ಮೀಸಲಾತಿ ಹೋರಾಟ: ಬಿಜೆಪಿಯ ಭರವಸೆ ಕಾರಣ

 ಗುಬ್ಬಿ : 

      ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಜಾತಿಗೊಂದು ನಿಗಮ ರಚನೆಯ ಭರವಸೆ ನೀಡಿದ್ದರ ಫಲ ಎಲ್ಲಾ ಜನಾಂಗಗಳೂ ಮೀಸಲಾತಿ ಹೋರಾಟ ಆರಂಭಿಸಿವೆ. ಜಾತಿ ಮೀಸಲಾತಿ ಬಗ್ಗೆ ನಡೆದಿರುವ ಹೋರಾಟಗಳಿಗೆ ನೇರ ಬಿಜೆಪಿ ಸರ್ಕಾರ ಕಾರಣ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ನೇರ ವಾಗ್ಧಾಳಿ ನಡೆಸಿದರು.

      ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸೇರ್ಪಡೆಗೆ ಒಂದೊಂದೇ ಜಾತಿಗಳು ಹೋರಾಟಕ್ಕೆ ಮುಂದಾಗಿವೆ. ಬೇಡಜಂಗಮ, ಕುರುಬ ಸಮುದಾಯ ಹಾಗೂ ಪಂಚಮಸಾಲಿ ಲಿಂಗಾಯಿತ ಸಮಾಜ ಕೂಡಾ ಪಾದಯಾತ್ರೆ ಮೂಲಕ ಹೋರಾಟ ನಡೆಸಿವೆ. ಈ ಹೋರಾಟಕ್ಕೆ ಬಿಜೆಪಿ ಸರ್ಕಾರದ ಮಾತುಗಳೇ ಕಾರಣ. ಹೀಗೆ ನಡೆದಂತೆ ನಮ್ಮ ಸಮಾಜ ಎತ್ತ ಸಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

      ಸರ್ವ ತ್ಯಾಗ ಮಾಡಿದ ಸ್ವಾಮೀಜಿಗಳು ಒಂದು ಜಾತಿಗೆ ಮೀಸಲಾಗಿ ಹೋರಾಟ ಮಾಡುವುದು ಸರಿಯಲ್ಲ. ಈಗಾಗಲೇ ಹೋರಾಟ ನಿರಂತರ ನಡೆದಿರುವ ಸಂದರ್ಭದಲ್ಲಿ ಒಕ್ಕಲಿಗರಿಗೂ ಮೀಸಲು ನೀಡಬೇಕಿದೆ ಎಂಬ ಡಿಸಿಎಂ ಅಶ್ವತ್ಥನಾರಾಯಣ್ ಹೇಳಿಕೆ ಪ್ರಚೋದನಾಕಾರಿಯಾಗಿದೆ ಎಂದು ಅವರು, ಸರ್ಕಾರ ನೀಡಿದ ಭರವಸೆಯ ಕಾಡುಗೊಲ್ಲ ಅಭಿವೃದ್ದಿ ನಿಗಮ ಮತ್ತು ಮರಾಠ ಪ್ರಾಧಿಕಾರ ಈವರೆವಿಗೆ ಕಾರ್ಯಕ್ಕೆ ಬಂದಿಲ್ಲ ಎಂದು ಲೇವಡಿ ಮಾಡಿದರು.

      ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಒಟ್ಟು 25 ಪಂಚಾಯಿತಿಯ ಪೈಕಿ 19 ಗ್ರಾಮ ಪಂಚಾಯಿತಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ನಮ್ಮ ಬೆಂಬಲಿಗರ ಬಣ ಯಶಸ್ವಿಗೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಎಂಬ ಸಲ್ಲದ ಹೇಳಿಕೆ ಕೆಲ ಭಾಗದಲ್ಲಿ ಕೇಳಿರುವುದು ಸತ್ಯಕ್ಕೆ ದೂರ. ನಮ್ಮಲ್ಲಿ ಸ್ಪಷ್ಟ ಬಹುಮತ ಪಡೆದ 19 ಪಂಚಾಯಿತಿ ಜೆಡಿಎಸ್ ಬೆಂಬಲಿತರದ್ದಾಗಿದೆ ಎಂದ ಅವರು, 15ನೇ ಹಣಕಾಸು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚುನಾಯಿತ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ. ಈ ಜತೆಗೆ ನರೇಗಾ ಯೋಜನೆಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಹಿಂದೆ ಕೊಪ್ಪ ಪಂಚಾಯಿತಿ ಮೂರು ಕೋಟಿ ರೂಗಳ ಬಳಕೆ ಮಾಡಿಕೊಂಡು ಅಭಿವೃದ್ದಿ ಕೆಲಸ ಮಾಡಿತ್ತು. ಇದೇ ಮಾದರಿಯಲ್ಲಿ ಎಲ್ಲಾ ಪಂಚಾಯಿತಿಯಲ್ಲೂ ಉದ್ಯೋಗ ಖಾತ್ರಿ ಯೋಜನೆ ಸಫಲಗೊಳಿಸಲಾಗುವುದು ಎಂದರು.

      ಈ ಹಿಂದೆ ಕೆಲ ತಾಲ್ಲೂಕಿನಲ್ಲಿ ಗೋಲ್‍ಮಾಲ್ ನಡೆದು ಅಧಿಕಾರಿಗಳು ಅಮಾನತ್ತುಗೊಂಡಿದ್ದರ ಫಲ ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ ಅಧಿಕಾರಿಗಳ ಸಹಕಾರದೊಂದಿಗೆ ಬರುವ ನರೇಗಾ ಹಣ ಬಳಸಲಾಗುವುದು. ಆದರೆ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಉದ್ಯೋಗ ಖಾತ್ರಿಯಲ್ಲಿ 9 ಸಾವಿರ ಕೋಟಿ ಕಡಿತಗೊಳಿಸಿರುವುದು ವಿಷಾದಕರ ಎಂದ ಅವರು, ವಸತಿ ಸಚಿವ ಸೋಮಣ್ಣ ಅವರ ಮಾತುಗಳು ಕೇವಲ ಸುಳ್ಳಿನ ಮಾತುಗಳಾಗಿವೆ. ಅಲೆಮಾರಿಗಳಿಗೆ ಮನೆಗಳು ನೀಡಲು ಪಟ್ಟಿ ಮಾಡಿಸಿ ಇನ್ನೂ ಅಂತಿಮಗೊಳಿಸಿಲ್ಲ. ಹಿಂದಿನ ಫಲಾನುಭವಿಗಳಿಗೆ ಹಣ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ ತಾಲ್ಲೂಕು ಪಂಚಾಯಿತಿ ರದ್ದತಿ ಬಗ್ಗೆ ರಾಜ್ಯ ಸರ್ಕಾರ ಕೇವಲ ಶಿಫಾರಸ್ಸು ಮಾಡಬಹುದಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದರು.

      ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಮುಖಂಡರಾದ ಎಚ್.ಡಿ.ಯಲ್ಲಪ್ಪ, ಎಚ್.ಡಿ.ರಂಗಸ್ವಾಮಿ, ಪಾಳ್ಯ ಬಸವರಾಜು ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link