ಗದಗ:
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ದುಡ್ಡಿನಿಂದ ಮಗನಿಗೆ ಬೈಕ್ ಕೊಡಿಸಲು ತಾಯಿಯೊಬ್ಬರು ಇತ್ತೀಚೆಗೆ ಮುಂಗಡ ಹಣ ನೀಡಿ ಗಮನ ಸೆಳೆದಿದ್ದರು. ಇದೀಗ ಯೋಜನೆ ಹಣದಿಂದ ಅತ್ತೆ-ಸೊಸೆ, ಬೋರ್‌ವೆಲ್ ಕೊರೆಸಿರುವುದು ಕಂಡುಬಂದಿದ್ದು, ಭರ್ಜರಿ ನೀರು ಸಿಕ್ಕಿದೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಮಾಬುಬೀ ಮತ್ತು ಸೊಸೆ ರೋಷನ್ ಬೇಗಂ ಅವರು ಪ್ರತಿ ತಿಂಗಳು ತಮಗೆ ಬರುತ್ತಿದ್ದ ಗೃಹ ಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು, 44 ಸಾವಿರ ರೂ.ಗಳನ್ನು ನೀಡಿದ್ದಾರೆ.
ಬೋರ್‌ವೆಲ್ ಕೊರೆಸಲು 60 ಸಾವಿರ ರೂ. ಖರ್ಚು ಆಗಿದ್ದು, ಇದರಲ್ಲಿ 44 ಸಾವಿರ ರೂ.ಗಳನ್ನು ಅತ್ತೆ-ಸೊಸೆ ನೀಡಿದ್ದರೆ, ಉಳಿದ ಹಣವನ್ನು ಮಗ ಹಾಕಿ ಬೋರ್‌ವೆಲ್ ಕೊರಿಸಿದ್ದಾರೆ. ಇನ್ನು ಕೊಳವೆ ಬಾವಿಯಲ್ಲಿ ಭರ್ಜರಿ ನೀರು ಬಂದಿದ್ದರಿಂದ ಅತ್ತ-ಸೊಸೆ ಸಂತಸಗೊಂಡಿದ್ದು, ಸಿದ್ದರಾಮಯ್ಯ ಅವರು ನೀಡಿದ ಗೃಹ ಲಕ್ಷ್ಮಿ ಯೋಜನೆ ತುಂಬಾನೆ ಅನುಕೂಲವಾಗಿದೆ. ಹೀಗಾಗಿ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅತ್ತೆ ಸೊಸೆ ಹೇಳಿದ್ಧಾರೆ.
ಇತ್ತೀಚೆಗೆ ಮಹಿಳೆಯೊಬ್ಬರು ಗೃಹ ಲಕ್ಷ್ಮಿ ಯೋಜನೆಯ ಹಣ ಬಳಸಿಕೊಂಡು, ತನ್ನ ನಾಲ್ವರು ಹೆಣ್ಣು ಮಕ್ಕಳ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟಿದ್ದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ನಿವಾಸಿ ಗಂಗವ್ವ ಬಿರಾದಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ 12 ತಿಂಗಳ ರೂ. 24,000 ಹಣ ಕೂಡಿಟ್ಟು ಹೊಲಿಗೆ ಯಂತ್ರ ಖರೀದಿಸಿ, ತನ್ನ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಬದುಕು ರೂಪಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಬಡತನದಲ್ಲೂ ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ಹೆಣ್ಣುಮಕ್ಕಳಿಗೆ ನೆರವಾಗುವುದೇ ನಮ್ಮ ಯೋಜನೆಯ ಉದ್ದೇಶ.ಇದು ನನ್ನ ರಾಜಕೀಯ ಬದುಕಿನ ಮತ್ತೊಂದು ಸಾರ್ಥಕ ಕ್ಷಣ. ನಮ್ಮ ಗ್ಯಾರಂಟಿಗಳ ಬಗ್ಗೆ ದೇಶದ ಪ್ರಧಾನಿಯೇ ಅಪಪ್ರಚಾರಕ್ಕೆ ಇಳಿದಿರುವ, ಇಡೀ ಬಿಜೆಪಿ ಪಕ್ಷ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲೆಂದು ದಿನವಿಡೀ ಜಪಿಸುತ್ತಿರುವ ಹೊತ್ತಿನಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ಗ್ಯಾರಂಟಿ ವಿರೋಧಿಗಳೆಲ್ಲರಿಗೂ ತಪರಾಕಿ ಬಾರಿಸಿದಂತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದರು.