ಬೆಂಗಳೂರು:
ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಪಂಚೆ ಧರಿಸಿ ಬಂದಿದ್ದ ರೈತನ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಮಾಲ್‌ಗಳು ಮತ್ತು ಇತರ ಸಂಸ್ಥೆಗಳಿಗೆ ಈ ಸಂಬಂಧ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಈ ಘಟನೆಯ ನಂತರ ಜುಲೈ 18 ರಂದು ರಾಜ್ಯ ಸರ್ಕಾರ ಜಿ ಟಿ ವರ್ಲ್ಡ್ ಮಾಲ್ ಅನ್ನು ಏಳು ದಿನಗಳ ಕಾಲ ಬಂದ್ ಮಾಡಿತ್ತು. ಮಾಲ್ ನಲ್ಲಿ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಿದ ಘಟನೆ ಸದನದಲ್ಲಿ ಚರ್ಚೆಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರದಿಂದಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಸದನಕ್ಕೆ ತಿಳಿಸಿದರು.
ಪಂಚೆ ಉಟ್ಟುಕೊಂಡು ಬಂದವರಿಗೆ ಯಾವುದೇ ಮಾಲ್‍ಗಳಲ್ಲಿ ಪ್ರವೇಶ ನಿರಾಕರಣೆ ಮಾಡಬಾರದು. ರೈತರಿಗೆ ಪ್ರವೇಶ ನೀಡದ ಮಾಲ್‍ಗೆ ನೋಟೀಸ್ ನೀಡಲಾಗಿತ್ತು. ಆ ಮಾಲ್‍ನವರು ಕ್ಷಮೆ ಯಾಚಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದಾಗಿಯೂ ಹೇಳಿದ್ದಾರೆ. ಜತೆಗೆ ಮಾಲ್ನ ತೆರಿಗೆ ಬಾಕಿ ಇತ್ತು. ಆ ಬಾಕಿ ಪಾವತಿಗೆ ಚೆಕ್ ಪಡೆದು ಮಾಲ್ ತೆರೆಯಲು ಅನುಮತಿ ನೀಡಲಾಗಿದೆ ಎಂದರು.
‘ಪಂಚೆ'(ಧೋತಿ) ಇದು ನಮ್ಮ ಸಾಂಸ್ಕೃತಿಕ ಉಡುಗೆಯಾಗಿದೆ. ಈ ಘಟನೆಯ ನಂತರ, ಮಾಲ್ ಅಥವಾ ಇನ್ನಾವುದೇ ಸ್ಥಳವಾಗಿರಲಿ ಅದು ನಮ್ಮ ಸಂಸ್ಕೃತಿಯ ಭಾಗವೇ ಆಗಿರಲಿ. ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ನೀಡಲು ನಾವು ನಿರ್ಧರಿಸಿದ್ದೇವೆ” ಎಂದು ಡಿಸಿಎಂ ವಿಧಾನಸಭೆಗೆ ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಧ್ಯಪ್ರವೇಶಿಸಿ ಕ್ಲಬ್‍ಗಳಿಗೂ ಮಾರ್ಗಸೂಚಿ ತನ್ನಿ. ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯಬಾರದು ಎಂದರು. ಇದೆ ವೇಳೆ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಮಾತನಾಡಿ, ಕ್ಲಬ್ ವಿಚಾರವನ್ನು ಮಾಲ್‍ಗಳೊಂದಿಗೆ ಮಿಶ್ರ ಮಡುವುದು ಬೇಡ ಎಂದರು. ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮಾಲ್‍ಗೆ ಒಂದು ವಾರ ಬೀಗ ಹಾಕಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವರು ಹೇಳಿದ್ದರು. ಬೀಗ ಹಾಕಿಸಿದ್ದರಾ ಎಂದು ಪ್ರಶ್ನಿಸಿದರು.
ಆಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿ, ಮಾಲ್‍ಗೆ ಬೀಗ ಹಾಕಿಸಲಾಗಿತ್ತು ಎಂದರು. ಮತ್ತೆ ಅಶೋಕ್ ಮಾತನಾಡಿ, ಮಾಲ್‍ಗಳಿಗೆ ಪರವಾನಗಿ ಕೊಡುವಾಗಲೇ ಗ್ರಾಮೀಣ ಭಾಗದ ಉಡುಪು ಧರಿಸಿದವರಿಗೆ ಅವಕಾಶ ನಿರಾಕರಿಸಬಾರದು ಎಂಬ ಷರತ್ತು ವಿಧಿಸಬೇಕು. ಸರ್ಕಾರ ಜಮೀನು ಕೊಡುತ್ತದೆ. ಅನುಮತಿ ಕೊಟ್ಟಿರುವ ಕ್ಲಬ್‍ಗಳಿಗೂ ಇದು ಅನ್ವಯವಾಗಬೇಕು. ಈ ಸಂಬಂಧ ಎನ್. ಎ. ಹ್ಯಾರಿಸ್ ಮತ್ತು ಮಂಜು ಅಧ್ಯಕ್ಷತೆ ಸದನ ಸಮಿತಿಯ ವರದಿಗಳಿವೆ. ಆ ವರದಿಗಳ ಶಿಫಾರಸನ್ನು ಅನುಷ್ಠಾನಕ್ಕೆ ತನ್ನಿ ಎಂದು ಒತ್ತಾಯಿಸಿದರು.