ಫಲಿತಾಂಶದ ಕಾತರ, ಸುರಕ್ಷತೆ ನಿಯಮ ಪಾಲಿಸದೆ ಜನಜಂಗುಳಿ

 ಗುಬ್ಬಿ :

      ಗ್ರಾಮ ಪಂಚಾಯಿತಿ ಚುನಾವಣಾ ಮತ ಎಣಿಕೆ ಕಾರ್ಯಕ್ಕೆ ಮುನ್ನವೆ ಬೆಳಗ್ಗೆ ಆರು ಗಂಟೆಯಿಂದಲೇ ಮತ ಎಣಿಕೆ ಕೇಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣಕ್ಕೆ ಆಗಮಿಸಿದ ಸಾವಿರಾರು ಮಂದಿ ಗ್ರಾಮೀಣ ಭಾಗದ ಜನರು ಫಲಿತಾಂಶದ ಬಗ್ಗೆ ಕಾತರರಾಗಿದ್ದರು.

      ಆತಂಕದಲ್ಲಿಯೆ ಕಾಲೇಜು ಹೊರಭಾಗದಲ್ಲಿ ಗುಂಪಾಗಿ ನಿಂತು ಫಲಿತಾಂಶಕ್ಕೆ ಕಾದು ನಿಂತರು. ಕಿರಿದಾದ ರಸ್ತೆ ಜತೆಗೆ ತಾತ್ಕಾಲಿಕ ಅಂಗಡಿ ಮಳಿಗೆಗಳ ಹಾವಳಿ ಮಧ್ಯೆ ಜನರು ಯಾವುದೇ ಕೋವಿಡ್ ನಿಯಮ ಪಾಲಿಸಲಾಗಿಲ್ಲ. ಆದರೆ ಈ ಬಗ್ಗೆ ನಿಗಾವಹಿಸಬೇಕಿದ್ದ ತಾಲ್ಲೂಕು ಆಡಳಿತ ಕಾಲೇಜು ಒಳಭಾಗದಲ್ಲಿ ಮಾತ್ರ ನಿಯಮ ಪಾಲನೆ ನಡೆಸಿದರು. ರೂಪಾಂತರಿ ವೈರಸ್ ಬಗ್ಗೆ ರಾಜ್ಯವೇ ಭೀತಿಯಲ್ಲಿದ್ದರೆ ಗುಬ್ಬಿ ಪಟ್ಟಣದ ಪದವಿ ಕಾಲೇಜು ಚುನಾವಣಾ ಮತ ಎಣಿಕಾ ಕೇಂದ್ರದ ಸುತ್ತ ಯಾವುದೇ ಆತಂಕವಿಲ್ಲದೇ ಅಡ್ಡಾಡಿದ ಸಾವಿರಾರು ಮಂದಿ ಜನರ ನಡುವೆ ಯಾವುದೇ ಸಾಮಾಜಿಕ ಅಂತರವಿಲ್ಲದಿರುವುದು ಮತ್ತು ಮಾಸ್ಕ್ ಮಾಯವಾಗಿರುವುದು ಎದ್ದುಕಾಣುತ್ತಿತ್ತು.

      ಜಿಲ್ಲಾಢಳಿತದ 144 ನೇ ನಿಷೇಧಾಜ್ಞೆಯಂತೆ 500 ಮೀಟರ್ ಸಾರ್ವಜನಿಕರ ಗುಂಪು ಕಟ್ಟಿಕೊಳ್ಳದಂತೆ ನಿಗಾವಹಿಸಬೇಕಿತ್ತು. ಆದರೆ ಕಾಲೇಜು ಕೌಂಪೌಂಡ್‍ನಲ್ಲಿರುವ ಎರಡು ಗೇಟ್‍ಗಳನ್ನು ಬಳಸಿಕೊಂಡು ಕೇವಲ 100 ಮೀಟರ್‍ಗಳಿಗೆ ಬ್ಯಾರಿಕೇಟ್ ಅಳವಡಿಸಲಾಗಿ ಉಳಿದ ನಿಷೇಧಾಜ್ಞೆ ಸ್ಥಳದಲ್ಲೇ ಹೋಟೆಲ್‍ಗಳು, ಚಹಾ ಅಂಗಡಿಗಳು ತಲೆ ಎತ್ತಿದ್ದವು.

ಅನುಮತಿಯಿಲ್ಲದೆಯೂ ಪಟಾಕಿ ಮಾರಾಟ:

      ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಬಾರದು ಎಂಬ ನಿಯಮವಿದ್ದರೂ ಸ್ಥಳದಲ್ಲೇ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕೆ ಅನುವು ಮಾಡಿದ್ಯಾರು ಎಂದು ಪ್ರಶ್ನೆಗೆ ತಾಲ್ಲೂಕು ಆಡಳಿತ ಉತ್ತರ ನೀಡಬೇಕಿದೆ. ತಾತ್ಕಾಲಿಕ ಅಂಗಡಿಗಳು, ಹೋಟೆಲ್‍ಗಳ ಮಧ್ಯೆ ರಾಜಾರೋಷವಾಗಿ ಪಟಾಕಿ ಮಾರಾಟ ಆರಂಭವಾಗಿದ್ದೇ ಅಚ್ಚರಿ ತಂದಿತ್ತು. ಪ್ರಥಮ್ ಗ್ಯಾಸ್ ಅಂಗಡಿ ಮುಂಭಾಗದಲ್ಲೇ ಎರಡು ಪಟಾಕಿ ಅಂಗಡಿಗಳು ತೆರೆದಿದ್ದು ಅಲ್ಲದೇ ಸಂತೇ ಮೈದಾನ ರಸ್ತೆಯಲ್ಲಿ ನಿಂತಿದ್ದ ಕಾರೊಂದರ ತುಂಬಾ ಪಟಾಕಿ ಬಾಕ್ಸ್‍ಗಳು ಸಾರ್ವಜನಿಕರಿಗೆ ಭಯ ತಂದಿತ್ತು. ಬಿಸಿಲಿನ ತಾಪಕ್ಕೆ ಕಾರಿನಲ್ಲಿದ್ದ ಪಟಾಕಿ ಸಿಡಿದ್ದಿದ್ದರೆ ಬಾಂಬ್ ರೀತಿಯಲ್ಲಿ ಸಿಡಿದು ಜೀವಹಾನಿ ಕೂಡಾ ಸಾಧ್ಯವಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಈ ಬಗ್ಗೆ ವಾಟ್ಸ್‍ಪ್ ಗ್ರೂಪಿನಲ್ಲಿ ನಿರಂತರ ಚರ್ಚೆ ನಡೆದರೂ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ್ಯಾರು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ನಿಷೇಧಾಜ್ಞೆ ಸ್ಥಳದಲ್ಲಿ ಪಟಾಕಿ ಮಾರಾಟ ಮಾಡುತ್ತಿರುವ ಬಗ್ಗೆ ಚರ್ಚೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂತು.

      ಕೋವಿಡ್ ನಿಯಮಾನುಸಾರ ಹೋಟೆಲ್‍ಗಳು ನಡೆದಿಲ್ಲ. ಚಹಾ ಅಂಗಡಿಗಳು, ಹೂವಿನ ಅಂಗಡಿಗಳು, ಇನ್ನಿತರ ತಿಂಡಿ ತಿನಿಸು ಮಾರಾಟಕ್ಕೆ ಅನುವು ಹೇಗೆ ನೀಡಿದರು. ಧೂಳು ತುಂಬಿದ ರಾಯವಾರ ರಸ್ತೆಯಲ್ಲೇ ಈ ಹೋಟೆಲ್‍ಗಳು ಶುಚಿತ್ವ ಹೇಗೆ ಕಾಪಾಡುತ್ತದೆ ಎಂಬ ನಿಗಾವಹಿಸುವ ಯಾವ ಅಧಿಕಾರಿಗಳು ಕಂಡು ಬರಲಿಲ್ಲ. ಎಲ್ಲಂದರಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಸ್ಥಳೀಯ ಪಟ್ಟಣ ಪಂಚಾಯಿತಿ ಇಲ್ಲಿ ಯಾಕೆ ದಂಡ ವಿಧಿಸಲಿಲ್ಲ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿತ್ತು. ಈ ಜತೆಗೆ ಮಾಧ್ಯಮ ಮಂದಿಗೆ ನಿಗದಿತ ಸ್ಥಳಾವಕಾಶವನ್ನೂ ನೀಡದೆ ಕನಿಷ್ಠ ಗೌರವಕ್ಕೂ ಪಾತ್ರರಾಗಿಸಲಿಲ್ಲ. ಮಾಧ್ಯಮದವರನ್ನು ಬ್ಯಾರಿಕೇಡ್‍ನಿಂದ ಹೊರ ನಿಂತಿದ್ದನ್ನು ಗಮನಿಸಿದ ಸಾರ್ವಜನಿಕರು ಜಿಲ್ಲಾಢಳಿತದ ವಿರುಧ್ದ ತೀವೃ ಅಸಮದಾನ ವ್ಯಕ್ತಪಡಿಸಿದರು. ಎಣಿಕೆ ಫಲಿತಾಂಶ ಮಾಹಿತಿಯಂತೂ ಕೇಳುವಂತಿರಲಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕೇಳಿಬಂತು.

      ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆ ನೀಡಿದ ಪೊಲೀಸರು ನಿಗದಿತ ಸ್ಥಳವಾದ ಬ್ಯಾರಿಕೇಟ್ ಬಳಿ ಮಾತ್ರ ಕರ್ತವ್ಯ ನಿರ್ವಹಿಸಿದ್ದರು. ವಾಹನ ನಿಲುಗಡೆ ಸಮಸ್ಯೆ ಕೇಳುವಂತರಿಲಿಲ್ಲ. ರಾಯವಾರ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಮಾಡದಂತಾಗಿ ಕಿರಿಕಿರಿ ಉಂಟಾಯಿತು. ಟ್ರಾಫಿಕ್ ಜಾಮ್ ಸಮಸ್ಯೆ ಆಲಿಸುವವರು ಇರಲಿಲ್ಲ. ಸಾವಿರಾರು ಮಂದಿ ಓಡಾಟದ ನಡುವೆ ಪೊಲೀಸ್ ಸಿಬ್ಬಂದಿ ಕಾಣಲಿಲ್ಲ. ನಿಷೇಧಾಜ್ಞೆ ಸ್ಥಳದಲ್ಲಿ ತಮ್ಮ ಕೆಲಸ ಮಾಡಿದ್ದಲ್ಲಿ ಕೊಂಚ ಸಮಾಧಾನ ಬರುತ್ತಿತ್ತು. ಗೆಲುವು ಸಾಧಿಸಿದವರ ವಿಜಯೋತ್ಸವಕ್ಕೆ ಪಾರವಿಲ್ಲವಾದರೂ ಮೆರವಣಿಗೆ ನಡೆಸದಂತೆ ನಿಗಾವಹಿಸಬೇಕಿತ್ತು. ಒಟ್ಟಾರೆ ಯಾವುದೇ ಹೊಸ ನಿಯಮ ಪಾಲನೆ ಏಣಿಕಾ ಕೇಂದ್ರದ ಹೊರಭಾಗದಲ್ಲಿ ಕಂಡು ಬಾರದಿದ್ದರೂ ಕೇಂದ್ರದ ಒಳಭಾಗದಲ್ಲಿ ಕೋವಿಡ್ ನಿಯಮ ಪಾಲನೆಗೆ ಒತ್ತಾಯಿಸಲಾಗುತ್ತಿತ್ತು ಎಂಬುದು ಸಾರ್ವಜನಿಕರಿಂದ ತಿಳಿದು ಬಂದಿದೆ.

      ತಾತ್ಕಾಲಿಕ ಅಂಗಡಿಗಳು, ಹೋಟೆಲ್‍ಗಳ ಮಧ್ಯೆ ರಾಜಾರೋಷವಾಗಿ ಪಟಾಕಿ ಮಾರಾಟ ಆರಂಭವಾಗಿದ್ದೇ ಅಚ್ಚರಿ ತಂದಿತ್ತು. ಪ್ರಥಮ್ ಗ್ಯಾಸ್ ಅಂಗಡಿ ಮುಂಭಾಗದಲ್ಲೇ ಎರಡು ಪಟಾಕಿ ಅಂಗಡಿಗಳು ತೆರೆದಿದ್ದು ಅಲ್ಲದೇ ಸಂತೇ ಮೈದಾನ ರಸ್ತೆಯಲ್ಲಿ ನಿಂತಿದ್ದ ಕಾರೊಂದರ ತುಂಬಾ ಪಟಾಕಿ ಬಾಕ್ಸ್‍ಗಳು ಸಾರ್ವಜನಿಕರಿಗೆ ಭಯ ತಂದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap