ತುಮಕೂರು : ಪಂಚಾಯತ್ ಸ್ಪರ್ಧಿಗಳು ಹೈಜಾಕ್!!

ತುಮಕೂರು : 

      ಹಳ್ಳಿಗಳು ಉದ್ಧಾರವಾಗದ ಹೊರತು ಈ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಕನಸಾಗಿತ್ತು. ಇದನ್ನು ನನಸಾಗಿಸಲೆಂದೆ ಅಧಿಕಾರ ವಿಕೇಂದ್ರೀಕರಣಕ್ಕೆ ಗಮನ ಹರಿಸಲಾಯಿತು. ಹಳ್ಳಿಗಳು ಬಲವರ್ಧನೆಯಾಗಬೇಕಾದರೆ ಸ್ಥಳೀಯವಾಗಿ ಆಡಳಿತ ರೂಪುಗೊಳ್ಳಬೇಕು, ಆ ಆಡಳಿತವನ್ನು ಅಲ್ಲಿನ ಸ್ಥಳೀಯರೇ ನಡೆಸಬೇಕು ಎಂಬುದು ಮಹನಿಯರ ಮಹದಾಸೆ. ಇದಕ್ಕೆ ಪೂರಕವಾಗಿಯೇ ಗ್ರಾಮ ಸ್ವರಾಜ್ ಪರಿಕಲ್ಪನೆ ಜನ್ಮ ತಾಳಿತು.

      ಲೋಕಸಭೆ, ವಿಧಾನಸಭೆ ಇತ್ಯಾದಿ ಯಾವುದೇ ಚುನಾವಣೆಗಳು ನಡೆದರೂ ಪಕ್ಷದ ಚಿನ್ಹೆಗಳ ಅಡಿಯಲ್ಲಿಯೇ ನಡೆಯುತ್ತವೆ. ಆದರೆ ಗ್ರಾಮ ಪಂಚಾಯತಿ ಚುನಾವಣೆಗಳು ರಾಜಕೀಯ ಮುಕ್ತವಾಗಿಯೇ ಇರಬೇಕು ಎಂಬ ಮಹಾತ್ಮಗಾಂಧೀಜಿ ಮೊದಲಾದವರ ಆಶಯಗಳು ಪಂಚಾಯತ್ ರಾಜ್ ಅಧಿನಿಯಮದಡಿ ಸೇರಿಕೊಂಡಿವೆ. ಹಳ್ಳಿಗಳಿಗೆ ರಾಜಕೀಯ ಪ್ರವೇಶಿಸಬಾರದು, ಅವುಗಳು ನೆಮ್ಮದಿಯ ತಾಣಗಳಾಗಬೇಕು, ಅಲ್ಲಿನ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಬೇಕು ಎಂಬ ಮಹದಾಸೆಯಿಂದಲೇ ಪಂಚಾಯತ್ ರಾಜ್ ವ್ಯವಸ್ಥೆ ಜನ್ಮತಾಳಿತ್ತು.

      ಭಾರತದ ಸಂವಿಧಾನಕ್ಕೆ 73ನೇ ತಿದ್ದುಪಡಿ ಮಾಡಿ ಸಮಗ್ರ ಪಂಚಾಯತ್ ರಾಜ್ ಅಧಿನಿಯಮವನ್ನು 13.5.1993 ರಂದು ಜಾರಿಗೆ ತಂದ ಕೀರ್ತಿ ಕರ್ನಾಟಕಕ್ಕೆ ಸಲ್ಲಬೇಕು. ಅಂದಿನಿಂದ ಕರ್ನಾಟಕದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆಗಳ ಅನುಷ್ಠಾನಕ್ಕೆ ನಾಂದಿ ಹಾಡಲಾಯಿತು. ಅದರಂತೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ವಿಕಾಸಕ್ಕೆ ಅವಕಾಶ ಕಲ್ಪಿಸಲಾಯಿತು. 6000 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳನ್ನೊಳಗೊಂಡ ಕರ್ನಾಟಕ 6000 ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯತಿಯಂತೆ ಸ್ಥಾಪನೆ ಮಾಡಿತು.

      ಅಧಿಕಾರ ಕೇಂದ್ರೀಕೃತವಾಗಬಾರದು. ಸ್ಥಳೀಯರ ಕೈಗೂ ಅಧಿಕಾರ ಇರಬೇಕು ಎಂಬ ಯಾವ ಮಹತ್ವಾಕಾಂಕ್ಷೆಯಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತೋ ಅಂತಹ ವ್ಯವಸ್ಥೆಯೇ ಇದೀಗ ಸಡಿಲಗೊಳ್ಳತೊಡಗಿದೆ. ಹಳ್ಳಿಗಳಲ್ಲಿ ರಾಜಕೀಯ ಸುಳಿಯಬಾರದು ಎಂದು ಯಾವ ಮಹಾತ್ಮರು ಎಣಿಸಿದ್ದರೋ ಅವರ ಕನಸುಗಳಿಗೆ ಕೊಳ್ಳಿ ಇಡಲಾಗಿದೆ. ಇದುವರೆಗೆ ಪರೋಕ್ಷವಾಗಿ ಪಕ್ಷಗಳ ಬೆಂಬಲದೊಂದಿಗೆ ನಡೆಯುತ್ತಿದ್ದ, ರಾಜಕೀಯ ಮುಖಂಡರು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಗ್ರಾಮ ಪಂಚಾಯತಿ ಚುನಾವಣೆಗಳು ಈ ಬಾರಿ ಪ್ರತ್ಯಕ್ಷವಾಗಿಯೇ ಪಕ್ಷಗಳ ಅಡಿಯಲ್ಲಿ ಜರುಗುವಂತಾಗಿರುವುದು ಪಂಚಾಯತ್ ರಾಜ್ ವ್ಯವಸ್ಥೆಗೆ ಅಂಟಿದ ಕಳಂಕ.

      ಇಂತಿಷ್ಟು ಗ್ರಾಮ ಪಂಚಾಯತಿಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದು ಪಕ್ಷದ ಮುಖಂಡರೆ ಹೇಳುವಂತಾಗಿದೆ. ಅದೂ ಬಹಿರಂಗವಾಗಿ. ಪಂಚಾಯತ್ ರಾಜ್ ಕಾನೂನಿನ ಅಡಿ ಒಬ್ಬ ವ್ಯಕ್ತಿ ಪಂಚಾಯತ್ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸಬೇಕಾದರೆ ಪಕ್ಷದ ಚಿನ್ಹೆ ಬಳಸುವಂತಿಲ್ಲ. ಪಕ್ಷಗಳ –ರಾಜಕೀಯ ಮುಖಂಡರ ಭಾವಚಿತ್ರ ಪ್ರಕಟಿಸುವಂತಿಲ್ಲ. ಚುನಾವಣಾ ಆಯೋಗ ಇದನ್ನು ಹೇಳುತ್ತಲೇ ಬಂದಿದೆ. ಆದರೆ ಯಾವ ವ್ಯಕ್ತಿಯೂ ಪಕ್ಷ ರಾಜಕಾರಣದಿಂದ ಹೊರತಾಗಿಲ್ಲ. ಕಳೆದ ಒಂದು ತಿಂಗಳಿನಿಂದ ಅಭ್ಯರ್ಥಿಗಳಾಗಬಯಸುವವರು ರಾಜಕಾರಣಿಗಳ ಹಿಂದೆ ಅಲೆಯುತ್ತಲೇ ಬಂದರು. ಪಕ್ಷಗಳ ಮುಖಂಡರು ಸ್ಥಳೀಯರಿಗೆ ಗಾಳ ಹಾಕುವ ಪ್ರಯತ್ನದಲ್ಲಿ ನಿರತರಾದರು. ಇಂದು ಯಾವುದೇ ಹಳ್ಳಿಗೆ ಹೋದರೂ ಗ್ರಾಮ ರಾಜಕಾರಣ ಸೆಟೆದು ನಿಂತಿದೆ. ಎಲ್ಲ ಊರುಗಳಲ್ಲಿಯೂ ಮೂರು ಪಕ್ಷಗಳ ಗುಂಪುಗಾರಿಕೆ ಬಹಿರಂಗ ಸೆಣಸಾಟಕ್ಕೆ ಅಣಿಯಾಗಿದೆ. ಎಲ್ಲಿಯೂ ಅವಿರೋಧ ಆಯ್ಕೆ ಪ್ರಸ್ತಾಪಗಳೇ ಬರುತ್ತಿಲ್ಲ. ಅದಕ್ಕೆ ಪೂರಕ ವಾತಾವರಣವೂ ಇದ್ದಂತಿಲ್ಲ. ಹೀಗಾದರೆ ಗ್ರಾಮ ಸ್ವರಾಜ್ ಪರಿಕಲ್ಪನೆಗೆ ಅರ್ಥವೆಲ್ಲಿ? ಎಲ್ಲವೂ ರಾಜಕೀಯಕರಣಗೊಳ್ಳುತ್ತಿರುವಾಗ ಹಳ್ಳಿಗಳು ಕದನದ ಕುರುಕ್ಷೇತ್ರಗಳಾಗಿ ಮಾರ್ಪಡುತ್ತಿವೆ.

      ಗ್ರಾಮ ಪಂಚಾಯತಿ ಸದಸ್ಯನಾದವನಿಗೆ ಹೇಳಿಕೊಳ್ಳುವಂತಹ ವರಮಾನವೇನೂ ಇಲ್ಲ. ಆದರೂ ಸ್ಪರ್ಧಾಕಾಂಕ್ಷಿಗಳಿಗೆ ಕೊರತೆ ಇಲ್ಲ. ಕೆಲವರನ್ನು ಹೊರತುಪಡಿಸಿದರೆ ಉಳಿದಂತೆ ಬಹಳಷ್ಟು ಜನ ಗೌರವ ಧನಕ್ಕಷ್ಟೇ ಸೀಮಿತರಾಗಿದ್ದಾರೆ. ಒಬ್ಬ ಗ್ರಾಮ ಪಂಚಾಯತಿ ಸದಸ್ಯನ ಸಂಬಳ ತಿಂಗಳಿಗೆ 1000 ರೂ. ಅಧಿಕಾರದ ಅವಧಿ 5 ವರ್ಷ. ಅಂದರೆ, 60 ತಿಂಗಳು. ಆಗ ಸದಸ್ಯನ ಒಟ್ಟು ವೇತನ ಕೇವಲ 60 ಸಾವಿರ ರೂ. ಹೀಗಿರುವಾಗ ಇಂದಿನ ಸವಾಲಿನ ರಾಜಕೀಯ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಅಂತಹವರಿಂದ ಏನು ನಿರೀಕ್ಷಿಸಲು ಸಾಧ್ಯ? ಐದಾರು ಲಕ್ಷ ರೂ.ಗಳನ್ನು ಚುನಾವಣೆಯಲ್ಲಿ ಸುರಿದು ಗೆದ್ದು ಬಂದರೆ ಆತ ಭ್ರಷ್ಟಾಚಾರ ವಿರೋಧಿಯಾಗಿರುತ್ತಾನೆಂದು ಹೇಳಲು ಸಾಧ್ಯವೆ..? ಹಗರಣಗಳಲ್ಲಿ ಆತನೂ ಭಾಗಿದಾರನಾಗಲಾರ ಎಂದು ಹೇಗೆ ಹೇಳುವುದು?
ಗ್ರಾಮಗಳ ಚರಂಡಿಗಳು ಶುಚಿಯಾಗಿರಬೇಕು, ನೈರ್ಮಲ್ಯ, ರಸ್ತೆ, ಬೀದಿದೀಪ, ಕುಡಿಯುವ ನೀರು ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿಭಾಯಿಸಲೆಂದೆ ಗ್ರಾಮ ಪಂಚಾಯತಿಗಳಿಗೆ ಅನುದಾನ ಬರುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಾಲ್ಕು ಹಂತದ ಅನುದಾನಗಳನ್ನು ಒಂದು ಪಂಚಾಯತ್ ಒಳಗೊಂಡಿದೆ. ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನ ಪ್ರತಿ ಗ್ರಾಮ ಪಂಚಾಯತಿಗೆ ವಾರ್ಷಿಕವಾಗಿ 35 ರಿಂದ 40 ಲಕ್ಷ ರೂ.ಗಳು ಸಿಗುತ್ತದೆ. ಇದು ಆಯಾ ಪಂಚಾಯತಿಯ ಜನಸಂಖ್ಯೆಯನ್ನು ಆಧರಿಸಿರುತ್ತದೆ. 2015 ರಿಂದ ಜಾರಿಯಲ್ಲಿದ್ದ 14ನೇ ಹಣಕಾಸು ಆಯೋಗ ಈಗ 15ನೇ ಹಣಕಾಸು ಆಯೋಗ 2020 ರಿಂದ ಜಾರಿಯಲ್ಲಿದೆ ಪ್ರತಿ 5 ವರ್ಷಗಳಿಗೊಮ್ಮೆ ಇದು ಬದಲಾಗುತ್ತಿರುತ್ತದೆ. ರಾಜ್ಯ ಸರ್ಕಾರದ ಹಣಕಾಸು ವಾರ್ಷಿಕವಾಗಿ ಸುಮಾರು 10 ಲಕ್ಷ ರೂ.ಗಳಷ್ಟಿರುತ್ತದೆ. ಇದು ಶಾಸನಬದ್ಧ ಅನುದಾನವಾಗಿದ್ದು, ಗ್ರಾಮ ಪಂಚಾಯತಿಯ ನೌಕರ ಸಿಬ್ಬಂದಿ ವೇತನ ಮತ್ತು ವಿದ್ಯುಚ್ಛಕ್ತಿ ಬಳಕೆಗೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. 3ನೆಯದು ಗ್ರಾಮ ಪಂಚಾಯತಿಗಳ ಸ್ವಂತ ಆದಾಯ. ಅಂದರೆ, ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅಂಗಡಿ ಮಳಿಗೆಗಳಿಂದ ಬರುವ ಬಾಡಿಗೆ, ಸ್ಥಳೀಯವಾಗಿ ಸಂಗ್ರಹವಾಗುವ ತೆರಿಗೆ ಇತ್ಯಾದಿ. ನಾಲ್ಕನೆಯದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಬರುವ ಹಣ. ಉದಾಹರಣೆಗೆ: ಶೌಚಾಲಯ, ವಸತಿ ಇತ್ಯಾದಿ.

     ಇನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಷ್ಟು ಬೇಕಾದರೂ ಬಳಸಿಕೊಳ್ಳಲು ಅವಕಾಶವಿದೆ. ವಾರ್ಷಿಕವಾಗಿ ಸಾಮಾನ್ಯವಾಗಿ ಒಂದು ಪಂಚಾಯತಿ 2 ರಿಂದ ಎರಡೂವರೆ ಕೋಟಿ ರೂ.ಗಳವರೆಗೂ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಖರ್ಚು ಮಾಡಿರುವ ಉದಾಹರಣೆಗಳಿವೆ. ಕೆಲವು ಕಡೆ ಇನ್ನೂ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ. ಸ್ಥಳೀಯವಾಗಿ ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ದೊರಕಿಸುವ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಇದು. ಆದರೆ ಈ ಯೋಜನೆ ಭ್ರಷ್ಟಾಚಾರ ಕೂಪವಾಗಿ ಅದೆಷ್ಟೋ ಮಂದಿ ತಮ್ಮ ಜೇಬು ತುಂಬಿಸಿಕೊಂಡರು. ನಿಜವಾದ ಫಲಾನುಭವಿಗಳು ಈ ಯೋಜನೆಯ ಪಾಲುದಾರರಾಗಲು ಇನ್ನೂ ಸಾಧ್ಯವಾಗಿಲ್ಲ. ಇಂತಹ ಯೋಜನೆಗಳ ಪ್ರಯೋಜನವನ್ನು ಅರ್ಹರಿಗೆ ನೀಡುವ ಕಡೆಗೆ ಗ್ರಾ.ಪಂ.ಸದಸ್ಯರು ಮುಂದಾಗಬೇಕಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಭ್ರಷ್ಟಾಚಾರದ ವಿಷವರ್ತುಲದಲ್ಲಿ ಸಿಲುಕಿ ಈ ಯೋಜನೆಯು ಹಳ್ಳ ಹಿಡಿಯವಂತಾದದ್ದು ವಿಪರ್ಯಾಸ.

      ಇದೀಗ ಡಿ.22 ಹಾಗೂ 27 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆಯುತ್ತಿದೆ. ಸ್ಪರ್ಧಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಬಹಳಷ್ಟು ಸ್ಪರ್ಧಿಗಳಿಗೆ ಪಂಚಾಯತ್ ವ್ಯವಸ್ಥೆಯ ಪರಿಕಲ್ಪನೆಯೇ ಇಲ್ಲ. ನಾನೊಬ್ಬ ಪಂಚಾಯತ್ ಸದಸ್ಯ ಎಂಬ ಅರ್ಹತೆ ಪಡೆದರೆ ಸಾಕು ಎನ್ನುವವರೇ ಅಧಿಕವಾಗಿದ್ದಾರೆ. ಗೆದ್ದ ನಂತರ ಅಲ್ಲೇನಾದರೂ ಮಾಡಿಕೊಳ್ಳಲು ಸಾಧ್ಯವೆ ಎಂಬ ಲೆಕ್ಕಾಚಾರದಲ್ಲಿಯೂ ಕೆಲವರು ಸ್ಪರ್ಧೆಗಿಳಿಯುತ್ತಿದ್ದಾರೆ. ಹೀಗಾದರೆ ಗ್ರಾಮಗಳು ಉದ್ಧಾರವಾಗುವುದಾದರೂ ಹೇಗೆ? ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಗ್ರಾ.ಪಂ.ಗಳಿಗೆ ಬರುವ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ, ಸಮಸ್ಯೆಗಳನ್ನು ನಿವಾರಿಸುವ ಕಡೆಗೆ ಗಮನ ಕೊಡುವ ಮಂದಿಯನ್ನು ಆಯ್ಕೆ ಮಾಡುವಂತಹ ವಾತಾವರಣ ನಿರ್ಮಾಣವಾಗಬೇಕು. ಇದುವರೆಗೆ ಗ್ರಾಮಗಳು ನೆಮ್ಮದಿಯಾಗಿದ್ದವು. ಈಗ ಚುನಾವಣೆ ಮುಗಿಯುವುದರೊಳಗೆ ಗುಂಪುಗಾರಿಕೆ ಆರಂಭವಾಗಿ ಗ್ರಾಮಗಳು ಬೇಗುದಿಯ ತಾಣಗಳಾಗುತ್ತವೆ. ಅಂತಹ ಸನ್ನಿವೇಶಕ್ಕೆ ಅವಕಾಶ ಕೊಡದೆ ಚುನಾವಣೆಗಳನ್ನು ಸಹಜ ರೀತಿಯಲ್ಲಿ ನಡೆಸಿ ಮಾದರಿಯಾಗುವ ಕಡೆಗೆ ಯುವ ಜನಾಂಗ ಮುಂದಾಗುವುದೇ?

ಪಕ್ಷ ರಾಜಕಾರಣ ನುಸುಳದಿರಲಿ :

      ಪಂಚಾಯತಿ ಚುನಾವಣೆಗಳು ರಾಜಕೀಯ ರಹಿತವಾಗಿರಬೇಕು. ಪಕ್ಷಗಳ ಸಿದ್ಧಾಂತಗಳು ಇಲ್ಲಿ ಸುಳಿಯಲೇಬಾರದು. ದುರಂತವೆಂದರೆ ಇದೇ ಪ್ರಥಮ ಬಾರಿಗೆ ಹಳ್ಳಿ ಹಳ್ಳಿಗಳಲ್ಲಿ ಪಕ್ಷ ರಾಜಕಾರಣ ವಿಜೃಂಭಿಸುತ್ತಿದೆ. ಯಾವುದೋ ಸಿದ್ಧಾಂತವನ್ನು ಹಳ್ಳಿಗಳ ಜನರ ಮೇಲೆ ಸುರಿಯಲಾಗುತ್ತದೆ. ಗ್ರಾಮಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಅವುಗಳನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ನಡೆಯಬೇಕಾದ ಚುನಾವಣೆಗಳು ರಾಜಕೀಯಕರಣಕ್ಕೆ ಒಳಗಾಗುತ್ತಿರುವುದು ದುರಂತ. ಹಳ್ಳಿಗಳು ಸ್ವಾವಲಂಬಿಗಳಾಗಬೇಕು, ಅದಕ್ಕೆ ಪಕ್ಷ ರಾಜಕಾರಣ ನುಸುಳಬಾರದು ಎಂಬ ಮಹಾನ್ ವ್ಯಕ್ತಿಗಳ ಕನಸಿಗೆ ಈಗ ಕೊಡಲಿ ಪೆಟ್ಟು ಬೀಳುತ್ತಿದೆ. ಯಾವುದೇ ಕಾರಣಕ್ಕೂ ಪಂಚಾಯತ್ ಸದಸ್ಯರು ಹೈಜಾಕ್ ಆಗದಂತೆ ಎಚ್ಚರಿಕೆ ವಹಿಸಬೇಕು.

-ಕಾಡಶೆಟ್ಟಿಹಳ್ಳಿ ಸತೀಶ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್.

 ಸಾ.ಚಿ.ರಾಜಕುಮಾರ

Recent Articles

spot_img

Related Stories

Share via
Copy link
Powered by Social Snap