ಬೆಂಗಳೂರು : ಗ್ಯಾರೆಂಟಿ ಯೋಜನೆಗಳು ನಿಲ್ಲಲ್ಲ : ಸಿದ್ದರಾಮಯ್ಯ

ಬೆಂಗಳೂರು:

    ಮುಂದಿನ ಮೂರೂವರೆ ವರ್ಷ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗಿರಲಿದ್ದೇನೆ. ರಾಜ್ಯ ಸರ್ಕಾರ  ಸುಭದ್ರವಾಗಿರಲಿದೆ. ಗ್ಯಾರಂಟಿ ಯೋಜನೆಗಳು  ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ  ಘೋಷಿಸಿದ್ದಾರೆ.

    ಸಂಡೂರಿನಲ್ಲಿ ನಿನ್ನೆ ಚುನಾವಣಾ ಪ್ರಚಾರ ನಡೆಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಕೇಂದ್ರ ಬಿಜೆಪಿ ಸರ್ಕಾರ ಎಷ್ಟೇ ಕಷ್ಟ ಕೊಟ್ಟರೂ ನಾವು ಗ್ಯಾರಂಟಿಗಳನ್ನು ನಿಲ್ಲಿಸಲಿಲ್ಲ. ಮುಂದೆಯೂ ನಿಲ್ಲಿಸುವುದಿಲ್ಲ. ನಾವು ನುಡಿದಂತೆ ನಡೆದು ನಿಮ್ಮ ಎದುರಿಗೆ ನಿಂತು ಮತ ಕೇಳುತ್ತಿದ್ದೇವೆ. ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ ಎಂದರು. 

   ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಎಲ್ಲಾ ಹಣಕ್ಕೂ ಕೊಕ್ಕೆ ಹಾಕುತ್ತಾ ರಾಜ್ಯದ ಗ್ಯಾರಂಟಿಗಳನ್ನು ನಿಲ್ಲಿಸಲೇಬೇಕು ಎನ್ನುವ ರೀತಿಯಲ್ಲಿ ಪ್ರಧಾನಿ ಮೋದಿ ಅವರು ತೊಂದರೆ ಕೊಟ್ಟರು. ರಾಜ್ಯದಲ್ಲಿ ಭೀಕರ ಬರಗಾಲ ಇದ್ದಾಗಲೂ ರಾಜ್ಯದ ಪಾಲಿನ ಬರ ಪರಿಹಾರದ ಹಣ ಕೊಡಲಿಲ್ಲ. ನಾವು ಸುಪ್ರೀಂಕೋರ್ಟ್ ಗೆ ಹೋಗಿ ಬರ ಪರಿಹಾರ ಪಡೆದೆವು. ಮೋದಿ ಅವರು ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ, ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಹಸಿ ಹಸಿ ಸುಳ್ಳು ಹೇಳಿದರು. ಐದೂ ಗ್ಯಾರಂಟಿಗಳಿಗೆ ₹56 ಸಾವಿರ ಕೋಟಿ ತೆಗೆದಿರಿಸಿರುವುದು ಮಾತ್ರವಲ್ಲದೆ ಇತರೆ ಅಭಿವೃದ್ಧಿ ಕಾರ್ಯಗಳಿಗೂ 1.20 ಲಕ್ಷ ಕೋಟಿ ತೆಗೆದಿರಿಸಿದ್ದೀವಿ. ರಾಜ್ಯದ ಆರ್ಥಿಕತೆ ಈಗಲೂ ಪ್ರಗತಿಯಾಗುತ್ತಲೇ ಇದೆ ಎಂದರು.

   ಕೇಂದ್ರದಲ್ಲಿ 11 ವರ್ಷಗಳಿಂದ ಮೋದಿ ಅವರು ಪ್ರಧಾನಿ ಆಗಿದ್ದಾರೆ. ಇವತ್ತಿನವರೆಗೂ ಅವರು ಕೊಟ್ಟ ಭರವಸೆ ಈಡೇರಿಸಲಿಲ್ಲ. ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಎಂದು ಭಾಷಣದಲ್ಲಿ ಹೇಳಿದ್ದರು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಕಡಿಮೆಯಾದರೂ ಇಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಕಡಿಮೆ ಆಗಲಿಲ್ಲ. ರಸಗೊಬ್ಬರ, ಕಾಳು-ಬೇಳೆ ಸೇರಿ ಎಲ್ಲದರ ಬೆಲೆ ಗಗನಕ್ಕೇರಿತು. ವಿದೇಶದಿಂದ ಕಪ್ಪು ಹಣ ತರಲಿಲ್ಲ, ಜನರ ಖಾತೆಗೆ 15 ಲಕ್ಷ ಹಾಕಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಹೀಗೆ ನರೇಂದ್ರ ಮೋದಿ ಅವರ ಸಾಲು ಸಾಲು ಸುಳ್ಳುಗಳು ಈಗ ಜನರೆದುರು ಬಯಲಾಗಿವೆ.

   ಈಗ ಉಪಚುನಾವಣೆ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಭೇರಿ ಬಾರಿಸುತ್ತಾರೆ. ನಾನು ಮೂರೂ ಕ್ಷೇತ್ರಗಳಲ್ಲಿ ಓಡಾಡಿ ಬಂದಿದ್ದೇನೆ. ನನಗೆ ಆತ್ಮವಿಶ್ವಾಸ ಇದೆ. ಮೂರೂ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಕೃಷ್ಣಾನಗರ ಒಂದರಲ್ಲೇ ಕಾಂಗ್ರೆಸ್ಸಿಗೆ ನಾಲ್ಕು ಸಾವಿರ ಮತಗಳು ಲೀಡ್ ಬರಬೇಕು. ಇದು ಸಂತೋಷ್ ಲಾಡ್ ಅವರ ಊರು. ಲಾಡ್ ಅವರ ಮನೆಯೂ ಇಲ್ಲೇ ಇದೆ. ಸಂಡೂರು ಕಾಂಗ್ರೆಸ್ಸಿನ ಭದ್ರ ಕೋಟೆ. ತುಕಾರಾಮ್ ಅವರ ಜೊತೆ ಈಗ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿಕೊಂಡರೆ ಸಂಡೂರಿನ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದರು.

Recent Articles

spot_img

Related Stories

Share via
Copy link
Powered by Social Snap