ಗುಬ್ಬಿ :
![](https://prajapragathi.com/wp-content/uploads/2021/05/photo3-scaled-e1620974841511.jpg)
ತಾಲ್ಲೂಕಿನ ನಿಟ್ಟೂರು, ಕಡಬ, ಹೊಸಕೆರೆ, ಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಳೆದ ರಾತ್ರಿ ಬೀಸಿದ ಬಿರುಗಾಳಿ, ಮಳೆಗೆ ಬಾಳೆ, ತೆಂಗು, ಅಡಿಕೆ, ಮಾವು, ಹಲಸು ಸೇರಿದಂತೆ ಬಹುತೇಕ ಮರಗಳು ನೆಲಕ್ಕೆ ಉರುಳಿದ್ದು ಸಾವಿರಾರು ರೂ.ಗಳಷ್ಟು ನಷ್ಟವಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಡಿಕೆ ಮರಗಳು ಬಿರುಗಾಳಿ ಮಳೆಗೆ ನೆಲಕ್ಕುರುಳಿದ್ದು ಬೆಲೆ ಬಾಳುವ ಅಡಿಕೆ ಹೊಂಬಾಳೆಗಳು ನಿಲಕ್ಕಚ್ಚಿದ್ದು, ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿದೆ. ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿರುವುದರಿಂದ ರಾತ್ರಿಯಿಡಿ ಹಲವು ಗ್ರಾಮಗಳು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿತ್ತು. ಮುಂಗಾರು ಮಳೆ ಗಾಳಿಯಿಂದ ರೈತರಿಗೆ ಪ್ರತಿ ವರ್ಷವೂ ಒಂದಿಲ್ಲೊಂದು ಸಮಸ್ಯೆ ಉಂಟಾಗುತ್ತಿದ್ದು ಕಷ್ಟಪಟ್ಟು ಬೆಳೆದ ಮರಗಳು ನೆಲ್ಲಕ್ಕುರುಳಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಬಿರುಗಾಳಿ ಮಳೆಯಿಂದ ರೈತರ ಬೆಳೆಗಳು ಹಾಳಾಗುವುದರ ಜೊತೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದು ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ತೀವೃತರ ಸಮಸ್ಯೆಯಾಗುತ್ತಿದೆ. ವಿದ್ಯುತ್ ಇಲ್ಲದೆ ಜೀವನವೆ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇಡೀ ರಾತ್ರಿ ವಿದ್ಯುತ್ ಸಮಸ್ಯೆಯಾದರೆ ರೈತರ ಜೀವನ ಹೇಗೆ ಎನ್ನುವಂತಾಗಿದೆ. ಸಾಧ್ಯವಾದಷ್ಟು ಬೆಸ್ಕಾಂ ಸಿಬ್ಬಂದಿ ಹಾಳಾಗಿರುವ ಕಂಬಗಳ ದುರಸ್ಥಿ ಮಾಡಿ ವಿದ್ಯುತ್ ಸೌಲಭ್ಯ ನೀಡುತ್ತಿದ್ದಾರೆ. ಆದರೆ ಸಿಬ್ಬಂದಿ ಕೊರತೆ ಸಾಕಷ್ಟಿದ್ದು ಈ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸಬೇಕಿದೆ ಎನ್ನುತ್ತಾರೆ ಕಾಂಗ್ರೇಸ್ ಮುಖಂಡ ಶಂಕರಾನಂದ.
ಕೊರೊನಾ ಹಿನ್ನಲೆಯಲ್ಲಿ ಜನಸಾಮಾನ್ಯರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಅನಿವಾರ್ಯವಾಗಿದೆ ಆದ್ದರಿಂದ ಹೆಚ್ಚಿನ ಸಿಬ್ಬಂದಿ ನೇಮಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಆಗಾಗ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವತ್ತ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಶಂಕರಾನಂದ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/05/photo3-scaled-e1620974841511.jpg)