ಬೆಂಗಳೂರು:
ಕಂದಾಯ ಇಲಾಖೆ ಶುದ್ಧೀಕರಣದ ಭಾಗವಾಗಿ ಆಯಕಟ್ಟಿನ ಜಾಗಗಳಲ್ಲಿ ಉಳಿದಿರುವ ಸಬ್ ರಿಜಿಸ್ಟ್ರಾರ್‌ಗಳ ಎತ್ತಂಗಡಿಗೆ ರಾಜ್ಯ ಸಚಿವ ಸಂಪುಟ ದಿಟ್ಟ ತೀರ್ಮಾನ ಕೈಗೊಂಡಿದೆ.
ಈ ಹುದ್ದೆಗಳ ಪೋಸ್ಟಿಂಗ್‌ನಲ್ಲಿ ಕೋಟ್ಯಾಂತರ ವ್ಯವಹಾರದ ದೊಡ್ಡ ದಂಧೆಯೇ ನಡೆಯುತ್ತಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಇದುವರೆಗೂ ನೇರವಾಗಿ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಮಾಡಲಾಗುತ್ತಿತ್ತು. ಇದನ್ನು ಬದಲಿಸಲಾಗಿದ್ದು, ಈಗಿನಿಂದಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ. ಅಕ್ರಮ ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವರ್ಗಾವಣೆಗೆ ಹೊಸ ನೀತಿ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಸುತ್ತಮುತ್ತ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗಳಲ್ಲಿ ಕಳೆದ 8 ವರ್ಷಗಳ ಅವಧಿಯಲ್ಲಿ 5 ವರ್ಷ ಉಪ ನೋಂದಣಾಧಿಕಾರಿ, ಹಿರಿಯ ಉಪ ನೋಂದಣಾಧಿಕಾರಿ, ಕೇಂದ್ರ ಕಚೇರಿ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಬಿಎಂಆರ್‌ಡಿಎ ವ್ಯಾಪ್ತಿಯ ಹೊರಗಿನ 10 ನಗರಸಭೆಗಳ ವ್ಯಾಪ್ತಿಯ ತಾಲೂಕುಗಳಲ್ಲಿ ಕಳೆದ 5 ವರ್ಷಗಳಲ್ಲಿ 4 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡುತ್ತಿರುವ ಈ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗುತ್ತಿದೆ.
ಭೂಮಿ ಮೌಲ್ಯ ದುಬಾರಿಯಾಗಿರುವ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಅಕ್ರಮ ಭೂ ದಂಧೆಯಲ್ಲಿ ಅಧಿಕಾರಿಗಳು ಶಾಮೀಲಾಗುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿವೆ. ನೋಂದಣಿ ಇಲಾಖೆ ವರ್ಗಾವಣೆಯಲ್ಲಿ ಪಾರದರ್ಶಕತೆಗಾಗಿ ಕೌನ್ಸೆಲಿಂಗ್ ಪದ್ಧತಿ ಜಾರಿ ಮಾಡಲು ಸಂಪುಟ ತೀರ್ಮಾನಿಸಿದ್ದು, ಅದಕ್ಕಾಗಿ ಈಗಾಗಲೇ ಹೊರಡಿಸಲಾಗಿರುವ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಯಲ್ಲಿ ಶೇಕಡಾವಾರು ಮಿತಿ ಮತ್ತು ಅವಧಿಯನ್ನು ಸಡಿಲಗೊಳಿಸಲು ನಿರ್ಣಯಿಸಲಾಗಿದೆ. ಆ.10ರವರೆಗೆ ಈ ವರ್ಗಾವಣೆಗಳು ನಡೆಯಲಿವೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಸಬ್ ರಿಜಿಸ್ಟ್ರಾರ್, ಹಿರಿಯ ಸಬ್ ರಿಜಿಸ್ಟ್ರಾರ್‌ಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಪ್ರಥಮ ದರ್ಜೆ ಸಹಾಯಕರ ವರ್ಗಾವಣೆಯನ್ನು ಮುಂದಿನ ವರ್ಷ ಮಾಡಲಾಗುವುದು. ಈ ಮೂಲಕ ಬಹಳ ವರ್ಷಗಳಿಂದ ಬೆಂಗಳೂರು ಸುತ್ತಮುತ್ತಲ ಕಚೇರಿಗಳಲ್ಲಿರುವ ಅಧಿಕಾರಿಗಳನ್ನು ಹೊರಗೆ ಕಳಿಸಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿನ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ದಿ ಸಹಾಯಕರು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ನಿಯಂತ್ರಣ ನಿಯಮಗಳು -2024ಕ್ಕೆ ಅನುಮೋದನೆ ನೀಡಲಾಗಿದೆ. ಕೌನ್ಸೆಲಿಂಗ್ ಮೂಲಕ ಈ ವರ್ಗಾವಣೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಪಂಚಾಯತ್‌ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವಹಿಸಲು ನ್ಯಾಯಮೂರ್ತಿ ಕೆ ಭಕ್ತವತ್ಸಲ ಆಯೋಗ ಮಾಡಿದ್ದ ಶಿಫಾರಸನ್ನು ಕೈಬಿಟ್ಟು, ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಲು ಸಂಪುಟ ನಿರ್ಧರಿಸಿದೆ.
ಅಂದರೆ ಪಂಚಾಯಿತಿಗಳ ಚುನಾವಣೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಗರಾಭಿವೃದ್ಧಿ ಇಲಾಖೆ ಮೂಲಕವೇ ನಿರ್ವಹಿಸುವ ವ್ಯವಸ್ಥೆ ಮುಂದುವರಿಯಲಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಡಿಸಿಎಫ್) ವೃಂದದ ಮುಂಬಡ್ತಿಗೆ ನಿಗದಿಪಡಿಸಿರುವ ಕನಿಷ್ಠ ಅರ್ಹತಾ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸುವ ಉದ್ದೇಶದ ತಿದ್ದುಪಡಿ ನಿಯಮಗಳಿಗೆ ಸಂಪುಟ ಅನುಮೋದನೆ ನೀಡಿತು. 50ಕ್ಕೂ ಹೆಚ್ಚು ಡಿಸಿಎಫ್ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಸಂಪುಟ ಈ ತೀರ್ಮಾನ ಮಾಡಿದೆ.
ಕರ್ನಾಟಕ ಗಣಿ ಪರಿಸರ ಪುನರ್ವಸತಿ ನಿಗಮದಿಂದ (ಕೆಎಂಇಆರ್‌ಸಿ) ಗಣಿಗಾರಿಕೆ ವಲಯದಲ್ಲಿ (ಸಿಇಪಿಎಂಐಝ್) ಸಮಗ್ರ ಪರಿಸರ ಯೋಜನೆಯಡಿ ಯೋಜನೆಗಳನ್ನು ಮಂಜೂರು ಮಾಡಲು ಮತ್ತು ಅನುಷ್ಠಾನಗೊಳಿಸಲು ಕೆಯುಐಡಿಎಫ್‌ಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲು ಮತ್ತು ಯೋಜನೆಗಳ ಅನುಷ್ಠಾನಕ್ಕಾಗಿ ಅಧಿಕಾರ ಸಮಿತಿಯನ್ನು ರಚಿಸಲು ಸಂಪುಟ ಅನುಮೋದನೆ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 563 ನಗರ ಆರೋಗ್ಯ ಕ್ಷೇಮ ಕೇಂದ್ರಗಳಿಗೆ (ನಮ್ಮ ಕ್ಲಿನಿಕ್) ಪ್ರಯೋಗಾಲಯಗಳನ್ನು ಬಲಪಡಿಸಲು 53.66 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಉಪಕರಣ, ಔಷಧ ಮತ್ತಿತರ ಸಾಮಗ್ರಿ ಖರೀದಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು.
ಆನೇಕಲ್, ಹೊಸಕೋಟೆ, ಖಾನಾಪುರ, ನೆಲಮಂಗಲ, ಶಿರಹಟ್ಟಿ, ಶೃಂಗೇರಿ ಮತ್ತು ಯಳಂದೂರು ತಾಲೂಕುಗಳ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 256.15 ಕೋಟಿ ರೂ. ವೆಚ್ಚ ಮಾಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿತು. ನಬಾರ್ಡ್ ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಪಡಿಸಲು ಒಟ್ಟು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ.
ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018-20 ದ್ವೈವಾರ್ಷಿಕ ಅವಧಿಗೆ ಪ್ರತಿ ಸಾವಿರ ರೂ.ಗೆ ಪ್ರತಿ ವರ್ಷಕ್ಕೆ 80 ರೂ. ಮಧ್ಯಂತರ ಲಾಭಾಂಶ ಘೋಷಣೆ ಮಾಡಲು ಸಂಪುಟ ನಿರ್ಧರಿಸಿತು.
ಒಳನಾಡು ಕೆರೆ, ಜಲಾಶಯಗಳಲ್ಲಿ ಮೀನು ಸಾಕಾಣಿಕೆ ಸಂಬಂಧ 2023 -24ನೇ ಸಾಲಿನಲ್ಲಿ ಟೆಂಡರ್/ಗುತ್ತಿಗೆ ನವೀಕರಿಸಿಕೊಂಡಿರುವರಿಗೇ ಮತ್ತೊಂದು ವರ್ಷ ಗುತ್ತಿಗೆ ಅವಧಿ ಮುಂದುವರಿಸಲು ಸಂಪುಟ ನಿರ್ಧರಿಸಿದೆ. 2,970 ಕೆರೆಗಳಲ್ಲಿ ಮೀನು ಕೃಷಿಕರು ಕಳೆದ ಸಾಲಿನಲ್ಲಿ ಗುತ್ತಿಗೆ ನವೀಕರಿಸಿಕೊಂಡಿದ್ದರು ಮತ್ತು ಸರಕಾರಕ್ಕೆ 22.06 ಕೋಟಿ ರೂ. ಗುತ್ತಿಗೆ ಮೊತ್ತ ಪಾವತಿಯಾಗಿತ್ತು.
ಇಂದಿರಾ ಕ್ಯಾಂಟೀನ್‌ಗಳ ಹೊಸ ಮೆನುವಿನಂತೆ ಅಡುಗೆ ಉಪಕರಣ ಹಾಗೂ ಪೀಠೋಪಕರಣಗಳನ್ನು ಖರೀದಿಸಲು ಒಟ್ಟು 84.58 ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.