ಗುಬ್ಬಿ :
ಮೂಲ ಸೌಲಭ್ಯ ವಂಚಿತ ಇಂಗಳದಕಾವಲ್ ಗ್ರಾಮಸ್ಥರನ್ನು ಅತಂತ್ರ ಸ್ಥಿತಿಗೆ ನೂಕಿರುವ ಚುನಾವಣಾ ಅಧಿಕಾರಿಗಳು ಜಿಪಂ ಮತ್ತು ತಾಪಂ ಪುನರ್ ವಿಂಗಡಣೆಯಲ್ಲಿ ಹಾಲಿ ಇರುವ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಿಂದ ದೂರ ಮಾಡಿ ಬಹುದೂರದ ಕುನ್ನಾಲ ಜಿಪಂ ಮತ್ತು ಕೊಪ್ಪ ತಾಪಂ ಕ್ಷೇತ್ರಕ್ಕೆ ಸೇರ್ಪಡೆ ಮಾಡಿ ಇಲ್ಲಿನ ಸಾರ್ವಜನಿಕರನ್ನು ಎಡಬಿಡಂಗಿಗಳಾಗಿಸಿ ಡೋಲಾಯಮಾನ ಸ್ಥಿತಿಗೆ ದೂಡಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಮತದಾರರು ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಬ್ಯಾಡಿಗೆರೆ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗಳದಕಾವಲ್ (ಅತ್ತಿಗೇನಹಳ್ಳಿ) ಎಂಬ 15 ಮನೆಗಳ ಪುಟ್ಟ ಗ್ರಾಮದಲ್ಲಿ 45 ಮತದಾರರಿದ್ದಾರೆ. ಹೊಸಹಳ್ಳಿಗೆ ಕೂಗಳತೆಯ ಈ ಸಣ್ಣ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಲು ಬ್ಯಾಡಿಗೆರೆ ಕ್ಷೇತ್ರದ ಒರ್ವ ಗ್ರಾಪಂ ಸದಸ್ಯರೊಬ್ಬರೆ ಹೋಗಬೇಕಿದೆ. ಉಳಿದಂತೆ ಯಾವ ಚುನಾಯಿತ ಪ್ರತಿನಿಧಿಗಳ ಕಣ್ಣಿಗೆ ಬೀಳದ ಈ ಪುಟ್ಟ ಗ್ರಾಮ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಮ್ಮನಘಟ್ಟ (ಕಸಬ) ಜಿಪಂ ಕ್ಷೇತ್ರಕ್ಕೆ ಒಳಪಟ್ಟು ಜಿ.ಹೊಸಹಳ್ಳಿ ತಾಪಂ ಕ್ಷೇತ್ರಕ್ಕೆ ಸೇರಬೇಕಾದ ಈ ಗ್ರಾಮವನ್ನು ಪುನರ್ ವಿಂಗಡಣೆ ಹೆಸರಿನಲ್ಲಿ ದೂರದ ಕುನ್ನಾಲ (ಕಡಬ) ಜಿಪಂ ಕ್ಷೇತ್ರ ಹಾಗೂ ಕೊಪ್ಪ ತಾಪಂ ಕ್ಷೇತ್ರಕ್ಕೆ ಒಳಪಡಿಸಿ ಅನ್ಯಾಯವೆಸಗಿದ್ದಾರೆಂದು ಸ್ಥಳೀಯರು ಕಿಡಿಕಾರಿದ್ದಾರೆ.
ಮೊದಲಿನಿಂದಲೂ ತೋಟದಮನೆಗಳನ್ನು ಕಟ್ಟಿಕೊಂಡು ಮಜರೆ ಗ್ರಾಮವಾಗಿರುವ ಇಂಗಳದಕಾವಲ್‍ಗೆ ಜನಪ್ರತಿನಿಧಿಗಳ ಕೃಪಾಕಟಾಕ್ಷ ಬಿದ್ದಿರುವುದು ಕಡಿಮೆಯೆ. ಕ್ಷೇತ್ರ ಮರು ವಿಂಗಡಣೆ ಮಾಡುವ ಮುನ್ನ ಸ್ಥಳೀಯರ ಅಭಿಪ್ರಾಯ ಕೇಳಿಲ್ಲ. ಮನಬಂದಂತೆ ಅಧಿಕಾರಿಗಳು ಕ್ಷೇತ್ರ ವಿಂಗಡಿಸಿದ್ದು, ಸ್ಥಳೀಯ ಚುನಾವಣಾ ಸಿಬ್ಬಂದಿಗಳ ಗಮನಕ್ಕೂ ತಂದಿಲ್ಲ. ಎಲ್ಲಾ ಸೌಲಭ್ಯಗಳಿಂದಲೂ ವಂಚಿತವಾಗಿರುವ ಗ್ರಾಮಕ್ಕೆ ಗಾಯದ ಮೇಲೆ ಬರೆ ಎಳೆದಂತೆ ದೂರದ ಜಿಪಂ ಮತ್ತು ತಾಪಂ ಕ್ಷೇತ್ರಕ್ಕೆ ಒಳಪಡಿಸಿದರೆ ಆಯ್ಕೆಯಾದ ಜನ ಪ್ರತಿನಿಧಿಗಳನ್ನು ನಾವು ಹುಡುಕಬೇಕಾಗುತ್ತದೆ. ಬ್ಯಾಡಿಗೆರೆ ಬೂತ್‍ನಲ್ಲಿದ್ದ ಗ್ರಾಮದ 45 ಮತದಾರರ ಹೆಸರುಗಳನ್ನು ದಿಢೀರನೆ 8 ಕಿಮೀ ದೂರದ ಹೊನ್ನಶೆಟ್ಟಿಹಳ್ಳಿ ಬೂತ್‍ಗೆ ಸೇರಿಸಿದ್ದಾರೆ. ಜೊತೆಗೆ ಜಿಪಂ ಮತ್ತು ತಾಪಂ ಕ್ಷೇತ್ರವನ್ನೆ ಬೇರ್ಪಡಿಸಿ ನಮ್ಮ ಮತದಾನದ ಹಕ್ಕನ್ನೆ ಚ್ಯುತಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ಮತದಾರ ರಾಜಣ್ಣ ಬೇಸರ ವ್ಯಕ್ತಪಡಿಸಿದರು.
ನಮ್ಮ ಗ್ರಾಮವನ್ನು ದೂರದ ಕ್ಷೇತ್ರಗಳಿಗೆ ಸೇರ್ಪಡೆ ಮಾಡಲಾಗಿದೆ. ಅರ್ಧ ಕಿಮೀ ದೂರದ ಬ್ಯಾಡಿಗೆರೆ ಬೂತ್‍ನಲ್ಲಿ ಮತದಾನ ಮಾಡುವ ನಾವು ಜಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತೇವೆ. ಕಳೆದ ಗ್ರಾಪಂ ಚುನಾವಣೆಯಲ್ಲಿ ಬ್ಯಾಡಿಗೆರೆ ಮತಗಟ್ಟೆಯಲ್ಲೇ ಮತದಾನ ಮಾಡಿದ್ದು, ಪುನರ್ ವಿಂಗಡಣೆ ಹೆಸರಿನಲ್ಲಿ ಸುಮಾರು 12 ಕಿಮೀ ದೂರದ ಕೊಪ್ಪ ತಾಪಂಗೆ ಸೇರ್ಪಡೆ ಮಾಡಿ ನಮ್ಮ ಗ್ರಾಮದ ಅಭಿವೃದ್ಧಿಯನ್ನು ಮರೀಚಿಕೆ ಮಾಡಿದ್ದಾರೆ.
-ಸಿದ್ದರಾಜು, ಇಂಗಳದಕಾವಲ್ ಗ್ರಾಮಸ್ಥ
ಇಲ್ಲಿನ ಜನರ ಸ್ಥಿತಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತಾಗಿದ್ದು, ಅತಂತ್ರ ಮಾಡಿದ ಅಧಿಕಾರಿಗಳನ್ನು ಕೇಳಿದರೆ ಈಗ ಏನೂ ಮಾಡಲಾಗದು ಎಂದು ಜಾರಿಕೊಳ್ಳುವ ಉತ್ತರ ನೀಡುತ್ತಿದ್ದಾರೆ. ಪುನರ್ ವಿಂಗಡಣೆ ಪಟ್ಟಿಗೆ ಸ್ಥಳೀಯ ಬಿಎಲ್‍ಓ ಸಹಿ ಹಾಕಿಲ್ಲ. ಸ್ಥಳೀಯರ ಅಭಿಪ್ರಾಯ ಕೇಳÀದೆ ಕ್ಷೇತ್ರವನ್ನೇ ಬದಲಿಸಿ ಸವಲತ್ತು ವಂಚಿತ ಗ್ರಾಮ ಮಾಡುತ್ತಿದ್ದಾರೆ. ಈ ಸಣ್ಣ ಗ್ರಾಮವನ್ನು ದೂರದ ಜಿಪಂ ಮತ್ತು ತಾಪಂ ಕ್ಷೇತ್ರಕ್ಕೆ ಒಳಪಡಿಸಿದರೆ ಸಮಸ್ಯೆಗಳನ್ನು ಯಾರ ಬಳಿ ಹೇಳಲಿ. ಆದ್ದರಿಂದ ಹತ್ತಿರದ ಜಿ.ಹೊಸಹಳ್ಳಿ ತಾಪಂ ಮತ್ತು ಕಸಬ ಜಿಪಂ ಕ್ಷೇತ್ರಕ್ಕೆ ಮರು ಸೇರ್ಪಡೆ ಮಾಡಿ ಇಲ್ಲಿನ 60 ಮಂದಿ ಕೃಷಿಕ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಅನುವು ಮಾಡಬೇಕು.
-ಜೆ.ಎಂ.ನರಸಿಂಹಮೂರ್ತಿ, ಸ್ಥಳೀಯ ಗ್ರಾಪಂ ಸದಸ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
