ತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥ

ಗುಬ್ಬಿ :

      ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸುವುದರ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಗಾಯದ ಮೇಲೆ ಬರೆ ಎಳೆಯುತ್ತಿವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಟೀಕಿಸಿದರು.

      ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಗುಬ್ಬಿ ಪಟ್ಟಣದಲ್ಲಿ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಹಿಂದೆ ಸಣ್ಣಪುಟ್ಟ ಬೆಲೆ ಏರಿಕೆಗೂ ರಂಪ ಮಾಡುತ್ತಿದ್ದ ಬಿಜೆಪಿಯವರು ಈಗ ಮೌನಕ್ಕೆ ಶರಣಾಗಿರುವ ಕಾರಣವಾದರೂ ಏನು. ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಇವರು ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

      ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರಗಳ ವೈಫಲ್ಯ ತಿಳಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರಂತರ ಹೋರಾಟ ಮಾಡುತ್ತೇವೆ ಎಂದರು.

      ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ ಬಿಜೆಪಿ ಸರ್ಕಾರವು ಜನಸಾಮಾನ್ಯರ ಹಾಗೂ ರೈತರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಸರ್ಕಾರವು ಸಂಪೂರ್ಣವಾಗಿ ಉದ್ಯಮಿಗಳ ಪರ ನಿಂತು ಜನ ಸಾಮಾನ್ಯರನ್ನು ಶೋಷಿಸುತ್ತಿದೆ. ಕೊರೋನ ಸೋಂಕನ್ನು ಎದುರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಕೋವಿಡ್ ಲಸಿಕೆಯನ್ನು ವ್ಯವಸ್ಥಿತವಾಗಿ ಒದಗಿಸುತ್ತಿಲ್ಲ. ಸಾವಿರಾರು ಜನ ಅಮಾಯಕರು ಪ್ರಾಣ ತೆರುವಂತಾಗಲು ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಆಪಾದಿಸಿದರು. ಸಮಾಜಮುಖಿ ಹಾಗೂ ಸುಭದ್ರ ಸರ್ಕಾರವನ್ನು ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಟ ಮಾಡೋಣ ಎಂದು ಹೇಳಿದರು.

      ಕಾಂಗ್ರೆಸ್ ಪಕ್ಷದ ವೀಕ್ಷಕರಾದ ಶಫೀಉಲ್ಲಾ ಅವರು ಮಾತನಾಡಿ ದೇಶದಲ್ಲಿ ಸುಭದ್ರ ಸರ್ಕಾರವನ್ನು ರಚಿಸಿ ದೇಶದ ಏಳಿಗೆಗಾಗಿ ದುಡಿಯಲು ಸಾಧ್ಯವಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಜನರ ಹಣವನ್ನು ಲೂಟಿ ಹೊಡೆದು ಬಿಜೆಪಿಯವರು ಮೋಜು ಮಾಡುತ್ತಾ ರಾಮರಾಜ್ಯದ ಹೆಸರಿನಲ್ಲಿ ರಾಕ್ಷಸ ರಾಜ್ಯವನ್ನು ಕಟ್ಟಲು ಹೊರಟಿದ್ದಾರೆ. ಕೋವಿಡ್‍ನಿಂದಾಗಿ ಸಾವಿರಾರು ಯುವಕರು ನಿರುದ್ಯೋಗಿಗಳಾಗಿದ್ದು, ಅವರ ಬದುಕಿಗೆ ಒಂದು ದಾರಿ ತೋರಿಸಲು ಸಾಧ್ಯವಾಗದ ಇದು ಹೇಡಿ ಸರ್ಕಾರವಾಗಿದೆ. ಕೊರೋನ ಸಂದರ್ಭದಲ್ಲಿ ಶವಸಂಸ್ಕಾರ ಮಾಡಲು ಯೋಗ್ಯತೆ ಇಲ್ಲದೆ ಅಮಾನವೀಯವಾಗಿ ನಡೆದುಕೊಂಡಿದ್ದು ಖಂಡನೀಯ ಎಂದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ತಾಲೂಕಿನ ಎಲ್ಲಾ ಮುಖಂಡರು ವರಿಷ್ಠರ ನಿರ್ದೇಶನದಂತೆ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರವನ್ನು ತರಲು ಸಾಧ್ಯವಾಗುತ್ತದೆ. ನಮ್ಮ ಒಡಕಿನಿಂದ ಬೇರೆಯವರಿಗೆ ಲಾಭವಾಗಲು ಬಿಡದೆ ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.
ಪ್ರತಿಭಟನೆಯ ಅಂಗವಾಗಿ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದ ಬಳಿಯಿಂದ ತಾಲೂಕು ಕಚೇರಿವರೆಗೆ ಸೈಕಲ್ ಹಾಗೂ ಎತ್ತಿನ ಗಾಡಿಯಲ್ಲಿ ಜಾಥ ಹೊರಟು ತಾಲ್ಲೂಕು ಕಛೇರಿ ಸಮಾವೇಶಗೊಂಡ ಜಾಥಾದಲ್ಲಿ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

      ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕರಾದ ರಿಜ್ವಾನ್ ಉಲ್ಲಾಖಾನ್, ಚಂದ್ರಶೇಖರಗೌಡ, ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯ್ಯಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ಸಾಧಿಕ್, ಮುಖಂಡರಾದ ಕೆ.ಆರ್.ತಾತಯ್ಯ, ಆರ್.ನಾರಾಯಣ್, ಚಿಕ್ಕರಂಗಣ್ಣ, ಸಲೀಂ ಪಾಷಾ, ಮಂಜುನಾಥ್, ಭರತ್‍ಗೌಡ, ಶಿವಕುಮಾರ್, ರೇವಣಸಿದ್ದಯ್ಯ, ಶಾಂತಮ್ಮ, ರೂಪ, ರಫೀಕ್, ರವಿವರ್ಮ, ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap