ಗುಬ್ಬಿ :
220 ಕೆವಿ ಹೈಟೆನ್ಷನ್ ಕೆಳಗೆ ನಡೆದಿರುವ ಪಟ್ಟಣದ ವಿವೇಕಾನಂದ ವಿದ್ಯಾಪೀಠ ಶಾಲೆಯನ್ನು ಸ್ಥಳಾಂತರಗೊಳಿಸಿ ನೂರಾರು ಮಕ್ಕಳನ್ನು ರಕ್ಷಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕವು ಸೋಮವಾರ ಪ್ರತಿಭಟನೆ ನಡೆಸಿತು.
ಅಧಿಕಾರಿಗಳಿಂದ ಜಾಣ ಮೌನ :
ಜಯ ಕರ್ನಾಟಕ ಪದಾಧಿಕಾರಿಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ವಿದ್ಯುತ್ ತಂತಿ ಕೆಳಗೆ ಶಾಲೆ ನಡೆಸಲು ಅನುಮತಿ ನೀಡಿದ್ದು ತಪ್ಪು, ಈ ಬಗ್ಗೆ ಶಾಸಕರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಿದ್ದರು. ಆದರೂ ಅಲ್ಲಿನಿಂದ ಇಲ್ಲಿಯವರೆಗೆ ತಿಳಿದು ತಿಳಿಯದ ಹಾಗೆ ಅಧಿಕಾರಿಗಳು ಜಾಣ ಮೌನವಹಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಇನ್ನೊಂದು ಕಟ್ಟಡವನ್ನು ಹೊಸದಾಗಿ 110 ಕೆವಿ ಲೈನ್‍ಗೆ ಕೇವಲ 3 ಮೀಟರ್ ಅಂತರದಲ್ಲಿ ಕಟ್ಟಿದ್ದಾರೆ. ವಿದ್ಯುತ್ ಇಲಾಖೆ ಜಾಣ ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗುಬ್ಬಿ ಪ.ಪಂ ಹಾಗೂ ತಾಲ್ಲೂಕು ಆಡಳಿತ ಮುಂದೆ ಆಗಬಹುದಾದ ಅನಾಹುತಗಳಿಗೆ ಹೊಣೆಗಾರಿಕೆಯನ್ನು ಹೊರಬೇಕಾದಿತು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಕರೀಕೆರೆ ದುರಂತದಿಂದ ಕಲಿಯದ ಪಾಠ :
ತುಮಕೂರು ತಾಲ್ಲೂಕಿನ ಕರೀಕೆರೆ ಗ್ರಾಮದಲ್ಲಿ ವಿದ್ಯುತ್ ತಂತಿಯಿಂದ ಒರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಈ ರೀತಿಯ ಘಟನೆ ನಮ್ಮಲ್ಲಿ ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಈ ಶಾಲೆಯನ್ನು ಸ್ಥಳಾಂತರಿಸಲು ಆಗ್ರಹಿಸಿದರು. 20 ವರ್ಷಗಳಿಂದಲೂ ಕಾನೂನು ಬಾಹಿರವಾಗಿ ಶಾಲೆ ನಡೆಸಲು ಅಧಿಕಾರಿಗಳು ಕುಮ್ಮಕ್ಕು ನೀಡಿರುವುದೇ ಈ ದುಸ್ಥಿತಿಗೆ ಕಾರಣವಾಗಿದೆ. ಸ್ಥಳೀಯ ಪಪಂನವರು ಲೈಸನ್ಸ್ ಇಲ್ಲದೆ ಕಟ್ಟಡ ನಿರ್ಮಾಣವಾಗಿರುವ ದೂರು ಇದ್ದರೂ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ. ಬೆಸ್ಕಾಂ ಇಲಾಖೆ ಹೈ ಟೆಂಕ್ಷನ್ ಕಂಬದಡಿಯ ಬಫರ್ ಜೋನ್ ಒತ್ತುವರಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಜೊತೆಗೆ ಕಂದಾಯ ಇಲಾಖೆ ಎನ್‍ಓಸಿ ನೀಡಿರುವುದು ಆತಂಕಕಾರಿಯಾಗಿದೆ.
ಕಿಟಕಿಗೆ ಸಿಗುವ ವಿದ್ಯುತ್ ವೈರ್ :
ಹೈ ಟೆಂಕ್ಷನ್ ವೈರ್ ಕೆಳಭಾಗದಲ್ಲಿ ನಿರ್ಮಾಣವಾದ ಕಟ್ಟಡವು ವೈರ್‍ಗೆ ತಗುಲುವ ಹಂತದಲ್ಲಿದೆ. ಕಿಟಿಕಿಯ ಮೂಲಕ ಕೈ ಗೆಟಕುವ 220 ಕೆವಿ ಮತ್ತು 110 ಕೆವಿ ಸಾಮಥ್ರ್ಯದ ತಂತಿ ಒಮ್ಮೆಲೇ ನೂರಾರು ಮಕ್ಕಳನ್ನು ಬಲಿ ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆ 10 ವರ್ಷದಿಂದ ನಿರಂತರ ಹೋರಾಟ ಮಾಡಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮವಾಗಿ ಶಾಲೆ ನಡೆದಿದೆ. ಈ ಬಗ್ಗೆ ವಾರದ ಹಿಂದೆ ದೂರು ನೀಡಿದರೂ ಕ್ರಮ ವಹಿಸದ ಹಿನ್ನಲೆಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಅರುಣ್‍ಕುಮಾರ್ ತಿಳಿಸಿದ್ದಾರೆ.
ಖಾಸಗಿ ಶಾಲೆಯವರಿಂದ ಲಾಭಿ :
ಸದರಿ ಶಾಲೆಯವರು ಲಾಭಿ ನಡೆಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದರು. ಲಾಭಿ ಮಾಡಿ ಅಧಿಕಾರಿಗಳನ್ನು ಮೌನಕ್ಕೆ ತರಬಲ್ಲ ಶಿಫಾರಸ್ಸು ಮಾಡಿಸುವ ಸಂಸ್ಥೆಗೆ ಕಡಿವಾಣ ಹಾಕುವ ಇಲಾಖಾಧಿಕಾರಿಗಳು ಇಲ್ಲವಾಗಿದ್ದಾರೆ. ಸಾಮಾಜಿಕ ಕಳಕಳಿ ಇಟ್ಟು ನೂರಾರು ಮಕ್ಕಳ ಜೀವ ಕಾಪಾಡುವ ಈ ಹೋರಾಟಕ್ಕೆ ಬಣ್ಣ ಹಚ್ಚಿ ಪ್ರತಿಭಟನಾನಿರತರ ವಿರುದ್ಧ ಹಣಕ್ಕೆ ಬೇಡಿಕೆ ಇಟ್ಟ ಸಲ್ಲದ ಆರೋಪವನ್ನು ಹಬ್ಬಿಸಿದ್ದಾರೆ. ಆದರೂ ಹೋರಾಟವನ್ನು ನಡೆಸುವ ನಿರ್ಧಾರ ಕೈ ಬಿಡದೆ ಮುಂದುವರೆಸಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ನಿರಶನ ಮಾಡುವುದಾಗಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ವಿನಯ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಶಾಲೆ ಮುಚ್ಚಿಸುವ ಭರವಸೆ :
ಎರಡು ಗಂಟೆಗಳ ಕಾಲ ನಡೆದ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಅವರು ಮಾತನಾಡಿ ಶಾಲೆಯನ್ನು ಮುಚ್ಚಿಸಲಾಗುವುದು. ವೈರ್ ಕೆಳಗಿನ ಕಟ್ಟಡವನ್ನು ಮುಚ್ಚಿ ಅಲ್ಲಿ ಯಾವುದೇ ಶೈಕ್ಷಣಕ ಚಟುವಟಿಕೆ ನಡೆಯದಂತೆ ಇಲಾಖೆಯ ಒರ್ವ ಅಧಿಕಾರಿಯನ್ನು ನೇಮಿಸಿ ಕ್ರಮವಹಿಸಲಾಗುವುದು ಎಂದರು. ತಾಲ್ಲೂಕು ಆಡಳಿತದ ಮಾತು ಸಹ ಕೇಳಲಾರರು ಎಂದು ಒತ್ತಾಯಿಸಿದ ನಂತರ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಬಿ.ಆರತಿ ಅವರು ಪ್ರತಿಭಟನಾ ನಿರತರರೊಂದಿಗೆ ಚರ್ಚಿಸಿ ಈ ಕೂಡಲೇ ಶಾಲೆಯ ಕಟ್ಟಡದಲ್ಲಿ ನಡೆದಿರುವ ಚಟುವಟಿಕೆ ನಿಲ್ಲಿಸಲಾಗುವುದು. ಕಟ್ಟಡ ಕೆಲಸವನ್ನೂ ನಿಲ್ಲಿಸಲು ಸೂಚಿಸಲಾಗಿದೆ. ಮುಂದಿನ ಎಲ್ಲಾ ಕಾನೂನು ಪ್ರಕ್ರಿಯೆ ನಡೆಸಿ ಇತ್ಯರ್ಥ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಹಾಗೂ ವಾಹನ ಚಾಲಕರ ಜಿಲ್ಲಾಧ್ಯಕ್ಷ ಟಿ.ಎಂ.ಪ್ರತಾಪ್‍ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ.ಹರೀಶ್, ತಾಲ್ಲೂಕು ಉಪಾಧ್ಯಕ್ಷ ಮಧು, ಮುಖಂಡರಾದ ಸಿ.ಆರ್.ಶಂಕರ್‍ಕುಮಾರ್, ಸಲೀಂಪಾಷ, ವೇಣುಗೋಪಾಲ್‍ಅರಸ್, ವಾಸು, ಮುಜಾಯಿದ್ದೀನ್‍ಪಾಷ, ರುದ್ರೇಶ್, ರವಿಕುಮಾರ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ