ಕಲಬುರಗಿ:
ಸೋಮವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾರೆ.
ಸರ್ಕಾರ 11 ಜನಪ್ರತಿನಿಧಿಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಲಾಗಿತ್ತು.
ಸದಸ್ಯರ ವಿವರ; ಕೂಡ್ಲಗಿ ಶಾಸಕ ಎನ್. ವೈ. ಗೋಪಾಲಕೃಷ್ಣ, ಅಳಂದ ಶಾಸಕ ಸುಭಾಷ್ ಗುತ್ತೇದಾರ್, ಶಹಾಪುರ ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ, ಬೀದರ್ ದಕ್ಷಿಣದ ಶಾಸಕ ಬಂಡೆಪ್ಪ ಕಾಶೆಂಪುರ, ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ,
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್, ಯಾದಗಿರಿ ಶಾಸಕ ವೆಂಕಟ ರೆಡ್ಡಿ ಮತ್ತು ಎಂಎಲ್‌ಸಿಗಳಾದ ಬಿ. ಜಿ. ಪಾಟೀಲ್ ಮತ್ತು ರಘುನಾಥ ರಾವ್ ವಲ್ಕಾಪುರೆ ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ ಸದಸ್ಯರಾಗಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಕೊಪ್ಪಳ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಜಿಲ್ಲೆಗಳು ಬರುತ್ತವೆ. ಸಂವಿಧಾನದ 371 ಜೆ ಕಲಂ ಅಡಿಯಲ್ಲಿ ಈ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.
ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕೇಂದ್ರ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ 2013ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಕಲಂ ಅಡಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಗೆ ಒಪ್ಪಿಗೆ ನೀಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯಪತ್ರ ಅಧಿಸೂಚನೆಯನ್ನು 6/11/2013ರಲ್ಲಿ ಹೊರಡಿಸಿತು. ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಯಿತು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು 7/9/2019 ರಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಲಾಯಿತು. ಈ ಮಂಡಳಿ ವ್ಯಾಪ್ತಿಗೆ 42 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಕೊಪ್ಪಳ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳು ಇದ್ದವು. ಕರ್ನಾಟಕದಲ್ಲಿ ನೂತನವಾಗಿ ರಚನೆಯಾದ 31ನೇ ಜಿಲ್ಲೆ ವಿಜಯನಗರ ಸಹ ಬಳಿಕ ಸೇರ್ಪಡೆ ಮಾಡಲಾಯಿತು.
ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿದ್ದ ವಿಜಯನಗರವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸೇರಿಸಲು 2021ರ ಫೆಬ್ರವರಿಯಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು.
ಸದ್ಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 7 ಜಿಲ್ಲೆಗಳಿವೆ. ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ವಲಯಗಳಲ್ಲಿ ಈ ಏಳು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಸಿಗಲಿದೆ.
ವಿಜಯನಗರವನ್ನು ಸೇರಿಸುವಾಗ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನಿಯಮಗಳಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯನ್ನು ಕೊಪ್ಪಳ ಮತ್ತು ವಿಜಯನಗರ ಎಂದು. ರಾಯಚೂರು ಜಿಲ್ಲೆಯನ್ನು ರಾಯಚೂರು ವಿಜಯನಗರ ಎಂದು ಬದಲಾವಣೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
