ತುಮಕೂರು:
ಅಗ್ನಿಬನ್ನಿರಾಯ ಸ್ವಾಮಿ ಜಯಂತ್ಯೋತ್ಸವದ ಅಂಗವಾಗಿ ಚಿತ್ರಬಿಡಿಸುವ ಸ್ಪರ್ಧೆಗೆ ಚಾಲನೆ
ಮಕ್ಕಳ ಕಲ್ಪನಾಶಕ್ತಿಯನ್ನು ಅಭಿವ್ಯಕ್ತಿಗೊಳಿಸಲು ಚಿತ್ರಕಲಾ ಒಂದು ಉತ್ತಮ ಮಾಧ್ಯಮ ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ನವದೆಹಲಿಯ ಕರ್ನಾಟಕ ಪ್ರತಿನಿಧಿ ಹಾಗೂ ಪತ್ರಿಕೋದ್ಯಮಿ ಎಸ್.ನಾಗಣ್ಣ ತಿಳಿಸಿದ್ದಾರೆ.
ನಗರದ ಹನುಮಂತಪುರದ ಶ್ರೀಕೋಲ್ಲಾಪುರದಮ್ಮ ಸಮುದಾಯ ಭವನದಲ್ಲಿ,ಮಾರ್ಚ 28ರಂದು ನಡೆಯುವ ಶ್ರೀಅಗ್ನಿಬನ್ನಿ ರಾಯಸ್ವಾಮಿ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಥಳದಲ್ಲಿಯೇ ಅಗ್ನಿಬನ್ನಿರಾಯಸ್ವಾಮಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡುತಿದ್ದ ಅವರು,ಮಕ್ಕಳ ಕಲ್ಪನಾಶಕ್ತಿಗೆ ಇಂದು ಅವರ ಮೂಡಿಸಿರುವ ಚಿತ್ರಗಳೇ ಸಾಕ್ಷಿ ಎಂದರು.
ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ನಾನು ಗಮನಿಸಿದಂತೆ ಆಗ್ನಿವಂಶ ಕ್ಷತ್ರೀಯ ತಿಗಳ ಸಮುದಾಯದ ಮುಖಂಡರು, ಹಿರಿಯರ ಜೊತೆಗೆ,ಕಿರಿಯರನ್ನು ಒಗ್ಗೂಡಿಸಿಕೊಂಡು,ಸಮುದಾಯದ ಸರ್ವತೋಮುಖ ಬೆಳೆವಣಿಗೆಗೆ ಹಗಲಿರುಳು ದುಡಿಯುತ್ತಿದ್ದಾರೆ.ದೇವಾಲಯ,ಸಮುದಾಯ ಭವನದ ಜೊತೆಗೆ, ಸಮುದಾಯ ಮಕ್ಕಳು ವಿದ್ಯಾವಂತರಾಗಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದ್ದು, ಇವರಿಗೆ ಸಹಕಾರಿಯಾಗಿ ಯೂತ್ ಪೊರ್ಸ್ ಸಹ ಕೆಲಸ ಮಾಡುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ
– ಎಸ್.ನಾಗಣ್ಣ
ಪ್ರಜಾಪ್ರಗತಿ ಸಂಪಾದಕರು
ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಸಿ.ನಂಜಯ್ಯ ಮಾತನಾಡಿ,ಮಕ್ಕಳು ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ ಬಣ್ಣ ಹಚ್ಚುವ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಈ ಸ್ಪರ್ಧೆಯಲ್ಲಿ ನಮಗೆ ಬಹುಮಾನ ಬರಲಿಲ್ಲವೆಂದು ನಿರಾಶರಾಗುವ ಅಗತ್ಯವಿಲ್ಲ.ನಿರಂತರ ಪ್ರಯತ್ನ ಮತ್ತು ಶ್ರದ್ದೆಯಿಂದ ಕಲಿತರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸಬಹುದು.
ಮಕ್ಕಳು ಪಠ್ಯದ ಜೊತೆಗೆ,ಪಠ್ಯೇತರ ಚಟುವಟಿಕೆಗಳಾದ ಕಲೆ,ಸಾಹಿತ್ಯ,ಸಂಗೀತ,ನೃತ್ಯ,ನಾಟಕಗಳಲ್ಲಿ ತೊಡಗಿಸಿ ಕೊಂಡರೆ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ.ಹಾಗಾಗಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸು ವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.
ಇಂದು ನಡೆದ ಶ್ರೀಅಗ್ನಿಬನ್ನಿರಾಯಸ್ವಾಮಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ನಂದಿನಿ. ಟಿ.ಎಸ್., ದ್ವಿತೀಯ ಬಹುಮಾನವನ್ನು ಅಕ್ಷತಾ, ತೃತೀಯ ಬಹುಮಾನವನ್ನು ಚಿನ್ಮಯಿ ಹಾಗೂ ಸಮಾಧಾನಕರ ಬಹುಮಾನವನ್ನು ಮೋನಿಷಾ .ಟಿ.ಎಂ ಮತ್ತು ದಿವ್ಯಶ್ರೀ ಅವರುಗಳು ಪಡೆದರು. ಬಹುಮಾನ ವಿಜೇತರಿಗೆ ಪ್ರಶಸ್ತಿ ಪತ್ರದ ಜೊತೆಗೆ, ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.ಭಾಗವಹಿಸಿದ್ದ 200ಕ್ಕೂ ಹೆಚ್ಚು ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರು ಹಾಗೂ ಚಿತ್ರಕಲಾ ಶಿಕ್ಷಕರಾದ ತಾರಕೇಶ್,ಸಿದ್ದರಾಜು,ಮಂಜುನಾಥ್ ಮತ್ತು ಕುಮಾರ್ ಅವರುಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.ವೇದಿಕೆಯಲ್ಲಿ ಸಮುದಾಯದ ಮುಖಂಡರಾದ ಕುಂಭಯ್ಯ, ಪ್ರೆಸ್ ರಾಜಣ್ಣ,ಯಜಮಾನರಾದ ಹನುಮಂತರಾಜು,ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಪೋರ್ಸ್‍ನ ಅಧ್ಯಕ್ಷ ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ