ತುಮಕೂರು
ವಿಶೇಷ ಲೇಖನ : ರಾಕೇಶ್.ವಿ.
ನಗರದಲ್ಲಿ ನಡೆಯುತ್ತಿರುವ ಸ್ಮಾಟ್ ಸಿಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ವಿವಿಧ ಪ್ಯಾಕೇಜ್‍ಗಳಲ್ಲಿ ಹಲವು ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಕಾಮಗಾರಿ ಮಾಡಲಾಗುತ್ತಿದೆ. ಅದರಲ್ಲಿ ಪ್ಯಾಕೇಜ್ 1ರ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಆಯ್ಕೆ ಮಾಡಿಕೊಳ್ಳಲಾದ ರಸ್ತೆಗಳಲ್ಲಿ ಯಾವೊಂದು ರಸ್ತೆಯೂ ಮುಗಿದಿಲ್ಲದಿರುವುದು ವಿಪರ್ಯಾಸ.
ಸ್ಮಾರ್ಟ್ ಸಿಟಿ ವೆಬ್ ಪೋರ್ಟಲ್‍ನಲ್ಲಿನ ಮಾಹಿತಿ ಪ್ರಕಾರ ಸ್ಮಾರ್ಟ್ ರೋಡ್ ಪ್ಯಾಕೇಜ್ 1ರಲ್ಲಿ ಎಂಜಿ ರಸ್ತೆ, ಹೊರಪೇಟೆ ರಸ್ತೆ, ವಿವೇಕಾನಂದ ರಸ್ತೆ ಹಾಗೂ ಜಯಚಾಮರಾಜೇಂದ್ರ ರಸ್ತೆಗೆ ಒಟ್ಟು 27,57,00,000 ರೂ ವೆಚ್ಚ ಮಾಡಲಾಗಿದೆ. ಅದರಲ್ಲಿ ಒಂದೊಂದು ರಸ್ತೆಯ ಕಾಮಗಾರಿಯ ಬಗ್ಗೆ ಗಮನಹರಿಸಿ ನೋಡಿದರೆ ಯಾವೊಂದು ರಸ್ತೆಯೂ ಪೂರ್ಣಗೊಂಡಿಲ್ಲ.
ಸ್ಮಾರ್ಟ್ ರೋಡ್ ಪ್ಯಾಕೇಜ್ ಒಂದರಲ್ಲಿ 2.85 ಕಿಮೀ ಉದ್ದದ ರಸ್ತೆ ಅಭಿವೃದ್ಧಿಗೆ 2027.20 ಲಕ್ಷ ರೂಗಳನ್ನು ಅಂದಾಜಿಸಿ ಕಾಮಗಾರಿ ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿಯಿಂದ ಅಳವಡಿಕೆ ಮಾಡಲಾದ ಮಾಹಿತಿ ಫಲಕದಲ್ಲಿರುವಂತೆ ಈ ಕಾಮಗಾರಿಯು 2019ರ ಫೆಬ್ರುವರಿ 11ರಂದು ಪ್ರಾರಂಭ ಮಾಡಿ 12 ತಿಂಗಳ ಗಡುವಿನಂತೆ 2020ರ ಫೆಬ್ರುವರಿ 11ಕ್ಕೆ ಪೂರ್ಣಗೊಳ್ಳಬೇಕಿತ್ತು. ಈ ಕಾಮಗಾರಿಯನ್ನು ಬಿ.ಎಂ.ರಂಗೆಗೌಡ ಎಂಬ ಗುತ್ತಿಗೆದಾರರು ನಿರ್ವಹಿಸುತ್ತಿದ್ದಾರೆ ಎಂಬುದಾಗಿ ಮಾಹಿತಿಯ ಫಲಕದಲ್ಲಿ ನಮೂದು ಮಾಡಿದ್ದಾರೆ.
ಸ್ಮಾರ್ಟ್ ರೋಡ್ ಎಂದರೇನು..?
ತುಮಕೂರು ನಗರ ಪ್ರದೇಶಾಭಿವೃದ್ಧಿ ವ್ಯಾಪ್ತಿಯಲ್ಲಿ ಮಾತ್ರ ಆಯ್ಕೆ ಮಾಡಿಕೊಂಡ ಕೆಲವು ರಸ್ತೆಗಳನ್ನು ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆಯಲ್ಲಿ ಉತ್ತಮವಾದ ಪಾದಾಚಾರಿ ಮಾರ್ಗ (ಫುಟ್‍ಪಾತ್), ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಯುಟಿಲಿಟಿ ಚೇಂಬರ್‍ಗಳ ಮೂಲಕ ಅಂಡರ್‍ಗ್ರೌಂಡ್ ಕೇಬಲಿಂಗ್, ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೊಂದಿಗೆ ಹಸಿರು ವಲಯ ನಿರ್ಮಾಣ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವುದು ಸ್ಮಾರ್ಟ್ ರೋಡ್ ಯೋಜನೆಯಾಗಿದೆ.
ಮಹಾತ್ಮಗಾಂಧಿ ರಸ್ತೆ
ಎಂಜಿ ರಸ್ತೆಯಲ್ಲಿ ಕೇವಲ 16 ಚೇಂಬರ್‍ಗಳನ್ನು ಮಾಡಿ ಬಿಡಲಾಗಿದೆ ಹೊರತು ಮುಂದಿನ ಅಭಿವೃದ್ಧಿ ಕಾಮಗಾರಿ ನಡೆಯದೆ ಹಾಗೆಯೆ ಉಳಿಸಿದ್ದಾರೆ. ಈ ರಸ್ತೆಯು ಏಕಮುಖ ಸಂಚಾರ ಹೊಂದಿದೆಯಾದರೂ ವ್ಯಾಪಾರ ವಹಿವಾಟಿಗೆ ಇಲ್ಲಿಗೆ ಹೆಚ್ಚಿನ ಜನ ಬರುವುದರಿಂದ ವಾಹನ ಸಂಚಾರ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ರಸ್ತೆಯಲ್ಲಿ ಬರುವ ಧೂಳಿನಿಂದ ವ್ಯಾಪಾರ ವಹಿವಾಟು ಮಾತ್ರ ಕ್ಷೀಣಿಸಿದ್ದಲ್ಲದೆ ಜನರು ಪರದಾಡುವಂತಾಗಿದೆ.
ಎಂಜಿ ರಸ್ತೆಯ ನಕಾಶೆ
ಸ್ಮಾರ್ಟ್ ರೋಡ್‍ನ ಅಡಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಎಂಜಿ ರಸ್ತೆಯ ನಕಾಶೆ ( 3ಡಿ ಚಿತ್ರಣ ) ಮಾತ್ರ ಅದ್ಭುತವಾಗಿ ಮಾಡಲಾಗಿದೆ. ರಸ್ತೆಯ ಒಂದು ಭಾಗದಲ್ಲಿ ಕಾರುಗಳ ನಿಲುಗಡೆಗೆ ಸ್ಥಳಾವಕಾಶ, ಇನ್ನೊಂದು ಭಾಗದಲ್ಲಿ ಪಾದಾಚಾರಿ ವ್ಯವಸ್ಥೆ, ವಿದ್ಯುತ್ ಕಂಬಗಳು, ಪಾದಾಚಾರಿ ರಸ್ತೆಯಲ್ಲಿ ವಾಹನಗಳು ಬಾರದಂತೆ ಕಂಬಗಳನ್ನು ಅಳವಡಿಸುವುದು ಸೇರಿದಂತೆ ನಕಾಶೆಯಲ್ಲಿ ಮಾತ್ರ ಎಂಜಿ ರಸ್ತೆಯು ಉತ್ತಮವಾಗಿ ಕಂಡುಬರುತ್ತದೆ. ಅದರಂತೆ ಕಾಮಗಾರಿ ನಡೆಯುವುದಾ ಅಥವಾ ಕಾಲಕಾಲಕ್ಕೆ ನಕಾಶೆಯ ರೂಪುರೇಷೆಗಳು ಬದಲಾಗುವುದಾ..?
ಅಭಿವೃದ್ಧಿ ಕಾಣದ ಹೊರಪೇಟೆ ರಸ್ತೆ
ಹೊರಪೇಟೆ ರಸ್ತೆಯಂತೂ ಸಂಪೂರ್ಣ ಧೂಳಿನಿಂದ ಆವೃತವಾಗಿರುತ್ತದೆ. ಒಂದು ದಿನವೂ ಕೂಡ ಅಲ್ಲಿ ಧೂಳು ಇರುವುದಿಲ್ಲ ಎನ್ನುವಂತಿಲ್ಲ. ಅಲ್ಲಿನ ವ್ಯಾಪಾರಸ್ಥರಂತೂ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ರೋಸಿ ಹೋಗಿದ್ದಾರೆ. ಇರುವುದೆ ಇಕ್ಕಟ್ಟಾದ ರಸ್ತೆ. ಈ ರಸ್ತೆ ತುಂಬಾ ಗುಂಡಿ ಗುದ್ದರಗಳದ್ದೇ ಕಾರುಬಾರು ಆಗಿದೆ. ಈ ನಡುವೆ ಸ್ಮಾರ್ಟ್ ಸಿಟಿಯ ಕಾಮಗಾರಿ ಎಂದು ಅಗೆಯುವುದು ಬಿಟ್ಟರೆ ಇನ್ನೊಂದು ಕೆಲಸ ಆಗುತ್ತಿಲ್ಲ. ಇದರಿಂದ ನಿತ್ಯ ಧೂಳು ಕುಡಿಯುತ್ತಾ ಆಸ್ಪತ್ರೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ವ್ಯಾಪಾರಸ್ಥರು ಆರೋಪಿಸುತ್ತಿದ್ದಾರೆ.
ಈ ರಸ್ತೆಯಲ್ಲಿ 26 ಚೇಂಬರ್‍ಗಳನ್ನು ಮಾಡಿದ್ದಾರೆ. ಅದರ ಮೂಲಕ ವಿವಿಧ ಕೇಬಲ್‍ಗಳನ್ನು ಅಳವಡಿಸಲೆಂಬ ಉದ್ದೇಶದಿಂದ ವಿವಿಧ ಬಗೆಯ ಪೈಪುಗಳನ್ನು ಅಳವಡಿಸಿದ್ದಾರೆ. ಆದರೆ ಈ ಚೇಂಬರ್‍ಗಳು ಕೆಲಕಡೆ ರಸ್ತೆಗಿಂತ ಎತ್ತರ ಕೆಲಕಡೆ ರಸ್ತೆಗಿಂತ ಕೆಳಕ್ಕೆ ಇವೆ. ಇದನ್ನು ಸರಿಪಡಿಸುವುದರ ಜೊತೆಗೆ ಇಲ್ಲಿ ಪಾದಾಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್ ಇಷ್ಟೆಲ್ಲಾ ಮಾಡಲು ಸಾಧ್ಯವೇ ಎಂಬುದು ಪ್ರಶ್ನಾತೀತವಾಗಿದೆ.
ವಿವೇಕಾನಂದ ರಸ್ತೆಯ ಅಭಿವೃದ್ಧಿ
ವಿವೇಕಾನಂದ ರಸ್ತೆಯಲ್ಲಿ ಈ ಹಿಂದೆಯಿಂದಲೂ ಜೋರಾದ ಮಳೆ ಬಂದರೆ ಮಳೆ ನೀರು ನೆಲಮಹಡಿಯಲ್ಲಿರುವ ಮಳಿಗೆಗಳಿಗೆ ನುಗ್ಗುತ್ತಿತ್ತು. ಈಗಲೂ ಅದೇ ಸ್ಥಿತಿ ಮುಂದುವರೆದಿದೆಯಾದರೂ ಈಗ ಸ್ಮಾರ್ಟ್ ರಸ್ತೆಯಡಿ ಅಭಿವೃದ್ಧಿ ಮಾಡಲಾಗುತ್ತಿರುವ ರಸ್ತೆಗಳಲ್ಲಿ ವಿವೇಕಾನಂದ ರಸ್ತೆಯೂ ಒಂದಾಗಿದ್ದರಿಂದ ಸಮಸ್ಯೆ ಪರಿಹಾರವಾಗಬಹುದು ಎಂಬ ನಂಬಿಕೆ ಇದೆ. ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕಾದ ಈ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನು ಕಾಮಗಾರಿ ಹಂತದಲ್ಲಿಯೆ ಇದೆ. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನ ಹರಿಸಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡಿ ಕಾಮಗಾರಿ ಪೂರ್ಣಗೊಳಿಸಿದರೆ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಜೆಸಿ ರಸ್ತೆಯಲ್ಲಿ ನಿತ್ಯ ಕಿರಿಕಿರಿ
ಜಯಚಾಮರಾಜೇಂದ್ರ ರಸ್ತೆಯಲ್ಲಂತೂ ತೀವ್ರತರವಾಗಿ ಸಮಸ್ಯೆ ಉಂಟಾಗುತ್ತಿದೆ. ಈ ಮೊದಲು ಮಂಡಿಪೇಟೆಗೆ ಹೋಗುವವರು ಹಾಗೂ ಮಾರುಕಟ್ಟೆಗೆ ತೆರಳುವವರು ಮಾತ್ರ ಹೆಚ್ಚಾಗಿ ಓಡಾಡುತ್ತಿದ್ದರು. ಇದೀಗ ಇದೇ ರಸ್ತೆಯಲ್ಲಿಯೆ ಬಸ್ ನಿಲ್ದಾಣ ಇರುವುದರಿಂದ ವಾಹನಗಳ ಸಂಖ್ಯೆ ಹಾಗೂ ನಿತ್ಯ ಓಡಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಹೆಚ್ಚಿನದಾಗಿ ಗುಂಡಿಗಳು ಬಿದ್ದಿರುವುದರಿಂದ ಓಡಾಡುವವರು ಪರದಾಡುವಂತಾಗಿದೆ.
ನಗರದಲ್ಲಿನ ವಿವಿಧ ರಸ್ತೆಗಳಲ್ಲಿ ಒಂದಾನೊಂದು ಸಮಸ್ಯೆಯಿಂದ ಸ್ಥಳೀಯರು ಪರದಾಡುತ್ತಲೆ ಇದ್ದಾರೆ. ಕಾಮಗಾರಿ ಮಾಡುವಾಗ ಸ್ವಲ್ಪ ಸಮಸ್ಯೆ ಎದುರಾದರೂ ಯಾವುದಕ್ಕೂ ಗಮನ ಕೊಡದೆಯೇ ಇರುವುದರಿಂದ ಗುತ್ತಿಗೆದಾರರು ತಮಗೆ ತೋಚಿದಂತೆ ತಾವು ಕೆಲಸ ಮಾಡಿ ಹೋಗುತ್ತಾರೆ. ಕೆಲಸ ಮುಗಿದು ಆರೇ ತಿಂಗಳಲ್ಲಿ ಕೆಟ್ಟುಹೋಗುತ್ತದೆ. ಈ ವಿಚಾರದಲ್ಲಿ ಅಧಿಕಾರಿಗಳ ಜೊತೆಯಲ್ಲಿ ಸಾರ್ವಜನಿಕರೂ ಗಮನ ಹರಿಸಿ ಕಾಮಗಾರಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕಿದೆ.
ಎಂಜಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಸಮಸ್ಯೆಗಳು ತಲೆ ಏಳುತ್ತಲೇ ಇವೆ. ಇಂದು ನಾಳೆ ಸರಿಹೋಗುತ್ತದೆ ಎಂಬ ಭ್ರಮೆಯಲ್ಲಿಯೆ ಜನ ಇದ್ದಾರೆ. ಆದರೆ ಇಲ್ಲಿ ಕಾಮಗಾರಿ ಮುಗಿಸಲು ನೀಡಲಾದ ಸಮಯ ಮೀರಿದರೂ ಇನ್ನೂ ಕೆಲಸ ಪೂರ್ಣಗೊಳ್ಳದಿರುವುದು ವಿಪರ್ಯಾಸ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.
ವಿನೋದ, ಸ್ಥಳೀಯರು
ಕಾಮಗಾರಿ ಪ್ರಾರಂಭ ಆದಾಗಿನಿಂದಲೂ ವ್ಯಾಪಾರ ಕ್ಷೀಣಿಸಿದ್ದು, ಜೀವನ ಮಾಡುವುದು ಕಷ್ಟಕರವಾಗಿದೆ. ಕಾಮಗಾರಿ ಮಾಡುವವರು ಸೂಕ್ತ ಸೌಲಭ್ಯಗಳನ್ನು ಇಟ್ಟುಕೊಂಡು ನೀಡಲಾದ ಸಮಯದೊಳಗೆ ಮುಗಿಸಬೇಕು. ಆದರೆ ಈಗ ನಡೆಯುತ್ತಿರುವ ಕಾಮಗಾರಿಗಳಿಂದ ಸಮಸ್ಯೆಗಳು ಉಂಟಾಗುತ್ತಿವೆಯೇ ಹೊರತು ಪರಿಹಾರ ಸಿಗುತ್ತಿಲ್ಲ.
ರಮೇಶ್, ವ್ಯಾಪಾರಿ
ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸ್ಮಾರ್ಟ್ ಸಿಟಿ ಎಂಡಿ ಟಿ.ಭೂಬಾಲನ್, 11 ಜನ ಗುತ್ತಿಗೆದಾರರಿಂದ ಒಟ್ಟು 1.53 ಕೋಟಿ ರೂ ದಂಢ ವಿಧಿಸಿರುವುದು ಶ್ಲಾಘನೀಯ. ವಿವಿಧ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರು ವಿಳಂಭ ಮಾಡಿದ್ದಾರೆ ಎಂಬ ಕಾರಣಕ್ಕೆ ದಂಢ ವಿಧಿಸಿದ್ದಾರೆ. ಅದೇ ರೀತಿ ಈಗಾಗಲೇ ಗಡುವು ಮುಗಿದರೂ ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲದೆ ಇರುವ ಗುತ್ತಿಗೆದಾರರಿಗೆ ಎಷ್ಟು ದಂಡ ಹಾಕುತ್ತಾರೆ ಎಂಬುದು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
