ಚಳ್ಳಕೆರೆ
ತಾಲ್ಲೂಕಿನ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ಪಾಲನಾಯಕಸ್ವಾಮಿ ದೇವರ ಎತ್ತುಗಳು ಸಹ ಕಳೆದ ಕೆಲವು ತಿಂಗಳುಗಳಿಂದ ಮೇವಿನ ಕೊರತೆಯಿಂದ ನಿಶಕ್ತವಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಕ್ಷೇತ್ರದ ಶಾಸಕ ಶ್ರೀರಾಮುಲುರವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೇವರ ಎತ್ತುಗಳಿಗೆ ತಕ್ಷಣವೇ ಎರಡು ಲೋಡ್ ಮೇವನ್ನು ಶಾಸಕರು ನೀಡಿರುತ್ತಾರೆ.
ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ.ಜಯಪಾಲಯ್ಯ, ಗ್ರಾಮಸ್ಥರು ದೇವರ ಎತ್ತುಗಳ ಮೇವು ಕುರಿತಂತೆ ಶಾಸಕ ಶ್ರೀರಾಮುಲುರವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ದೇವರ ಎತ್ತುಗಳ ಸಂರಕ್ಷಣೆಗಾಗಿ ಮೇವು ನೀಡುವಂತೆ ಮನವಿ ಮಾಡಿದರು. ಆದರೆ, ಶಾಸಕ ಶ್ರೀರಾಮುಲು ಬೇರೆ ಕಾರ್ಯದಲ್ಲಿ ನಿರತರಾಗಿದ್ದು, ಕೂಡಲೇ ಬೇಡರೆಡ್ಡಿಹಳ್ಳಿ ಗ್ರಾಮಕ್ಕೆ ಎರಡು ಲೋಡ್ ಹುಲ್ಲು ವಿತರಣೆ ಮಾಡುವಂತೆ ದೂರವಾಣಿ ಮೂಲಕ ತಿಳಿಸಿದ್ದು, ಒಂದು ಲೋಡ್ ಭತ್ತದ ಹುಲ್ಲನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಯಪಾಲಯ್ಯ ತಿಳಿಸಿದರು.
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳ ವಾಸ್ತವ ಸ್ಥಿತಿಯನ್ನು ಸಹ ಪತ್ರಿಕಾ ವರದಿ ಮೂಲಕ ತಿಳಿದಿದ್ದು, ಕೂಡಲೇ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದು, ಬೊಮ್ಮದೇವರಹಟ್ಟಿಗೂ ಸಹ ಎರಡ್ಮೂರು ದಿನಗಳಲ್ಲಿ ಒಂದು ಲೋಡ್ ಮೇವನ್ನು ನೀಡುವಂತೆ ಸೂಚಿಸಿದ್ದು, ಇಷ್ಟರಲ್ಲಿಯೇ ಅಲ್ಲಿಗೆ ತೆರಳಿ ಜಾನುವಾರುಗಳಿಗೆ ಮೇವು ವಿತರಿಸಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
