ಬೆಂಗಳೂರು :
ತೈಲ ಮಾರುಕಟ್ಟೆ ಕಂಪನಿಗಳು ಈ ತಿಂಗಳು ಕೂಡ ವಾಣಿಜ್ಯಾತ್ಮಕ ಎಲ್ಪಿಜಿ ಗ್ಯಾಸ್ ಬೆಲೆ ಹೆಚ್ಚಳ ಮಾಡಿವೆ. ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 61 ರೂ ಹೆಚ್ಚಳವಾಗಿದೆ. ಇದು ಸತತ ನಾಲ್ಕನೇ ತಿಂಗಳು ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಆಗಿರುವ ಹೆಚ್ಚಳ. ಅಕ್ಟೋಬರ್ನಲ್ಲಿ 1,818 ರೂ ಇದ್ದ ಇದರ ಬೆಲೆ ಈಗ 1,879 ರೂ ತಲುಪಿದೆ.
47.5 ಕಿಲೋ ತೂಕದ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 154 ರೂನಷ್ಟು ಹೆಚ್ಚಳವಾಗಿದೆ. ಇದರ ಒಂದು ಸಿಲಿಂಡರ್ ಬೆಲೆ 4,695 ರೂ ಆಗಿದೆ. ಇನ್ನು, ಐದು ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 15 ರೂನಷ್ಟು ಏರಿಕೆ ಆಗಿದೆ. ಆದರೆ, ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಗೃಹಬಳಕೆಯ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 805.50 ರೂ ಇದೆ. ಐದು ಕಿಲೋ ಗೃಹ ಬಳಕೆ ಸಿಲಿಂಡರ್ ಬೆಲೆ 300.50 ರೂನಲ್ಲಿ ಮುಂದುವರಿದಿದೆ.
ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಕೊನೆಯ ಬಾರಿ ಹೆಚ್ಚಳವಾಗಿದ್ದು 2023ರ ಮಾರ್ಚ್ ತಿಂಗಳಲ್ಲಿ. ಆಗ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,105 ರೂಗೆ ಏರಿತ್ತು. ಅದಾದ ಬಳಿಕ ವಿವಿಧ ಹಂತಗಳಲ್ಲಿ ಇಳಿಕೆಯಾಗಿ 805.50 ರೂಗೆ ಬಂದಿದೆ. ಆದರೆ, ಕಮರ್ಷಿಯಲ್ ಸಿಲಿಂಡರ್ಗಳ ಬೆಲೆ ಮಾತ್ರ ಬಹುತೇಕ ನಿರಂತರವಾಗಿ ಏರಿಕೆ ಆಗುತ್ತಿದೆ.