ಸಹಜ ನ್ಯಾಯಕ್ಕೆ ವಿರೋಧಿಯಾಯ್ತೆ ಜಿಎಸ್’ಟಿ ನಿಯಮ..!

ತುಮಕೂರು :

      ಜಿ.ಎಸ್.ಟಿ. ವಿವರಗಳಲ್ಲಿ ವ್ಯತ್ಯಾಸಗಳು ಕಂಡುಬಂದರೆ ಅಂತಹ ವರ್ತಕನ ಜಿ.ಎಸ್.ಟಿ. ಪರವಾನಗಿಯನ್ನು ತಕ್ಷಣವೆ ಅಮಾನತು ಮಾಡುವ ನಿರ್ಧಾರ ವರ್ತಕ ಸಮೂಹದಲ್ಲಿ ವ್ಯಾಪಕ ಅಸಮಾಧಾನ ಮೂಡಿಸಿದೆ. ದಿಢೀರ್ ಎಂದು ಇಂತಹ ನಿರ್ಧಾರ ಕೈಗೊಂಡರೆ ವ್ಯಾಪಾರ ವಹಿವಾಟು ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ಎದ್ದಿವೆ.

      ಸರಕುಗಳ ಪೂರೈಕೆದಾರ ಸಲ್ಲಿಸಿದ ಸರಕು ಮತ್ತು ಸೇವಾ ತೆರಿಗೆ ವಿವರ ಮತ್ತು ಆ ಸರಕುಗಳನ್ನು ಖರೀದಿಸುವ ವರ್ತಕರು ಸಲ್ಲಿಸಿದ ಜಿ.ಎಸ್.ಟಿ. ವಿವರಗಳಲ್ಲಿ ಗಣನೀಯ ವ್ಯತ್ಯಾಸ ಕಂಡು ಬಂದರೆ ಜಿ.ಎಸ್.ಟಿ. ಪರವಾನಗಿ ಅಮಾನತು ಮಾಡಲಾಗುತ್ತದೆ ಎಂಬುದು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ತೆರಿಗೆ ವಂಚನೆ ತಡೆಯುವುದು, ಸರ್ಕಾರಕ್ಕೆ ಬರುವ ವರಮಾನ ಸೋರಿಕೆಯಾಗದಂತೆ ನೋಡಿಕೊಳ್ಳುವುದು ಇದರ ಹಿಂದಿರುವ ಉದ್ದೇಶ. ಈ ಉದ್ದೇಶ ಮೇಲ್ನೋಟಕ್ಕೆ ಒಳ್ಳೆಯದಾಗಿಯೇ ಕಾಣುತ್ತದೆ. ಆದರೆ ಆಳಕ್ಕೆ ಇಳಿದು ನೋಡಿದಾಗ ಪ್ರಾಮಾಣಿಕ ವ್ಯಾಪಾರ ವಹಿವಾಟುದಾರ ವರ್ತಕರಿಗೆ ಚಾಟಿ ಬೀಸಿದಂತಿದೆ ಎನ್ನುತ್ತಾರೆ ಆ ಕ್ಷೇತ್ರದ ತಜ್ಞರು.

      ಜಿ.ಎಸ್.ಟಿ. ರಿಟನ್ರ್ಸ್ ಫೈಲ್ ಮಾಡುವಾಗ ಕೆಲವೊಮ್ಮೆ ವ್ಯತ್ಯಾಸಗಳಾಗುವುದು ಸಹಜ. ಕಣ್ತಪ್ಪಿನಿಂದ ಕೆಲವೊಮ್ಮೆ ವ್ಯತ್ಯಾಸಗಳಾಗಬಹುದು. ಇದನ್ನು ಸರಿಪಡಿಸಲು ಮತ್ತು ತಿದ್ದಿಕೊಳ್ಳಲು ಅವಕಾಶ ಇರಬೇಕೆ ಹೊರತು ಒಂದೇ ಬಾರಿಗೆ ಅಮಾನತು ಎಂಬ ಶಿಕ್ಷೆಗೆ ಗುರಿಪಡಿಸುವುದು ಯಾವ ನ್ಯಾಯ? ಸರ್ಕಾರಕ್ಕೆ ತೆರಿಗೆ ಹೋಗಬೇಕು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ತೆರಿಗೆ ಪಾವತಿಯಾಗುವಂತೆ, ಜಿ.ಎಸ್.ಟಿ. ಪಾವತಿಯಾಗುವಂತೆ ನೋಡಿಕೊಳ್ಳುವುದು ಜಾಣತನದ ಲಕ್ಷಣ. ಇದಕ್ಕೆ ಬದಲು ವ್ಯವಹಾರವನ್ನೇ ಸ್ಥಗಿತಗೊಳಿಸಿದರೆ ಜಿ.ಎಸ್.ಟಿ. ನೋಂದಣಿಯನ್ನೇ ಅಮಾನತುಗೊಳಿಸಿದರೆ ಸರ್ಕಾರಕ್ಕೆ ಬರಬೇಕಾದ ತೆರಿಗೆ ನಿಜವಾಗಿಯೂ ಪಾವತಿಯಾಗುತ್ತದೆಯೇ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಡುತ್ತಾರೆ.

ನಮ್ಮಲ್ಲಿ ಈಗಿರುವ ಕಾನೂನಿನ ವ್ಯವಸ್ಥೆಯನ್ನೇ ನೋಡಿದರೆ ಸಾಮಾಜಿಕ ನ್ಯಾಯ ಸಿದ್ಧಾಂತದ ತಳಹದಿ ಇದೆ. ಏನೇ ತಪ್ಪು ಮಾಡಿದರೂ ಅವಕಾಶ ಕೊಟ್ಟು ನೋಡುವ, ಪರಿಶೀಲಿಸುವ, ಆನಂತರ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದೆ. ಇವೆಲ್ಲವೂ ಸಹಜ ಸಿದ್ಧಾಂತದ ಪ್ರಕ್ರಿಯೆಗಳು. ತಪ್ಪು ಮಾಡಿದ ವ್ಯಕ್ತಿಗೆ ಮೊದಲು ನೋಟೀಸ್ ನೀಡಬೇಕು. ತಪ್ಪಾಗಿರುವುದು ರುಜುವಾತಾದರೆ ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಈಗ ಜಿ.ಎಸ್.ಟಿ. ವಲಯದಲ್ಲಿ ಬಂದಿರುವ ಹೊಸ ನಿಯಮಗಳು ಈ ಸಾಮಾಜಿಕ ಸಹಜ ಕಾನೂನಿನ ಸಿದ್ಧಾಂತಕ್ಕೆ ತದ್ವಿರುದ್ಧ ಎಂಬ ಮಾತುಗಳು ಕೇಳಿಬರುತ್ತಿವೆ.

Image result for gst

      ಜಿ.ಎಸ್.ಟಿ. ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಧಿಕಾರಿಗಳು ಸಂಬಂಧಪಟ್ಟ ತೆರಿಗೆದಾರರ ನೋಂದಣಿಯನ್ನು ಅಮಾನತ್ತಿನಲ್ಲಿಟ್ಟ ನಂತರ ನೋಟೀಸ್ ಕಳುಹಿಸುತ್ತಾರೆ. ಒಮ್ಮೆ ಅಮಾನತ್ತು ಆಯಿತೆಂದರೆ ಯಾವುದೇ ವ್ಯವಹಾರ ನಡೆಸುವಂತಿಲ್ಲ. ಆದರೆ ನೋಟೀಸ್‍ಗೆ ಸಮರ್ಪಕ ಉತ್ತರಗಳನ್ನು ನೀಡುತ್ತಾ ಹೋಗಬೇಕು. ಅಷ್ಟು ಅವಧಿಯಲ್ಲಿ ಸ್ಥಗಿತಗೊಳ್ಳುವ ವ್ಯವಹಾರದ ನಷ್ಟಕ್ಕೆ ಯಾರು ಹೊಣೆ? ಒಂದು ವೇಳೆ ಯಾವುದೇ ತಪ್ಪಾಗಿಲ್ಲ ಎಂದು ತಿಳಿದು ಬಂದರೆ ಈಗಾಗಲೇ ಆಗಿರುವ ನಷ್ಟವನ್ನು ಕಟ್ಟಿಕೊಡುವವರು ಯಾರು ಎಂಬ ವಾದಗಳು ಹುಟ್ಟಿಕೊಂಡಿವೆ.

      ಒಮ್ಮೆ ನೋಂದಣಿ ಅಮಾನತು ಮಾಡಿದ ತಕ್ಷಣದಿಂದ ವರ್ತಕರು ಯಾವುದೇ ವಹಿವಾಟು ನಡೆಸಲಿಕ್ಕೆ ಸಾಧ್ಯವಾಗುವುದಿಲ್ಲ. ಇದು ವರ್ತಕ ಸಮುದಾಯದಲ್ಲಿ ಅಸಹನೆಗೆ ಕಾರಣವಾಗಿದೆ. ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದಾನೆ ಎಂದು ತಿಳಿದು ಬಂದರೆ ಅದರ ಸತ್ಯಾಸತ್ಯತೆ ಪರಿಶೀಲಿಸಲಿ, ತನಿಖೆ ಮಾಡಲಿ, ವಿವರಣೆ ಪಡೆಯಲಿ. ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಿ. ಅದು ಬಿಟ್ಟು ಏಕಾಏಕಿ ನೋಂದಣಿಯನ್ನೇ ಅಮಾನತು ಪಡಿಸಿದರೆ ನ್ಯಾಯೋಚಿತವಾಗಿ ನಡೆದುಕೊಳ್ಳುವ ವರ್ತಕ ಸಮುದಾಯದ ಮೇಲೂ ಕೆಟ್ಟ ಪರಿಣಾಮ ಬೀರುವುದಿಲ್ಲವೆ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.

      ಜಿಎಸ್‍ಟಿ ಅಥವಾ ತೆರಿಗೆ ವಿವರದ ವ್ಯತ್ಯಾಸಗಳು ಕಂಡುಬರುವಲ್ಲಿ ಎರಡು ತರಹದ ವ್ಯಕ್ತಿಗಳನ್ನು ಗಮನಿಸಬಹುದು. ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆಗೆ ಮುಂದಾಗುವ ವರ್ಗ ಒಂದು ಕಡೆಯಾದರೆ, ಯಾವುದೇ ಉದ್ದೇಶವಿಲ್ಲದೆ ಅಚಾನಕ್ ಆಗಿ ನಡೆಯುವ ಎಡವಟ್ಟುಗಳಿಂದ ಆಗುವ ತಪ್ಪುಗಳು. ಈ ತಪ್ಪುಗಳು ಸಂಬಂಧಪಟ್ಟ ವರ್ತಕ ಸಮೂಹದಿಂದಲೆ ಆಗಬೇಕೆಂದಿಲ್ಲ. ವ್ಯವಸ್ಥೆಯ ಜಾಡಿನಲ್ಲಿ ಯಾರು ಬೇಕಾದರೂ ಸಣ್ಣಪುಟ್ಟ ತಾಂತ್ರಿಕ ತಪ್ಪುಗಳಿಗೆ ಕಾರಣರಾಗಿರಬಹುದು. ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಥವಾ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಕಲ್ಪಿಸುವ ವ್ಯವಸ್ಥೆ ಇರಬೇಕೇ ಹೊರತು ಏಕಾಏಕಿ ನೇಣುಗಂಬಕ್ಕೆ ಹಾಕುವ ಪ್ರವೃತ್ತಿ ಎಷ್ಟು ಸರಿ ಎಂಬುದು ಈಗ ಎದ್ದಿರುವ ಪ್ರಶ್ನೆ.

Image result for gst

      ಗಾಜಿನ ಮನೆಯಲ್ಲಿ ಕುಳಿತು ಕಾನೂನು ರೂಪಿಸುವ, ನಿಯಮಾವಳಿಗಳನ್ನು ಜಾರಿಗೆ ತರುವವರಿಗೆ ಸಮಾಜದ ವಾಸ್ತವ ಸ್ಥಿತಿಗತಿಗಳ ಅರಿವಿರುವುದಿಲ್ಲ. ಇವುಗಳ ಜಾರಿ ವಿಚಾರಕ್ಕೆ ಬಂದಾಗ ಆಗುವ ಅನಾಹುತಗಳೇ ಹೆಚ್ಚು. ಇಲ್ಲಿಯೂ ವಂಚನೆ ಮಾಡುವವರು ತಮ್ಮ ಕೈಚಳಕ ಪ್ರದರ್ಶಿಸುವುದಿಲ್ಲ ಎಂಬುದಕ್ಕೆ ಖಾತರಿ ಏನು? ಅಂತಿಮವಾಗಿ ಈ ವ್ಯವಸ್ಥೆ ಮತ್ತಷ್ಟು ಭ್ರಷ್ಟತೆಗೆ ಹಾಸಿಗೆ ಹಾಕಿದಂತಾಗುತ್ತದೆ. ಏನೆಲ್ಲ ತಪ್ಪುಗಳಿವೆಯೋ ಅವುಗಳನ್ನು ಮುಚ್ಚಿ ಹಾಕಲು ಒತ್ತಡದ ತಂತ್ರಗಳು, ಆಮಿಷಗಳು ಹೆಚ್ಚಾಗಿ ಅಂತಹವರು ರಾಜಾರೋಷವಾಗಿ ತಮ್ಮ ವ್ಯವಹಾರ ನಡೆಸಿಕೊಂಡು ಹೋಗುತ್ತಾರೆ. ನ್ಯಾಯೋಚಿತವಾಗಿ ನಡೆದುಕೊಳ್ಳುವವರು ಸಿಲುಕಿ ಬೀಳುತ್ತಾರೆ. ಇಲ್ಲಿಯೂ ಅಧಿಕಾರಿಗಳು ಹಣ ಮಾಡಲು ದಾರಿ ಮಾಡಿಕೊಟ್ಟಂತಾಗುತ್ರದೆ.

      ತೆರಿಗೆ ವಂಚಿಸಿದ್ದಾರೆ, ನಕಲಿ ಇನ್‍ವಾಯ್ಸ್ ಕೊಟ್ಟಿದ್ದಾರೆ ಎಂದೆಲ್ಲಾ ಆಗಾಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತವೆ. ಅಂತಹವರ ಮೇಲೆ ಕ್ರಮ ಜರುಗಿಸಲಾಗಿದೆ ಎಂದೆಲ್ಲಾ ಅಧಿಕಾರಿಗಳು ಹೇಳುತ್ತಾರೆ. ವಾಸ್ತವವಾಗಿ ಈ ರೀತಿ ವಂಚಕರ ಮೇಲೆ ಎಷ್ಟು ಕೇಸುಗಳಾಗಿವೆ, ಅವರಿಂದ ಸರ್ಕಾರಕ್ಕೆ ದಂಡ ಪಾವತಿಯಾಗಿದೆಯೇ ತೆರಿಗೆ ವಸೂಲಾತಿಯಾಗಿದೆಯೇ ಎಂಬ ಯಾವ ಮಾಹಿತಿಯೂ ಬಹಿರಂಗವಾಗುವುದಿಲ್ಲ. ಅಂದ ಮೇಲೆ ಹೊಸ ಹೊಸ ನಿಯಮಗಳಾದರೂ ಏಕೆ ಬೇಕು? ತೆರಿಗೆ ವಂಚನೆ ತಡೆಗಟ್ಟಲು ಸಾಕಷ್ಟು ಮಾರ್ಗೋಪಾಯಗಳಿದ್ದರೂ ಆ ಕ್ರಮಗಳನ್ನು ಅನುಸರಿಸದೆ ಹೊಸ ನಿಯಮಗಳನ್ನು ಜಾರಿಗೆ ತರುವುದಾದರೂ ಏಕೆ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಡುತ್ತಾರೆ.
ಬಾಕ್ಸ್‍ನಲ್ಲಿ ಬರಲಿ

      ತೆರಿಗೆ, ಜಿ.ಎಸ್.ಟಿ. ರಿಟನ್ರ್ಸ್ ಫೈಲ್ ಮಾಡುವಾಗ ಕೆಲವೊಮ್ಮೆ ವ್ಯತ್ಯಾಸಗಳಾಗುವುದು ಸಹಜ. ಉದ್ದೇಶಪೂರ್ವಕವಾಗಿ ಆಗದ ಕಾರಣಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ತಪ್ಪುಗಳನ್ನು ಹುಡುಕಿ ಸರಿಪಡಿಸಲು ಸೂಚಿಸುವ ವ್ಯವಸ್ಥೆಗಳಾಗಬೇಕು. ಅದರ ಬದಲಿಗೆ ಒಂದೇ ಬಾರಿಗೆ ವ್ಯವಹಾರವನ್ನೇ ಅಮಾನತುಗೊಳಿಸಿದರೆ ಅದರಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ವ್ಯಾಪಾರ ವಹಿವಾಟು ನಡೆಸಲಾಗದೆ ತೊಂದರೆಗೆ ಸಿಲುಕಿಕೊಳ್ಳುವುದಿಲ್ಲವೆ? ಇಡೀ ವ್ಯವಹಾರ ಬಂದ್ ಆಗುವುದರಿಂದ ಸಾಕಷ್ಟು ನಷ್ಟ ಆಗುವುದಿಲ್ಲವೆ? ತಪ್ಪುಗಳಾಗಿದ್ದರೆ ನೋಟೀಸ್ ಕೊಟ್ಟು ಕಾರಣ ಕೇಳಲಿ. ಕಾನೂನಿನ ಪ್ರಕ್ರಿಯೆಗಳನ್ನು ಜರುಗಿಸಲಿ. ಅದು ಸಹಜ ನ್ಯಾಯ ಸಿದ್ಧಾಂತರ ಅಡಿಯಲ್ಲಿಯೇ ಇರಬೇಕು. ನೋಟೀಸ್ ನೀಡದೆ ಅಮಾನತುಗೊಳಿಸಿ ನಂತರ ಪ್ರಕ್ರಿಯೆಗಳನ್ನು ಕೈಗೊಳ್ಳುವುದು ಸರಿಯಾದ ಕ್ರಮವಲ್ಲ. ಇದರಿಂದ ತೆರಿಗೆ ವಂಚನೆಯನ್ನು ತಡೆಗಟ್ಟಬಹುದು ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ.

-ಎಸ್.ಪ್ರಕಾಶ್, ತೆರಿಗೆ ಸಮಾಲೋಚಕರು, ತುಮಕೂರು.

 

Recent Articles

spot_img

Related Stories

Share via
Copy link