ಗುಬ್ಬಿ: ಅದ್ವಾನಗೊಂಡ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಹಸ!!

 ಗುಬ್ಬಿ : 

      ನಗರಗಳನ್ನು ಸಂಪರ್ಕಿಸುವ ಒಂದು ಪ್ರಮುಖ ಪಟ್ಟಣವಾಗಿ ಗುಬ್ಬಿ ಬೆಳೆಯುತ್ತಾ ಸಾಗಿದ್ದರೂ ಇಲ್ಲಿನ ಸುಗಮ ಸಂಚಾರಕ್ಕೆ ರಸ್ತೆಗಳು ಅಡ್ಡಿಯಾಗಿ ನಿಂತಿವೆ. ವರ್ಷದಿಂದಲೂ ಕೆಲವು ರಸ್ತೆಗಳು ಅದ್ವಾನಗೊಂಡಿದ್ದು, ಅಂತಹ ಪ್ರದೇಶಗಳಲ್ಲಿ ಸಂಚರಿಸುವುದೇ ಒಂದು ದುಸ್ಸಾಹಸದ ಕೆಲಸ.

      ಅಭಿವೃದ್ಧಿಯ ಘೋಷವಾಕ್ಯವನ್ನು ಕೇವಲ ಬಾಯಲ್ಲಿ ಪಠಿಸುತ್ತಾ ಗುಬ್ಬಿಯನ್ನು ಮಾಮೂಲಿ ಪಟ್ಟಣವಾಗೆ ಉಳಿಸಿದ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಮದ್ಯದ ದೊರೆಗಳು ರಾಷ್ಟ್ರೀಯ ಹೆದ್ದಾರಿ-4 ಅನ್ನು ಸಂಪರ್ಕಿಸುವ ಕೊಂಡಿಯಾದ ಶಿರಾ-ಗುಬ್ಬಿ ರಾಜ್ಯ ಹೆದ್ದಾರಿ-84 ಅನ್ನು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಪಡಿಸಿದಂತಿದೆ. ಗುಬ್ಬಿಯಿಂದ ಮಂಡ್ಯದವರೆಗೆ ಸಂಪರ್ಕ ಹೊಂದಿರುವ ರಸ್ತೆ ಇದಾಗಿದೆ. ಗುಬ್ಬಿಯ ಚನ್ನಬಸವೇಶ್ವರ ದೇವಾಲಯದಿಂದ ಮಂಡ್ಯ ನಗರದವರೆಗೆ ಹಾಗೂ ಶಿರಾದಿಂದ ಗುಬ್ಬಿ ನಗರದವರೆಗೆ ಈ ರಸ್ತೆ ವಿಸ್ತಾರ ಹೊಂದಿದೆ.

      ಗುಬ್ಬಿ ನಗರ ವ್ಯಾಪ್ತಿಯಲ್ಲಿ ಸುಮಾರು 3 ಕಿಲೋಮೀಟರ್ ಗಳಷ್ಟು. ರಸ್ತೆ ಗುಂಡಿ ಗುದರಗಳಿಂದ ಕೂಡಿದ್ದು ದ್ವಿಚಕ್ರ ವಾಹನ ಸವಾರರು ಶಾಲಾ ಮಕ್ಕಳು ಹಾಗೂ ವಯೋವೃದ್ಧರು ಓಡಾಡಲು ಕಷ್ಟ ಸಾಧ್ಯವಾಗಿದೆ. ಈ ರಸ್ತೆಯನ್ನು ರಿಪೇರಿ ಮಾಡುವಂತೆ ಸಾರ್ವಜನಿಕರು ಹಲವಾರು ಅರ್ಜಿಗಳನ್ನು ಕೊಟ್ಟರು ಹಾಗೂ ಮುಷ್ಕರಗಳನ್ನು ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾರಣ ಇದರ ಹಿಂದಿರುವ ಮದ್ಯದ ದೊರೆಗಳ ಲಾಬಿ. ಇದನ್ನು ಕೇಳಿದರೆ ಆಶ್ಚರ್ಯ ಹಾಗೂ ಜಿಜ್ಞಾಸೆ ಸಾರ್ವಜನಿಕರ ಮನಸ್ಸಿನಲ್ಲಿ ಮೂಡುತ್ತದೆ.
2015 ನೇ ಸಾಲಿನಲ್ಲಿ ನ್ಯಾಯಾಲಯದ ನಿರ್ದೇಶನವೊಂದು ಹೊರಬರುತ್ತೆ. ಅದು ಏನೆಂದರೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ರಸ್ತೆಯಿಂದ ಸುಮಾರು 500ಮೀಟರ್ ಗಳಷ್ಟು ಹಿಂದೆ ಮದ್ಯದಂಗಡಿಗಳು ಇರಬೇಕೆಂದು. ಈ ಪ್ರಕಾರ ನಗರ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳಿಗೆ ಭಾರೀ ಹೊಡೆತ ಬೀಳುತ್ತದೆ. ಇದರಿಂದ ಸುಮಾರು ಅಂಗಡಿಗಳ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಸೊರಗುತ್ತಾರೆ. ಆದರೆ ಕೆಲವು ಮದ್ಯದ ದೊರೆಗಳು ಲಾಬಿ ನಡೆಸಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಗಳನ್ನೇ ಇಲ್ಲದ ಹಾಗೆ ಮಾಡುತ್ತಾರೆ ಇದು ಹೇಗೆ ಸಾಧ್ಯವೆಂದು ಆಶ್ಚರ್ಯಪಡಬಹುದು.

      ನಗರ ವ್ಯಾಪ್ತಿಯಲ್ಲಿ ಅಂದರೆ ಪ್ರಭಾವಿಗಳ ಮದ್ಯದಂಗಡಿಗಳು ಇರುವ ರಸ್ತೆಗಳಲ್ಲಿ ಹಾದು ಹೋಗಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು. ಹೆದ್ದಾರಿಗಳೇ ಅಲ್ಲ ಇವು ಆಯಾಯ ಸ್ಥಳೀಯ ಆಡಳಿತಕ್ಕೆ ಬಿಡುವ ರಸ್ತೆಗಳಾಗಿರುತ್ತವೆ ಎಂಬುದು. ಆಗ ಕೋರ್ಟ್ ಆದೇಶ ಇದಕ್ಕೆ ಅನ್ವಯಿಸುವುದಿಲ್ಲ. ಈ ರೀತಿ ತಮಗೆ ಅನುಕೂಲವಾಗುವಂತೆ ಲಾಬಿ ನಡೆಸಿದರು. ಈಗ ರಸ್ತೆಗಳನ್ನು ಸ್ಥಳೀಯ ಆಡಳಿತ ನಿರ್ವಹಣೆ ಮಾಡಲಾಗದೆ ಅನಾಹುತಗಳು ಸಂಭವಿಸುತ್ತಿವೆ. ಈ ಬಗ್ಗೆ ಪಿಡಬ್ಲ್ಯುಡಿ ಅಧಿಕಾರಿಗಳನ್ನು ಕೇಳಿದಾಗ ಅವರಿಂದ ಬಂದ ಉತ್ತರವೂ ಇದೆ ಆಗಿದೆ. ಈ ಬಗ್ಗೆ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಆಗಿದೆಯೆಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

      ಆದರೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸದಸ್ಯರು ಹೇಳುವುದೇ ಬೇರೆ. ಯಾರ್ಯಾರು ಅವರ ಅನುಕೂಲಕ್ಕೆ ರಸ್ತೆಗಳನ್ನೇ ಇಲ್ಲದ ಹಾಗೆ ಮಾಡಿಕೊಂಡರೆ ಇಷ್ಟು ದೊಡ್ಡ ರಸ್ತೆ ಹಾಗೂ ರಾಜ್ಯ ಹೆದ್ದಾರಿಯನ್ನು ನಾವು ಅಭಿವೃದ್ಧಿಪಡಿಸಲು ಸಾಧ್ಯವೇ ನಮ್ಮಲ್ಲಿ ಅಷ್ಟೊಂದು ಹಣವಿದೆಯೇ ನಾವು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನಮ್ಮ ನಗರ ವ್ಯಾಪ್ತಿಯಲ್ಲಿ ನೀಡಿದರೆ ಸಾಕಾಗಿದೆ. ಅದರಲ್ಲಿ ರಾಜ್ಯ ಹೆದ್ದಾರಿಯನ್ನು ನಮ್ಮ ಹೆಗಲಿಗೆ ಹೊರಿಸಿದ್ದಾರೆ. ನಾವು ಹೇಗೆ ಅಭಿವೃದ್ಧಿಪಡಿಸಲು ಸಾಧ್ಯ ಎಂದು ಎಂಬುದು ಪಟ್ಟಣ ಪಂಚಾಯಿತಿ ಎಂಜಿನಿಯರ್ ಸತ್ಯನಾರಾಯಣ ಅವರು ಹೇಳುತ್ತಾರೆ.

      ಇವೆಲ್ಲ ಏನೇ ಇರಲಿ, ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ಮಾತಂತೆ ಈ ರಸ್ತೆ ಹಾಳಾಗುತ್ತಿದೆ. ಈ ರಸ್ತೆಯಲ್ಲಿ ತಾಲ್ಲೂಕು ಕಚೇರಿ ಬ್ಯಾಂಕ್‍ಗಳು ಜಿಲ್ಲಾ ಪಂಚಾಯಿತಿ ಕಚೇರಿ ಶಾಸಕರ ಕಚೇರಿ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಕೆಇಬಿ ಕೆಎಂಎಫ್ ಹಾಗೂ ರೈಲ್ವೆ ನಿಲ್ದಾಣವಿದೆ. ಇಡೀ ಊರಿಗೇ ಈ ರಸ್ತೆ ಮುಖ್ಯವಾಹಿನಿಯಾಗಿದೆ. ಆದರೆ ಇದರ ಸ್ಥಿತಿಯೇ ಹೀಗಾದರೆ ಬೇರೆ ರಸ್ತೆಗಳ ಸ್ಥಿತಿಗತಿ ನೀವೇ ಯೋಚಿಸಿ

ಅಧಿಕಾರಿಗಳಿಗೆ ಪತ್ರ ಬರೆಯಾಗಿದೆ

ರಾಜ್ಯ ಹೆದ್ದಾರಿ 84 ಗುಬ್ಬಿ ನಗರದ ಮೂಲಕ ಹಾದು ಹೋಗುತ್ತಿದ್ದು, ಈ ಭಾಗದ ರಸ್ತೆಯನ್ನು ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ವಹಿಸಿ ಕೊಟ್ಟಿದ್ದೇವೆಂದು ಅಧಿಕಾರಿಗಳು ಪತ್ರ ಹಾಕಿದ್ದರು. ಆದರೆ ನಾನು ಪಟ್ಟಣ ಪಂಚಾಯಿತಿಯ ಅಧ್ಯಕ್ಷನಾದ ಮೇಲೆ ಪಟ್ಟಣ ಪಂಚಾಯ್ತಿ ಈ ರಸ್ತೆಯ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ನಮ್ಮಲ್ಲಿ ಅಷ್ಟೊಂದು ಹಣ ಇಲ್ಲ. ಆದ್ದರಿಂದ ರಸ್ತೆಯ ನಿರ್ವಹಣೆಯನ್ನು ನೀವೇ ಮಾಡಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಸಿ ಇರುತ್ತೇನೆ ಹಾಗೂ ನಮ್ಮ ಸಾಮಾನ್ಯ ಸಭೆಯ ನಡಾವಳಿಯಲ್ಲಿ ತೀರ್ಮಾನಿಸಿ ಸದಸ್ಯರೆಲ್ಲರೂ ಅನುಮೋದಿಸಿರುತ್ತಾರೆ. ಎಂದು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ತಿಳಿಸಿದರು.

 -ರಾಜೇಶ್ ಗುಬ್ಬಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap