ಅನುದಾನದ ಬಳಕೆ ಟ್ರ್ಯಾಕ್‌ ಮಾಡಲು ಮುಂದಾದ ಸರ್ಕಾರ ….!

ಬೆಂಗಳೂರು

      ರಾಜ್ಯಾದ್ಯಂತ ಪರಿಶಿಷ್ಟರ ಕಲ್ಯಾಣಕ್ಕೆ ಒದಗಿಸಲಾದ ಹಣ ಹೇಗೆ ಬಳಕೆಯಾಗಿದೆ ಎಂಬುದನ್ನು ಪರಿಶೀಲಿಸಲು ಮುಂದಾಗಿರುವ ಸರ್ಕಾರ,ಈ ಸಂಬಂಧ ಉನ್ನತ ಮಟ್ಟದ ಸಂಸ್ಥೆಗಳಿಂದ ಮೌಲ್ಯಮಾಪನ ಮಾಡಿಸಲು ನಿರ್ಧರಿಸಿದೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಈ ವಿಷಯ ತಿಳಿಸಿದರು.

     ಎಸ್.ಸಿ.ಪಿ-ಟಿ.ಎಸ್.ಪಿ ಕಾಯ್ದೆಯಡಿ ಪರಿಶಿಷ್ಟ ಜಾತಿ,ವರ್ಗಗಳಿಗೆ ಇದುವರೆಗೆ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದ್ದು,ಈ ಹಣ ಸಮರ್ಪಕವಾಗಿ ಬಳಕೆಯಾಗಿದೆಯೋ ಇಲ್ಲವೋ ಎಂಬ ಅನುಮಾನವನ್ನು ದೂರ ಮಾಡಲು ಈ ತೀರ್ಮಾನಕ್ಕೆ ಬರಲಾಗಿದೆ ಎಂದರು. ಸರ್ಕಾರದ ಮೂವತ್ತೆದು ಇಲಾಖೆಗಳ ಮೂಲಕ ಈ ಹಣವನ್ನು ಬಳಕೆ ಮಾಡಲಾಗಿದ್ದು ಆಗಿರುವ ಕೆಲಸದಿಂದ ಪರಿಶಿಷ್ಟ ಜಾತಿ,ವರ್ಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಎಷ್ಟರ ಮಟ್ಟಿಗೆ ನೆರವಾಗಿದೆ ಎಂಬುದನ್ನು ಈ ಮೌಲ್ಯಮಾಪನದ ಮೂಲಕ ನಿರ್ಧರಿಸಬಹುದು.

ಹೀಗಾಗಿ ಬಳಕೆಯಾದ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಹೇಗೆ ಬಳಕೆ ಮಾಡಲಾಗಿದೆ?ಎಂಬುದನ್ನು ಮೌಲ್ಯಮಾಪನ ಮಾಡಲು ಐಸಾಕ್,ಕೆಇಎ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.

ಈ ಮೌಲ್ಯಮಾಪನ ಕಾರ್ಯವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ ಸರ್ಕಾರಕ್ಕೆ ನೀಡುವಂತೆ ಸೂಚಿಸಲಾಗಿದ್ದು,ಈ ಮೌಲ್ಯಮಾಪನದ ವರದಿಯ ಆಧಾರದ ಮೇಲೆ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಬಯಸಲಾಗಿದೆ ಎಂದರು.

ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣವನ್ನು ಬೇರೆ ಕಡೆ ವರ್ಗಾಯಿಸುವಂತಿಲ್ಲವಾದರೂ ಅನಿವಾರ್ಯ ಸಂದರ್ಭಗಳಲ್ಲಿ ಸೆಕ್ಷನ್ 7 ಡಿ ಅಡಿ ವರ್ಗಾವಣೆ ಮಾಡಲಾಗುತ್ತಿತ್ತು.ಆದರೆ ಈ ಸೆಕ್ಷನ್ನನ್ನು ತೆಗೆದು ಹಾಕಲು ತೀರ್ಮಾನಿಸಲಾಗಿದ್ದು ಬೆಳಗಾವಿ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗುವುದು ಎಂದರು.

ಈ ಹಿಂದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೆಕ್ಷನ್ 7 ಡಿ ಯನ್ನು ಬಳಸಿಕೊಂಡು ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣದಲ್ಲಿ 10 ಸಾವಿರ ಕೋಟಿ ರೂಪಾಯಿಗಳನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗ ಮಾಡಿತ್ತು ಎಂದು ನುಡಿದರು. ಕಳೆದ ಸಾಲಿನಲ್ಲಿ ಕಾಯ್ದೆಯಡಿ ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣದಲ್ಲಿ ಶೇಕಡಾ 76 ರಷ್ಟು ಹಣವನ್ನು ವೆಚ್ಚ ಮಾಡಲಾಗಿತ್ತಾದರೆ,ನಾವು ಅಧಿಕಾರಕ್ಕೆ ಬಂ ನಂತರ ಈ ವರ್ಷ ಶೇಕಡಾ 78 ರಷ್ಟು ಹಣವನ್ನು ವೆಚ್ಚ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರ ನೀಡಿದರು.

ಈ ವರ್ಷ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದ್ದು ನಿಗದಿತ ಅವಧಿಯೊಳಗಾಗಿ ಈ ಹಣವನ್ನು ವೆಚ್ಚ ಮಾಡಲಾಗುವುದು ಎಂದರು. ಈ ಮಧ್ಯೆ ರಾಜ್ಯದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿಲ್ಲದ ಪರಿಶಿಷ್ಟರಿಗೆ ಸರ್ಕಾರದ ವೆಚ್ಚದಲ್ಲೇ ಸದಸ್ಯತ್ವ ಒದಗಿಸಿ ಕೊಡಲು ಸೂಚನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ರಾಜ್ಯಾದ್ಯಂತ ಪರಿಶಿಷ್ಟ ಜಾತಿ,ಪಂಗಡದ ಸುಮಾರು ಹದಿನೈದು ಲಕ್ಷ ಮಂದಿ ವ್ಯವಸಾಯ ಭೂಮಿ ಹೊಂದಿದ್ದರೂ ಶೇಕಡಾ ಐವತ್ತರಷ್ಟು ಮಂದಿಯ ಭೂಮಿಗೆ ಪೋಡಿ ಸಿಕ್ಕಿಲ್ಲ ಎಂದ ಅವರು,ಇದೇ ಕಾರಣಕ್ಕಾಗಿ ಅವರಿಗೆ ಪ್ರಧಾನಮಂತ್ರಿಗಳ ಫಸಲ್ ಭಿಮಾ ಯೋಜನೆಯ ಸೌಲಭ್ಯ ಸೇರಿದಂತೆ ಸರ್ಕಾರಗಳ ಹಲವು ಸವಲತ್ತುಗಳು ಸಿಗುತ್ತಿಲ್ಲ ಎಂದು ವಿಷಾದಿಸಿದರು. ಇದೇ ಕಾರಣಕ್ಕಾಗಿ ಪೋಡಿ ಮಾಡಿಸಿಕೊಂಡಿರದ ದಲಿತರಿಗೆ ತಕ್ಷಣ ಪೋಡಿ ಮಾಡಿಸಿಕೊಡಲು ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರ ನೀಡಿದರು.

ಸರ್ಕಾರದ ಹದಿನಾಲ್ಕು ಇಲಾಖೆಗಳು ರಾಜ್ಯದ ವಿವಿಧೆಡೆ ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣವನ್ನು ಬಳಸಿಕೊಂಡು ಇತರ ಕೆಲಸಗಳನ್ನು ಮಾಡಿವೆ.ಮತ್ತು ಪರಿಶಿಷ್ಟರಿಗಾಗಿ ಮಾಡಿದ ಕೆಲಸ ಎಂದು ಲೆಕ್ಕ ತೋರಿಸಿವೆ ಎಂದು ನುಡಿದ ಸಚಿವ ಮಹದೇವಪ್ಪ,ಈ ಕುರಿತು ಮೌಲ್ಯಮಾಪನ ಮಾಡಿ ವರದಿ ನೀಡಲು ಸೂಚಿಸಲಾಗಿದೆ ಎಂದರು.

    ಇದೇ ರೀತಿ ಜಲಜೀವನ್ ಮಿಷನ್ ಅಡಿ ರಾಜ್ಯದ ಮೂವತ್ತು ಲಕ್ಷ ಪರಿಶಿಷ್ಟ ಕುಟುಂಬಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆ ಎಂದು ಇಂದಿನ ಸಭೆಯಲ್ಲಿ ವರದಿ ನೀಡಲಾಗಿದೆ.ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದೆ ಎಂಬ ಸಂಬಂಧ ಮೌಲ್ಯಮಾಪನ ವರದಿ ನೀಡಲು ಸೂಚಿಸಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link