ಮಂಗಳೂರು : ಪಾಲಿಕೆಯಿಂದ “ಆಪರೇಷನ್‌ ಟೈಗರ್‌ “…!

ಮಂಗಳೂರು

     ಕಡಲನಗರಿ ಮಂಗಳೂರಿನಲ್ಲಿ ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಸ್ಥರ ಬದುಕಿನ ಬಂಡಿಯನ್ನು ಕ್ಷಣ ಮಾತ್ರದಲ್ಲಿ ನೆಲಸಮಗೊಳಿಸಿದೆ. ‘ಟೈಗರ್ ಆಪರೇಷನ್’ ಹೆಸರಿನಲ್ಲಿ ಬುಲ್ಡೋಜರ್​ಗಳ ಘರ್ಜನೆಗೆ ಬಡ ವ್ಯಾಪಾರಿಗಳ ಬದುಕು ಬರಿದಾಗಿದೆ. ಪರ ವಿರೋಧದ ಚರ್ಚೆಯ ನಡುವೆ ಮಹಾನಗರ ಪಾಲಿಕೆ ಮೆಗಾ ಆಪರೇಷನ್ ನಡೆಸಿದೆ. ಸತತ ಐದು ದಿನಗಳ ಬುಲ್ಡೋಜರ್ ಘರ್ಜನೆಯಿಂದ ನೂರಾರು ಬೀದಿ ಬದಿ ವ್ಯಾಪಾರಸ್ಥರು ಪತರುಗುಟ್ಟಿದ್ದಾರೆ.

    ಜನರ ಆರೋಗ್ಯ, ಸುಗಮ ಸಂಚಾರ, ಸ್ವಚ್ಛತೆಯನ್ನೇ ಆದ್ಯತೆಯನ್ನಾಗಿ ಮಾಡಿ ಮಂಗಳೂರು ಮಹಾನಗರ ಪಾಲಿಕೆ ಈ ಕಾರ್ಯಚರಣೆ ನಡೆಸಿದೆ. ಸಾಲು ಸಾಲು ಪ್ರತಿಭಟನೆ ಆಕ್ರೋಶಗಳು ವ್ಯಕ್ತವಾದರೂ ಮಹಾನಗರ ಪಾಲಿಕೆ ತನ್ನ ಪಟ್ಟು ಬಿಡದೆ ಕಾರ್ಯಾಚರಣೆನ್ನ ಯಶಸ್ವಿಯಾಗಿ ನಡೆಸುತ್ತಿದೆ.  

   ಟೈಗರ್ ಕಾರ್ಯಾಚರಣೆ ಮೂಲಕ ನಗರದ ಅಲ್ಲಲ್ಲಿ ತಲೆಎತ್ತಿರುವ ಫಾಸ್ಟ್ ಫುಡ್, ಜ್ಯೂಸ್, ಪಾನಿ ಪುರಿ, ಆಮ್ಲೆಟ್ ಅಂಗಡಿಗಳನ್ನು ತೆರವು ಮಾಡಲಾಗಿದೆ. ನಿಯಮ ಪ್ರಕಾರ, ಬೀದಿಬದಿ ವ್ಯಾಪಾರಿಗಳು ಶಾಶ್ವತ ಸಂರಚನೆಯ ಅಂಗಡಿಗಳನ್ನು ಮಾಡುವಂತಿಲ್ಲ. ತಳ್ಳು ಗಾಡಿಯ ಮೂಲಕ ವ್ಯಾಪಾರ ಮಾಡಬೇಕು. ಬೀದಿ ಬದಿ ಶಾಶ್ವತವಾಗಿ ಸಣ್ಣ ಅಂಗಡಿ ರೀತಿ ನಿರ್ಮಿಸಿ ವ್ಯಾಪಾರ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದಲ್ಲದೆ ಕೆಲವು ಅಂಗಡಿಯವರು ಸ್ವಚ್ಛತೆಯನ್ನು ಕಾಪಾಡದ ಹಿನ್ನಲೆ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ.

   ಅನಧಿಕೃತ ಅಂಗಡಿಗಳಿಂದಾಗಿ ಕಾನೂನು ಪ್ರಕಾರ ತೆರಿಗೆ ಕಟ್ಟಿ ವ್ಯಾಪಾರ ನಡೆಸುವವರಿಗೆ ನಷ್ಟವಾಗುತ್ತದೆ ಎಂಬುದು ಪಾಲಿಕೆಯವರ ವಾದ. ಇದಕ್ಕೆ ಸಾಕ್ಷಿ ಎನ್ನುವಂತೆ ಕಾರ್ಯಾಚರಣೆ ವೇಳೆ ಫಾಸ್ಟ್ ಫುಡ್ ಮಾರಾಟದ ಬೀದಿಬದಿ ಅಂಗಡಿಗಳು ಇದ್ದ ಸ್ಥಳದಲ್ಲಿ ಇಲಿ, ಹೆಗ್ಗಣ, ಅವಧಿ ಮೀರಿದ ಎಣ್ಣೆ, ಅಜಿನಮೋಟೋ ಬಳಸುತ್ತಿರುವುದು ಸಹ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾಹಿತಿ ನೀಡಿದ್ದಾರೆ.

   ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1045 ಬೀದಿಬದಿ ವ್ಯಾಪಾರಿಗಳಿದ್ದು, ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘ ಕಾರ್ಯಾಚರಿಸುತ್ತಿದೆ. ಆದರೆ ಪಾಲಿಕೆಯ ಬಿಜೆಪಿ ಆಡಳಿತ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ಬಡ ಬೀದಿ ಬದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯುತ್ತಿದೆ ಎಂಬ ಆರೋಪವನ್ನು ಸಂಘ ಮಾಡಿದೆ. ಹೀಗಾಗಿ ಈ ಕಾರ್ಯಾಚರಣೆ ಖಂಡಿಸಿ ಬುಧವಾರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ಮಾಡಿದೆ. 

   ಒಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಹಾಗೂ ಪಾಲಿಕೆ ನಡುವೆ ನಡೆಯುತ್ತಿರುವ ಈ ಸಂಘರ್ಷ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Recent Articles

spot_img

Related Stories

Share via
Copy link
Powered by Social Snap