ಗುಬ್ಬಿ :
ಸ್ಥಳೀಯ ಚುನಾವಣೆಯ ಮೀಸಲಾತಿ ವಿಚಾರದಲ್ಲಿ ಆಡಳಿತರೂಢ ಪಕ್ಷದ ಮುಖಂಡರು ಹಸ್ತಕ್ಷೇಪ ಮಾಡಲು ಸಾಧ್ಯ. ಆದರೆ ಮೀಸಲಾತಿ ವಿಚಾರದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಚರ್ಚೆ ಮಾಡುವುದು ಅಪ್ರಸ್ತುತ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಂಜೂರಾದ ಹೇರೂರು-ವದಲೂರು ಮಾರ್ಗದ ಮೂಲಕ ಬೆಲವತ್ತ ಗ್ರಾಮ ಸಂಪರ್ಕಿಸುವ 3.50 ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಬಾರಿ ಜಿಪಂ ಮತ್ತು ತಾಪಂ ಚುನಾವಣೆಯ ಮೀಸಲಾತಿಯಲ್ಲಿ ಅವೈಜ್ಞಾನಿಕ ನಿರ್ಧಾರ ಕೈಗೊಳ್ಳಲಾಗಿದೆ. ಹಲವು ಕ್ಷೇತ್ರಗಳಲ್ಲಿ ಮೀಸಲಾತಿಯು ಈ ಬಾರಿಯೂ ಮುಂದುವರೆದ ನಿದರ್ಶನ ಸಾಕಷ್ಟಿದೆ. ಈ ಗೊಂದಲವು ಜಿಲ್ಲೆಯಾದ್ಯಂತ ಕಂಡು ಬಂದಿದೆ. ಆದರೆ ಇಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ನನ್ನ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ ಎಂದರು.
ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ಕೆಲಸಗಳಿಗೆ ಚುರುಕು ನೀಡಲಾಗಿದೆ. ಕೋವಿಡ್ ಹಿನ್ನಲೆಯಿಂದ ಈಗಾಗಲೇ ಅಭಿವೃದ್ಧಿ ಕಾರ್ಯಗಳು ವಿಳಂಬವಾದ ಕಾರಣ ಎಲ್ಲಾ ಕೆಲಸಗಳನ್ನು ತಾಲ್ಲೂಕಿನಾದ್ಯಂತ ಏಕಕಾಲದಲ್ಲಿ ಆರಂಭಿಸಲಾಗಿದೆ. ಸ್ಥಳೀಯ ಚುನಾವಣೆ ಘೋಷಣೆಗೆ ಮುನ್ನ ಸಾಕಷ್ಟು ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಜಿಲಾನಿ, ಶ್ರೀನಿವಾಸ್, ಸಿ.ಕೆ.ಪಾಂಡು, ಶಿವಣ್ಣ, ಮುಖಂಡರಾದ ಕೆ.ಆರ್.ವೆಂಕಟೇಶ್, ವದಲೂರು ವಿಜಯ್ಕುಮಾರ್, ಶಿವಪ್ಪ, ರಂಗನಾಥ್, ಬಾಲಾಜಿ, ಜೆಸಿಬಿ ರವೀಶ್, ಎಇಇ ವಿಜಯ್ಕುಮಾರ್, ಜೆಇ ಚಂದ್ರಶೇಖರ್, ಗುತ್ತಿಗೆದಾರ ಶಿವಾನಂದಯ್ಯ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ