ಬೆಂಗಳೂರು:
ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆ ಮುಂದಾಗಿದ್ದಾರೆ. ಜನವರಿ 20ರಿಂದ ಓಪಿಎಸ್ ಜಾರಿಗಾಗಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಚಳವಳಿಯನ್ನು ಆರಂಭಿಸಿದ್ದಾರೆ.
ಪತ್ರ ಚಳವಳಿ ಜ.31ರವರೆಗೆ ನಡೆಯಲಿದೆ. ಬೇಡಿಕೆ ಈಡೇರಿಸದಿದ್ದರೆ ಫೆಬ್ರವರಿ 7ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ ಹನುಮಂತಪ್ಪ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅನುದಾನಿತ ಮತ್ತು ಸರ್ಕಾರಿ ನೌಕರರುಗಳಿಗೆ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ದಿ:1.4.2006 ರಿಂದ ರದ್ದುಪಡಿಸಲಾಗಿದ್ದು, ಭವಿಷ್ಯದ ಬದುಕು ಅತಂತ್ರವಾಗಿದೆ. ಈ ಕುರಿತು ಕಳೆದ 15 ವರ್ಷಗಳಿಂದ ನಮ್ಮ ಸಂಘಟನೆ ಹಾಗೂ ರಾಜ್ಯ ಸರ್ಕಾರಿ NPS ನೌಕರರ ಸಂಘಟನೆ ಹೋರಾಟ ಮಾಡುತ್ತಾ ಬಂದಿದೆ. ಪ್ರಸ್ತುತ ಆಡಳಿತಾರೂಢ ಸರ್ಕಾರ ತನ್ನ ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ನಮಗೆ OPS ಭರವಸೆಯನ್ನ ನೀಡಿದೆ ಎಂದಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಮುಗಿಯುತ್ತಾ ಬಂದರೂ ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಇದೇ ಜನವರಿ 20 ರಿಂದ 31ನೇ ತಾರೀಕಿನ ತನಕ ಮುಖ್ಯಮಂತ್ರಿಗಳಿಗೆ ಪ್ರತಿಯೊಬ್ಬ ಅನುದಾನಿತ ಶಾಲಾ-ಕಾಲೇಜುಗಳ ಹಾಗೂ ಸರ್ಕಾರಿ NPS ನೌಕರರು ಪತ್ರವನ್ನು ಬರೆಯುವಂತೆ ವಿನಂತಿಸಿದ್ದಾರೆ.
ಆ ಬಳಿಕ ಫೆಬ್ರವರಿ 7ನೇ ತಾರೀಕು ರಾಜ್ಯ ಸರ್ಕಾರಿ NPS ನೌಕರರ ಸಂಘದ ನೇತೃತ್ವದಲ್ಲಿ ನಡೆಯುವ ಬೃಹತ್ ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಇದರಲ್ಲಿ ಎಲ್ಲಾ ಅನುದಾನಿತ ನೌಕರರು ತಪ್ಪದೆ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.