ದಾವಣಗೆರೆ :
ಸಚಿವ ಮಾಧುಸ್ವಾಮಿ ಹಾಗೂ ಕನಕಗುರುಪೀಠದ ಸ್ವಾಮೀಜಿಗಳ ನಡುವಣ ಸಂಧಾನ ಸಭೆ ಯಶಸ್ವಿಯಾಗಿದೆ.
ಕುರುಬ ಸಮುದಾಯದ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹರಿಹರ ತಾಲೂಕಿನ ಬೆಳ್ಳೂಡಿಯ ಕನಕಗುರುಪೀಠದ ಶಾಖಾ ಮಠದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಈಶ್ವರಾನಂದ ಸ್ವಾಮೀಜಿ, ಸಚಿವ ಮಾಧುಸ್ವಾಮಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗೌಪ್ಯ ಸಭೆ ನಡೆಸಿದ್ದು, ಸಭೆ ಯಶಸ್ವಿಯಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, “ನನ್ನ ನಿಲುವು ಸ್ಪಷ್ಟ. ಕಾನೂನಾತ್ಮಕವಾಗಿ ಸಮಸ್ಯೆ ಇತ್ತು. ಕನಕ ವೃತ್ತಕ್ಕೆ ಹೆಸರಿಡಲು ಸಮ್ಮತಿ ನೀಡಲಾಗಿದೆ. ಸ್ವಾಮೀಜಿಗಳಿಗೆ ನಾನು ಯಾವುದೇ ಅವಮಾನ ಮಾಡಿಲ್ಲ. ಕೆಲವರು ನಾನು ಏಕ ವಚನದಲ್ಲಿ ಮಾತಾಡಿದ್ದೇನೆ ಎಂದು ಹಲವರು ಹೇಳಿದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಮಾತನಾಡಿದ್ದಕ್ಕೆ ನನ್ನ ಮನಸ್ಸಿಗೆ ಸಮಾಧಾನ ತಂದಿದೆ. ಕುರುಬ ಸಮಾಜಕ್ಕೆ ನಾನು ಆಭಾರಿಯಾಗಿದ್ದೇನೆ. ಮಠಕ್ಕೆ ಬರುವಾಗ ತುಮಕೂರು ಎಸ್ ಪಿ ಗೆ ಹೇಳಿ ಬಂದಿದ್ದೆ. ಸಂಪರ್ಕ ಕೊರತೆಯಿಂದ ಇಷ್ಟೆಲ್ಲಾ ನಡೆದಿದೆ. ಇದು ನಡೆಯಭಾರದಿತ್ತು ನಡೆದು ಹೋಗಿದೆ. ಮಠ, ಸಮಾಜಗಳನ್ನು ವಿರೋಧಿಸಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ನಾನು ಅಹಂಕಾರದಿಂದ ವರ್ತಿಸಿಲ್ಲ, ಘಟನೆಯಿಂದ ಸಾಕಷ್ಟು ನೊಂದಿದ್ದೇನೆ, ಬೇಸರವಾಗಿದೆ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕುರುಬ ಸಮುದಾಯದವರ ಬೇಡಿಕೆ ಇತ್ಯರ್ಥಗೊಂಡಿದೆ. ಹುಳಿಯಾರಿನ ಕನಕದಾಸ ವೃತ್ತದಲ್ಲಿ ನಾಮಫಲಕ ಹಾಕಲು ಒಪ್ಪಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿದ ನಿರಂಜನಾನಂದಪುರಿ ಸ್ವಾಮೀಜಿ, ಗೃಹ ಸಚಿವರು ಕರೆ ಮಾಡಿ ಹೇಳಿದ್ದಕ್ಕೆ ನಾವು ಸಭೆ ನಡೆಸಿದ್ದೇವೆ. ಸಚಿವ ಮಾಧುಸ್ವಾಮಿ ಅವರ ಮೇಲೆ ನಮಗೂ ಕೋಪವಿತ್ತು. ಗೃಹ ಸಚಿವರ ನೇತೃತ್ವದಲ್ಲಿ ನಡೆದ ಸಧಭೆಯಲ್ಲಿ ಮಾಧುಸ್ವಾಮಿ ಕಣ್ಣೀರು ಹಾಕಿದ್ದಾರೆ. ಹೀಗಾಗಿ ಅವರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ಕೈಬಿಡುವಂತೆ ನಿರಂಜನಾನಂದಪುರಿ ಸ್ವಾಮೀಜಿ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ