ಗಂಗಾವತಿ:
ಭತ್ತದ ನಾಡು ಗಂಗಾವತಿಯ ಆರಾಧ್ಯ ದೈವ ಶ್ರೀ ಶ್ರೀಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋ ತ್ಸವದ ಭಾಗವಾಗಿ ಇಂದು ಸಂಜೆ ನಡೆಯುವ ಜೋಡು ರಥೋತ್ಸವಕ್ಕೆ ಕ್ಷಣಗಣನೆ ಆರಂಭ ವಾಗಿದ್ದು, ಕೊನೆ ಕ್ಷಣದ ಸಿದ್ಧತೆಗಳು ಭರದಿಂದ ಸಾಗಿವೆ.
ಜಾತ್ರಾ ಮಹೋತ್ಸವದ ಭಾಗವಾಗಿ ಶ್ರೀ ಚನ್ನಬಸವ ಶಿವಯೋಗಿಗಳ ಪುರಾಣ ನಡೆಯುತ್ತಿದೆ. ಜೊತೆಗೆ ದೇವಸ್ಥಾನದಲ್ಲಿ ಕಳೆದ ಮೂರು ದಿನದಿಂದ ದಶಮಿ ದಂಡಿನ ಉತ್ಸವ, ಮುತ್ತಿನ ಅಡ್ಡಪಲ್ಲಕ್ಕಿ ಉತ್ಸವ, ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ಸೇರಿ ನಾನಾ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗುತ್ತಿವೆ. ಜೊತೆಗೆ ಮಹಾ ಶಿವಯೋಗಿಗಳ ಗದ್ದುಗೆಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ಶ್ರೀ ಚನ್ನಬಸವ ಶಿವಯೋಗಿಗಳ 80ನೇ ಮಹಾ ರಥೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಬರುವ ಭಕ್ತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆ ಶ್ರೀಮಠದ ಪಕ್ಕದಲ್ಲಿನ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ದಾಸೋಹ ಮಂಟಪ ಸಿದ್ಧಗೊಂಡಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
ರಥೋತ್ಸವದ ಹಿನ್ನೆಲೆ ಗಂಗಾವತಿ ಸುತ್ತಲಿನ ಗ್ರಾಮಗಳ ಭಕ್ತರು ಬುಧವಾರ ರಾತ್ರಿ ಯಿಂದಲೇ ಶ್ರೀಮಠದ ಕಡೆಗೆ ಹರಿದು ಬರುತ್ತಿದ್ದಾರೆ. ಚನ್ನಬಸವ ಶಿವಯೋಗಿಗಳ ಕರ್ತೃ ಗದ್ದುಗೆ ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಗಂಗೆ ಪೂಜೆ, ತೇರಿನ ಪೂಜೆ, ಮಡಿ ರಥೋತ್ಸವ ಹಾಗೂ ಸಂಜೆ ಜೋಡು ಮಹಾರಥೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಜಾತ್ರೋತ್ಸವದ ನಿಮಿತ್ತ ಬುಧವಾರ ಮಧ್ಯರಾತ್ರಿಯಿಂದಲೇ ತಾಲೂಕಿನ ಮರಳಿ, ಸಿದ್ದಾಪೂರ, ಕಾರಟಗಿ, ನರಸಾಪೂರ, ದಾಸನಾಳ, ಆಯೋದ್ಯೆ, ಕಂಪ್ಲಿ, ಹೇರೂರು, ಕೆಸರಹಟ್ಟಿ ಸೇರಿ ನಾನಾ ಗ್ರಾಮದಿಂದ ತಾತಾ ದರ್ಶನಕ್ಕೆ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುತ್ತಾರೆ. ಆಗಮಿಸುವ ಭಕ್ತರು ದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರ ಸೇವೆಯಲ್ಲಿ ಸಲ್ಲಿಸಿ, ಹರಕೆ ಅರ್ಪಿಸುತ್ತಾರೆ.
ಜಾತ್ರೆ ಹಿನ್ನೆಲೆ ನಡೆಯುವ ಮಹಾ ಪ್ರಸಾದಕ್ಕೆ ಗಂಗಾವತಿ ತಾಲೂಕಿನ ಕಾರಟಗಿ, ಆಚಾರ ನರಸ ಪೂರು, ಹಿರೇಬೆಣಕಲ್, ಮರಳಿ, ಹಿರೇಜಂತಕಲ್, ದಾಸನಾಳ, ಆಯೋದ್ಯೆ, ವೆಂಕಟಿಗಿರಿ, ಮರಳಿ, ಶ್ರೀರಾಮನಗರ, ಢಣಾಪೂರ ಸೇರಿದಂತೆ ನಾನಾ ಗ್ರಾಮಗಳ ಭಕ್ತರು ದವಸ ಧಾನ್ಯ ದೇಣಿಗೆ ರೂಪ ದಲ್ಲಿ ಮಠಕ್ಕೆ ಅರ್ಪಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ರೊಟ್ಟಿ, ಅಕ್ಕಿ, ಲಾಡು ಹಾಗೂ ನೂರಾರು ಕೆಜಿ ತರಕಾರಿಯನ್ನು ಭಕ್ತರು ಮಠಕ್ಕೆ ನೀಡಿದ್ದಾರೆ.
ಶ್ರೀ ಚನ್ನಬಸವ ಶಿವಯೋಗಿಗಳ 80ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ದಾಸೋಹ ಮಂಟಪ ಆರಂಭ ಮಾಡಲಾಗಿದೆ. ಸಾವಿರಾರು ಸಂಖ್ಯೆಯ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಯಾವುದೇ ಅವಘಡಕ್ಕೆ ದಾರಿ ಮಾಡಿ ಕೊಡದೆ ಮಠಕ್ಕೆ ಆಗಮಿಸಿ, ತಾತಾನ ದರ್ಶನ ಪಡೆದುಕೊಂಡು, ರಥೋತ್ಸವದಲ್ಲಿ ಭಾಗವಹಿಸ ಬೇಕು ಎಂದು ಮನವಿ ಮಾಡುತ್ತೇವೆ.








