ಬೆಂಗಳೂರು:
ಜನಪ್ರಿಯ ನಟ ದರ್ಶನ್ ತೂಗುದೀಪ್, ಅವರ ಆಪ್ತೆ ಪವಿತ್ರಗೌಡ ಮತ್ತಿತರ 15 ಮಂದಿ ಆರೋಪಿಗಳಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕವಾದ ಸಾಕ್ಷ್ಯಧಾರ ಸಂಗ್ರಹದ ನಂತರ ಜಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೋಮವಾರ ತಿಳಿಸಿದರು.
ಎಲ್ಲಾ ಆರೋಪಿಗಳು ಜುಲೈ 18ರವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ಅಭಿಮಾನಿ 33 ವರ್ಷದ ರೇಣುಕಾಸ್ವಾಮಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರಿಂದ ಆಕ್ರೋಶಗೊಂಡು ದರ್ಶನ್ ಗ್ಯಾಂಗ್ ಕೊಲೆ ಮಾಡಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತವೆ. ಜೂನ್ 9 ರಂದು ಸುಮನಹಳ್ಳಿಯ ಅಪಾರ್ಟ್ ಮೆಂಟ್ ವೊಂದರ ಮುಂಭಾಗದ ರಾಜ ಕಾಲುವೆ ಬಳಿ ಆತನ ಮೃತದೇಹ ಪತ್ತೆಯಾಗಿತ್ತು.
ಈ ಘಟನೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ಸಾಕ್ಷ್ಯಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಬಳಿಕ ಚಾರ್ಜ್ ಶೀಟ್ ಸಲ್ಲಿಸಲಾಗುವುದು, ಅದಕ್ಕೆ ತನ್ನದೇ ಆದ ಪ್ರಕ್ರಿಯೆಗಳಿವೆ. ಸೂಕ್ತವಾದ ಸಾಕ್ಷ್ಯಧಾರ ಸಂಗ್ರಹಿಸಿದ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗುವುದು, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಅದನ್ನು ಮಾಡುವುದಿಲ್ಲ ಎಂದರು.
ಪವಿತ್ರಗೌಡ ಭೇಟಿ ಮಾಡಿಸುವ ನೆನಪಿನಲ್ಲಿ ಆರೋಪಿಗಳಲ್ಲಿ ಒಬ್ಬನಾದ ಚಿತ್ರದುರ್ಗದ ದರ್ಶನ್ ತೂಗದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ರೇಣುಕಾಸ್ವಾಮಿಯನ್ನು ಜೂನ್ 8 ರಂದು ರಾಜರಾಜೇಶ್ವರಿನಗರದ ಶೆಡ್ ಗೆ ಕರೆದುಕೊಂಡು ಬಂದಿದ್ದ, ನಂತರ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲಾಗಿತ್ತು.