ಕೋವಿಡ್ ಸಂಕಷ್ಟ : ಜನ ಸಾಮಾನ್ಯರಿಗೆ ಎಟುಕದ ಆರೋಗ್ಯ ಸೇವೆ

 ಗುಬ್ಬಿ:

      ಕೋವಿಡ್ ಹೊಡೆತಕ್ಕೆ ಸಿಕ್ಕ ಅದೆಷ್ಟೊ ಶ್ರಮ ಜೀವಿಗಳು ಕೆಲಸವಿಲ್ಲದೆ ಮನೆ ಸೇರಿ 1 ವರ್ಷಗಳೆ ಆಯಿತು. ಬೀದಿ ಬದಿಯ ವ್ಯಾಪಾರಿಗಳು, ಹಣ್ಣು ತರಕಾರಿಯವರು, ಚಪ್ಪಲಿ ಹೊಲಿದು ಜೀವನ ಮಾಡುತ್ತಿದ್ದ ಚಮ್ಮಾರರು, ರೈತರ ಬದುಕಿಗೆ ಸಹಕಾರಿಯಾಗಿದ್ದ ಕುಲುಮೆಯವರು, ಗಾರೆ ಕೆಲಸದವರು, ಕುಲಕಸಬುಗಳನ್ನು ನಂಬಿ ಕೊಂಡಿದ್ದ ಜನರ ಜೀವನ ಮೂರಾಬಟ್ಟೆಯಾಗಿದೆ. ಅವರಿಗೆ ಬೇರೆ ಉದ್ಯೋಗ ಮಾಡಲು ಗೊತ್ತಿಲ್ಲ, ಅವರೆಲ್ಲ ಹಣ ಕೂಡಿಟ್ಟಿಲ್ಲ ಅವತ್ತಿನ ಬದುಕು ಅವತ್ತಿಗೆ ಎಂಬಂತೆ ಜೀವನ ಸಾಗಿಸುತ್ತಿದ್ದರು. ಕೋರೊನಾ ಸಂಕಷ್ಟದಿಂದಾಗಿ ಇವರ ಮುಂದಿನ ದಿನಗಳು ಮಂಜಾಗಿವೆ.

      ಇಡೀ ಪ್ರಪಂಚದ ಜನರನ್ನು ನಡುಗಿಸಿ ಹಲವರನ್ನು ಚಿರ ನಿದ್ರೆಗೆ ಜಾರಿಸಿದ ಕೊರೋನಾ ಸದ್ಯ ಸರ್ಕಾರದ ಸೋಂಕು ನಿಯಂತ್ರಣ ಉಪಕ್ರಮಗಳ ಮೂಲಕ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ. ಕೊರೋನಾ ತಲ್ಲಣಗಳಿಗೆ ತಾಲ್ಲೂಕೆನೂ ಹೊರತಲ್ಲ, ನಿರಂತರವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನರು ಅಂತರವಿಲ್ಲದೆ, ಮಾಸ್ಕ್ ಧರಿಸದಿದ್ದರೆ ಯಾರೂ ಏನೂ ಮಾಡಲಾಗದು.

      ತಾಲ್ಲೂಕಿನಲ್ಲಿ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆ ಕಾರ್ಯ ನಿರ್ವಹಿಸುತ್ತವೆ ಎಂದು ಅಧಿಕಾರಿಗಳು ಪುಸ್ತಕಗಳಲ್ಲಿ ತೋರಿಸುತ್ತಾರೆ ಆದರೇ ತಾಲ್ಲೂಕು ವೈದ್ಯಾಧಿಕಾರಿಯಾಗಲಿ ಇತರ ಯಾವ ವೈದ್ಯರುಗಳು ಸಹ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ವಾಸವಾಗಿಲ್ಲ. ಇದು ಇವರ ಸೇವೆಗೆ ಹಿಡಿದ ಕೈ ಕನ್ನಡಿ ಎನ್ನಬಹುದು.

      ರಾತ್ರಿ ಹೊತ್ತು ತುರ್ತು ಚಿಕಿತ್ಸೆಗೆ ರೋಗಿಗಳೇನಾದರೂ ಬಂದಲ್ಲಿ ನಗರಗಳ ದೊಡ್ಡಾಸ್ಪತ್ರೆಯ ಪಾಲಾಗುತ್ತಾರೆ. ಗಟ್ಟಿ ಜೀವಗಳು ಉಳಿದುಬಂದರೆ ಇನ್ನು ಕೆಲವರು ಮತ್ತೊಮ್ಮೆ ಹುಟ್ಟಿ ಬಾ ಗೆಳೆಯ ಎಂಬ ಫ್ಲೆಕ್ಸ್‍ಗಳನ್ನು ಹಾಕಿಸಿಕೊಂಡು ತಾಲ್ಲೂಕಿನ ಎಲ್ಲ ಸರ್ಕಲ್‍ಗಳನ್ನು ಅಲಂಕರಿಸುತ್ತಾರೆ.

     ತಾಲ್ಲೂಕಿನಲ್ಲಿ ಗಣಿಬಾಧಿತ ಪ್ರದೇಶದ ಹಣವಿದೆ, ಕೈಗಾರಿಕೋದ್ಯಮಿಗಳಿದ್ದಾರೆ, ಹಲವು ರಾಜಕಾರಣಿಗಳು ಮೊದಲನೆಯ ಅಲೆಯ ಪ್ರಾರಂಭದಿಂದಲೂ ಪಡಿತರ ಕಿಟ್‍ಗಳನ್ನು ಬಡಜನರಿಗೆ ನೀಡುವುದರ ಮೂಲಕ ಸಮಾಜಮುಖಿಗಳಾಗಿದ್ದಾರೆ. ಸಮಾಜದ ಎಲ್ಲ ವರ್ಗದ ಜನಗಳಿಗೆ ಊಟದ ಪೊಟ್ಟಣಗಳನ್ನು ನೀಡಿದ್ದಾರೆ. ಆದರೆ ಇಲ್ಲಿನ ಕೆಲವು ವೈದ್ಯರು ಮಾತ್ರ ಯಾರ ಕೈಗೂ ಸಿಗದ ಹಾಗೆ ಓಡಾಡಿಕೊಂಡಿದ್ದಾರೆ.

      ತಾಲ್ಲೂಕಿನ 19 ಪ್ರಾ.ಆರೋಗ್ಯ ಕೇಂದ್ರಗಳಲ್ಲೂ ಪ್ರಯೋಗಾಲಯಗಳಿದ್ದು, ಇದುವರೆವಿಗೂ ಜನರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಇನ್ನು ಆಮ್ಲಜನಕ ಸಾಂದ್ರಕಗಳನ್ನು ಕೆಲವು ದಾನಿಗಳು ಕೊಟ್ಟಿದ್ದು, ಎಲ್ಲಾ ಕಡೆ ಇವುಗಳ ಸೌಲಭ್ಯ ಇರುವುದಿಲ್ಲ.
ಎಂ.ಎನ್.ಕೋಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು ಇಲ್ಲಿಯವರೆಗೆ ಕೊರೋನಾ ಬಾಧಿತರಿಗೆ ಯಾವುದೇ ರೀತಿಯ ಸೌಲಭ್ಯ ಇಲ್ಲಿ ದೊರಕಿಲ್ಲ. ಎಂ.ಎನ್.ಕೋಟೆ ಸಮೀಪದವರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ತಿಮ್ಮೇಗೌಡರ ಪತ್ನಿ ಕಳೆದ ತಿಂಗಳು ಕೊರೋನದಿಂದ ಮೃತಪಟ್ಟಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.

      ತಾಲ್ಲೂಕು ಕೇಂದ್ರದಲ್ಲಿರುವ ಸರ್ಕಾರಿ ಜನರಲ್ ಆಸ್ಪತ್ರೆಯ ವಿಚಾರ ಹೇಳುವುದಾದರೆ ಇಲ್ಲಿ ಎಲ್ಲಾ ಇದ್ದು ಯಾವುದು ಇಲ್ಲದಂತಾಗಿದೆ. ಆಸ್ಪತ್ರೆಯು ಸೌಲಭ್ಯಗಳಿಂದ ವಂಚಿತವಾಗಿದ್ದು, ಯಾವುದೋ ಕಾಣದ ಕೈ ಎಲ್ಲರನ್ನು ಕಟ್ಟಿಹಾಕಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೆ ಇರುವ ಈ ಆಸ್ಪತ್ರೆ 24 ಗಂಟೆಗಳು ಕಾರ್ಯ ನಿರ್ವಹಿಸುತ್ತಿದ್ದು ಸೌಲಭ್ಯಗಳಿಂದ ವಂಚಿತವಾಗಿದೆ. ಸುಮಾರು 60 ಲಕ್ಷ ರೂ. ಗಳಷ್ಟು ಆಯುಷ್ಮಾನ್ ಭಾರತ್ ಯೋಜನೆಯ ಹಣವಿದ್ದು ಈ ಹಣವನ್ನು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಯಾವ ಆರೋಗ್ಯ ಕಾರ್ಯಕ್ಕೂ ಉಪಯೋಗಿಸುತ್ತಿಲ್ಲ, ಪ್ರಯೋಗಾಲಯಗಳು ಸರಿಯಾಗಿ ಕಾರ್ಯನಿರ್ವಹಿಸದೆ ಬಡ ರೋಗಿಗಳು ಖಾಸಗಿ ಪ್ರಯೋಗಾಲಯಗಳನ್ನು ಅವಲಂಬಿಸುವಂತಾಗಿದೆ. ಇಲ್ಲಿನ ಎಕ್ಸ್‍ರೇ ಮಿಷನ್ ಸುಮಾರು ಇಪ್ಪತ್ತು ವರ್ಷ ಹಳೆಯದಾಗಿದ್ದು, ಈ ಯಂತ್ರ ಒಂದು ಎಕ್ಸ್‍ರೇ ಪ್ರತಿ ತೆಗೆಯಲು ಇಪ್ಪತ್ತು ನಿಮಿಷಗಳಿಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಆಸ್ಪತ್ರೆಗೆ ಡಿಜಿಟಲ್ ಎಕ್ಸರೇ ಯಂತ್ರದ ಅವಶ್ಯಕತೆ ಇದ್ದು, ಕೊರೋನಾ ನಂತರ ಯಂತ್ರ ಬರುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಕೋವಿಡ್ ಕಷ್ಟದಲ್ಲೂ ಜನರ ಆರೋಗ್ಯ ವಿಚಾರದಲ್ಲಿ ಕೆಲವರು ವ್ಯಾಪಾರ ಮಾಡುತ್ತಿದ್ದು ಇಂತವರಿಗೆ ಹಲವರ ರಕ್ಷಣೆ ಇದೆ.

      ಮಾನ್ಯ ಶಾಸಕರು ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಕಾರ್ಯ ಪಡೆಗಳ ಸಭೆಗಳನ್ನು ಮಾಡುವುದರ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕೊರೋನ ನಿಯಂತ್ರಣಕ್ಕೆ ಕಾರಣರಾಗಿದ್ದಾರೆ. ಗ್ರಾ.ಪಂ.ಕಾರ್ಯಕರ್ತರಿಗೆ ಕಾರ್ಯಪಡೆಗಳು ದಿನಸಿ ಕಿಟ್‍ಗಳನ್ನು ವಿತರಿಸುವುದರ ಮೂಲಕ ತಾಲ್ಲೂಕಿನ ಎಲ್ಲ ಪಂಚಾಯಿತಿಗಳು ಮೊದಲ ಮತ್ತು ಎರಡನೆ ಅಲೆಗಳನ್ನು ನಿಯಂತ್ರಿಸುವಲ್ಲಿ ಕಾರ್ಯನಿರ್ವಹಿಸಿವೆ.

      ಮುಂದೆ ಮೂರನೇ ಅಲೆ ಮಕ್ಕಳಿಗೆ ಬರುತ್ತದೆ ಎಂದು ತಿಳಿದಿದೆಯಾದರೂ ಈ ನಿಟ್ಟಿನಲ್ಲಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆಗಳ ಸೇವೆಗಳನ್ನು ಒದಗಿಸುವುದರ ಜೊತೆಗೆ ಆಕ್ಸಿಜನ್ ಸಹಿತ 10 ಹಾಸಿಗೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಾಗುತ್ತದೆ ಕಾರಣ ಸೂಕ್ಷ್ಮವಾದ ಮಕ್ಕಳಿಗೆ ಕೊರೋನ ಪರಿಣಾಮ ಹೆಚ್ಚಾಗಿರುತ್ತದೆ.

ಕೊರೋನಾ ಗೆದ್ದು ಬಂದವರ ಕಥೆ:

       ನನಗೆ 4 ದಿನ ಜ್ವರವಿತ್ತು ಐದನೇ ದಿನಕ್ಕೆ ಜಿಲ್ಲಾಸ್ಪತ್ರೆಗೆ ಪರೀಕ್ಷೆಗೆಂದು ಹೋದೆ, ಅಲ್ಲಿ ಸಿಟಿಸ್ಕ್ಯಾನ್ ಮಾಡಿದಾಗ ಅದರ ರೇಟ್ 25 ರಿಂದ 12 ಇಳಿದಿತ್ತು. ಇದನ್ನು ನೋಡಿದ ವೈದ್ಯರು ಆಸ್ಪತ್ರೆಗೆ ದಾಖಲಾಗಲು ತಿಳಿಸಿದರು. ಆಗ ನನಗೆ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆ ಎಲ್ಲಿಗೆ ದಾಖಲಾಗುವುದು ಎನ್ನುವ ಜಿಜ್ಞಾಸೆ ಮೂಡಿ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೇ 7 ದಿನ ಕಡ್ಡಾಯವಾಗಿ ಇರಲು ಹೇಳಿ 1 ದಿನಕ್ಕೆ 25-30 ಸಾವಿರ ರೂ. ಚಾರ್ಜ್ ಮಾಡುತ್ತಾರೆಂಬ ಸುದ್ದಿಯಿದ್ದರಿಂದ ಇಷ್ಟೇ ಸೌಲಭ್ಯಗಳಿರುವ ಜಿಲ್ಲಾಸ್ಪತ್ರೆಗೆ ದಾಖಲಾದೆ. ಇಲ್ಲಿ ನನಗೆ ಎಲ್ಲಾ ಸೌಲಭ್ಯಗಳು ದೊರಕಿದವು. ಶೌಚಾಲಯದ ಶುಚಿತ್ವದ ಬಗ್ಗೆ ಸ್ವಲ್ಪ ಬೇಜಾರಾಯಿತು ಅದನ್ನು ಬಿಟ್ಟರೇ ಊಟ-ಉಪಚಾರ, ಸಿಬ್ಬಂದಿಯ ಶುಶ್ರೂಷೆ ಮೆಚ್ಚತಕ್ಕಂತದ್ದು, ಯಾವ ವೈರಿಗೂ ಈ ಕಾಯಿಲೆ ಬಾರದಿರಲಿ

-ಕೆ.ಕರುಣಾಕರ ಶೆಟ್ಟಿ, ಜಿಲ್ಲಾ ಪಂಚಾಯತ್ ನೌಕರ, ಗುಬ್ಬಿ ನಿವಾಸಿ

ರಾಜೇಶ್ ಗುಬ್ಬಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link