿತಿ ಇವತ್ತಿದೆ ಎಂದು ಎಸ್.ನಾಗಣ್ಣ ಅವರು ಅಭಿಪ್ರಾಯಪಟ್ಟರು.
ಸಂವಾದದಲ್ಲಿ ಸಹ ಸಂಪಾದಕರಾದ ಟಿ.ಎನ್.ಮಧುಕರ್, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಬಿ.ಟಿ.ಮುದ್ದೇಶ್, ಪ್ರಾಧ್ಯಾಪಕರಾದ ಡಾ.ಯು.ಡಿ.ನಾಗೇಂದ್ರ, ಹಿರಿಯ ವರದಿಗಾರರಾದ ಸಾ.ಚಿ.ರಾಜಕುಮಾರ್,
ಹಿರಿಯ ವ್ಯವಸ್ಥಾಪಕ ಚಿಕ್ಕೀರಪ್ಪ, ಪಿಆರ್‍ಓ ರೇಣುಕಾಪ್ರಸಾದ್, ಪ್ರಗತಿ ಟಿವಿಯ ಹೇಮಂತ್ ಇತರರಿದ್ದರು. ಸಂವಾದದ ಬಳಿಕ ಪತ್ರಿಕಾಲಯ, ಟಿವಿ ಸ್ಟುಡಿಯೋ ವೀಕ್ಷಿಸಿದ ವಿದ್ಯಾರ್ಥಿಗಳು ಇಲ್ಲಿನ ವ್ಯವಸ್ಥಿತ ಕಾರ್ಯ ಚಟುವಟಿಕೆಗಳನ್ನು ಕಂಡು ಸಂತಸಪಟ್ಟರು.
– ನಿರೂಪಣೆ : ಎಸ್.ಹರೀಶ್‍ಆಚಾರ್ಯ, ಚಿದಾನಂದ್‍ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ