ಮೈಸೂರು:
ಬರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನ ಬಿರುಸಿನ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
ಬರ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯುವತ್ತ ಗಮನ ಹರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು. ಬರ ಪರಿಹಾರ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಆರೋಪದ ಕುರಿತು ಪ್ರತಿಕ್ರಿಯಿಸಿ ಬರ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುದಾನ ನೀಡುವುದು ಎರಡನೇ ಹಂತ. ಮೊದಲ ಹಂತದಲ್ಲಿ ನೀವೇನು ಮಾಡಿದ್ದೀರಿ? 900 ಕೋಟಿ ರು. ಇಟ್ಟುಕೊಂಡು ಪೂಜೆ ಮಾಡುತ್ತೀರ? ಮೇವು, ನೀರಿಗೆ ಬಿಟ್ಟು ಬೇರೆ ಯಾವುದಕ್ಕೇ ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ತಮ್ಮ ಪಕ್ಷದ ನಾಯಕರ ಧೋರಣೆಗೆ ಮನನೊಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಒಬ್ಬ ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿ ಹೀಗಾದಾಗ ಬೇರೆಯವರ ಗತಿ ಏನು? ಈಗಿನ ಸರ್ಕಾರದಲ್ಲಿ ಶಾಸಕರಿಗೆ ಬೆಲೆ ಎಷ್ಟಿದೆ ಎಂದು ನಾನು ಹೇಳಬೇಕಿಲ್ಲ. ರಾಯರೆಡ್ಡಿ, ಶ್ಯಾಮನೂರು ಶಿವಶಂಕರಪ್ಪ ಮತ್ತೀಗ ಬಿ.ಆರ್. ಪಾಟೀಲ ಮನನೊಂದು ಮಾತನಾಡಿದ್ದಾರೆ. ಈ ಅಸಮಾಧಾನಗಳನ್ನು ಸರ್ಕಾರ ಸರಿಪಡಿಸಿಕೊಳ್ಳದೇ ಹೋದರೆ ಅದೇ ತಿರುಗುಬಾಣವಾಗಲಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪ ನಿಜ. ಕಾಂಗ್ರೆಸ್‌ನವರು ಬಿಜೆಪಿಯ ಶೇ 40 ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಧಿಕಾರ ಹಿಡಿದರು. ಈಗ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಆಗಿದ್ದ ಹಲವು ಟೆಂಡರ್‌ಗಳನ್ನು ಈಗಿನ ಸರ್ಕಾರ ಕಮಿಷನ್ ಸಲುವಾಗಿ ತಡೆ ಹಿಡಿದಿದೆ ಎಂದು ದೂರಿದರು.
ಭ್ರಷ್ಟಾಚಾರ ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಶೇ 40 ಕಮಿಷನ್ ಬಗ್ಗೆ ಒಂದು ವರ್ಷವಿಡೀ ತಮಟೆ ಹೊಡೆದ ಇವರು ಯಾವುದಾದರೂ ಒಂದು ಆರೋಪವನ್ನು ರುಜುವಾತು ಪಡಿಸಿದ್ದಾರ? ಇಂತಹ ಕಮಿಷನ್ ಹಣದ ವ್ಯವಹಾರಕ್ಕೆ ಸಾಕ್ಷಿ ಕೊಡಲು ಆಗುತ್ತಾ?ಹಣಕಾಸು ಅಕ್ರಮವನ್ನು ರುಜುವಾತು ಮಾಡಲು ಆಗದು. ಮೈಸೂರು ದಸರಾದಲ್ಲೇ 20 ಕೋಟಿ ಕಾಮಗಾರಿ ಗುತ್ತಿಗೆ ನೀಡಲು ಮೊದಲು ಒಬ್ಬರನ್ನು ಕರೆಯಿಸಿ ಶೇ 20 ಕಮಿಷನ್ ಕೇಳಿದ್ದರು. ಅವರು ಒಪ್ಪದ ಕಾರಣಕ್ಕೆ ಮತ್ತೊಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಇದನ್ನು ರುಜುವಾತು ಮಾಡಲು ಆಗುವುದಿಲ್ಲ ಎಂದರು.
ಮೈಸೂರು ಸುತ್ತಮುತ್ತ ಹೆಣ್ಣು ಭ್ರೂಣಹತ್ಯೆ ನಡೆದಿರುವುದು ಅಮಾನವೀಯ ವಿಚಾರ. ಇಷ್ಟು ವ್ಯಾಪಕವಾಗಿ ನಡೆದಿದ್ದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳ ಲೋಪ ಎದ್ದು ಕಾಣುತ್ತದೆ. ಈ ಪ್ರಕರಣದಲ್ಲಿ ಯಾರೇ ಭಾಗಿ ಆಗಿದ್ದರೂ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಪೋಷಕರು ಭ್ರೂಣಹತ್ಯೆಯಂತಹ ಪಾಪದ ಕಾರ್ಯದಲ್ಲಿ ಭಾಗಿ ಆಗಬಾರದು. ತಂದೆ–ತಾಯಿಗಳ ರಕ್ಷಣೆಯಲ್ಲಿ ಗಂಡಿಗಿಂತ ಹೆಣ್ಣು ಮಕ್ಕಳೇ ಹತ್ತು ಪಟ್ಟು ಮುಂದೆ ಇದ್ದಾರೆ ಎಂಬುದನ್ನು ನಾವು ಮರೆಯಬಾರದು ಎಂದರು. ಬೆಂಗಳೂರಿನಲ್ಲಿ ಮಕ್ಕಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿರುವುದು ಆಘಾತಕಾರಿ. ಈ ಬಗ್ಗೆ ಮುಕ್ತ ತನಿಖೆಗೆ ಸರ್ಕಾರ ಅಧಿಕಾರಿಗಳಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.