ಲೀಡ್ಸ್:
ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿ ಮಿಂಚಿರುವ ನಾಯಕ ಶುಭಮನ್ ಗಿಲ್ ಗೆ ಐಸಿಸಿಯಿಂದ ದಂಡ ಶಿಕ್ಷೆಯ ಭೀತಿ ಎದುರಾಗಿದೆ. ಗಿಲ್ ಕಪ್ಪು ಬಣ್ಣದ ಸಾಕ್ಸ್ ಧರಿಸಿ ಬ್ಯಾಟಿಂಗ್ ನಡೆಸಿದ್ದು ಐಸಿಸಿ ನಿಯಮದ ಉಲ್ಲಂಘನೆ ಎನಿಸಿದೆ. ಐಸಿಸಿಯ(ICC) ವಸ್ತ್ರಸಂಹಿತೆ ನಿಯಮದ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರು ಬಿಳಿ, ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್‌ಗಳನ್ನು ಮಾತ್ರ ಧರಿಸಬೇಕು. ಉಳಿದಂತೆ ಯಾವುದೇ ಬಣ್ಣದ ಸಾಕ್ಸ್‌ಗಳನ್ನು ಬಳಸುವಂತಿಲ್ಲ. ಈ ನಿಯಮ ಉಲ್ಲಂಘಸಿರುವ ಗಿಲ್‌ಗೆ ಪಂದ್ಯ ಸಂಭಾವನೆಯ ಶೇ.10ರಿಂದ 20 ದಂಡ ಶಿಕ್ಷೆ ಎದುರಾಗುವ ಸಾಧ್ಯತೆ ಇದೆ.
ರೋಹಿತ್ ಶರ್ಮ ಅವರಿಂದ ತೆರವಾದ ಟೆಸ್ಟ್ ನಾಯಕನ ಸ್ಥಾನಕ್ಕೆ ಶುಭಮನ್ ಗಿಲ್ ಅವರನ್ನು ನೇಮಕ ಮಾಡಿದಾಗ ಗಿಲ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ವಿದೇಶಿ ನೆಲದಲ್ಲಿ ಉತ್ತಮ ದಾಖಲೆ ಹೊಂದಿರದಿದ್ದರೂ ನಾಯಕತ್ವ ವಹಿಸಿಕೊಂಡದ್ದು ತಪ್ಪು ಎಂದಿದ್ದರು. ಆದರೆ ಎಲ್ಲ ಟೀಕೆಗಳಿಗೆ ಗಿಲ್ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಉತ್ತರ ನೀಡಿದ್ದಾರೆ. ಅಮೋಘ ಶತಕ ಬಾರಿಸಿ ಮಿಂಚಿದ್ದಾರೆ. ಜತೆಗೆ ನಾಯಕನ ಜವಾಬ್ದಾರಿಯನ್ನೂ ತೋರಿಸಿಕೊಟ್ಟಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಗಿಲ್, ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ 56 ಎಸೆತಗಳಲ್ಲಿ ಅರ್ಧಶಕ ಪೂರ್ತಿಗೊಳಿಸಿದರು. ಇದಾದ ಬಳಿಕ ಕೊಂಚ ತಾಲ್ಮೆಯುತ ಬ್ಯಾಟಿಂಗ್ ನಡೆಸಿ 140 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಸದ್ಯ 127 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಜತೆಗಾರ ರಿಷಭ್ ಪಂತ್ 65 ರನ್ ಗಳಿಸಿದ್ದಾರೆ. ದ್ವಿತೀಯ ದಿನದಾಟದಲ್ಲಿ ಪಂತ್‌ಗೂ ಶತಕ ಬಾರಿಸುವ ಅವಕಾಶವಿದೆ.
ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 85 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 359 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ.
