ಒಳಮೀಸಲಾತಿ ಜಾರಿ : 1 ವರ್ಷ ವಯೋಮಿತಿ ಸಡಿಲಿಕೆ ಮಾಡಿ : ಮಾಜಿ ಸಚಿವ ಎಚ್.ಆಂಜನೇಯ

ಚಿತ್ರದುರ್ಗ

  ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಜಾತಿಗಣತಿ ಸವೇ ಕಾರ್ಯವನ್ನು ಜು.22ಕ್ಕೆ ಅಂತಿಮಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಸ್ತರಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

  ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸಲು ಮಾದಿಗ-ಛಲವಾದಿ ಜಾತಿ ಗುರುತಿಸುವಿಕೆ ಸಮಸ್ಯೆ ಇತ್ತು. ಈ ಗೊಂದಲ ನಿವಾರಣೆ ಕಾರಣಕ್ಕೆ ವಿಳಂಬವಾಗಿದೆ. ಈಗ ಮತ್ತಷ್ಟು ವಿಳಂಬ ಆಗುವುದು ಬೇಡ. ಆದ್ದರಿಂದ ಜಾತಿಗಣತಿ ಸರ್ವೇ ದಿನಾಂಕ ಮತ್ತೊಮ್ಮೆ ವಿಸ್ತರಿಸಬಾರದು ಎಂದು ತಿಳಿಸಿದರು.

  ಮೇ 5ರಂದು ಆರಂಭಗೊಂಡ ಸಮೀಕ್ಷೆ ಕಾರ್ಯ ಜು.22ರ ವರೆಗೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಮೂರು ಬಾರಿ ವಿಸ್ತರಣೆ ಮಾಡಲಾಗಿದೆ. ಬಹಳಷ್ಟು ಅವಕಾಶವನ್ನು ನ್ಯಾ.ನಾಗಮೋಹನ್ ದಾಸ್ ಆಯೋಗ ನೀಡಿದೆ. ಆದರೂ ಬೆಂಗಳೂರಂತ ಶಿಕ್ಷಿತರ ಪ್ರದೇಶದಲ್ಲಿ ಶೇ.50 ಆಗಿದ್ದು, ರಾಜ್ಯದ ಉಳಿದ ಪ್ರದೇಶಗಳಲ್ಲಿ ಶೇ.90ರಷ್ಟು ಸಮೀಕ್ಷೆ ಕಾರ್ಯ ಆಗಿದೆ. ಆದ್ದರಿಂದ ವಿಸ್ತರಣೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.12 ಸಾವಿರ ಮಂದಿ ಆನ್ಲೈನ್ ಮೂಲಕ ನೋಂದಣಿಗೆ ಪ್ರವೇಶ ಪಡೆದು, ಬಳಿಕ ಹಿಂದೆ ಸರಿದಿದ್ದಾರೆ. ಕಾರಣ ಅರ್ಧ ಗಂಟೆ ಸಮಯ ನೀಡಲು ಅವರು ಇಚ್ಛಿಸಿಲ್ಲ. ಇಂತಹ ಜನರಿಂದ ಸಮೀಕ್ಷೆಗೆ ಬೆಂಗಳೂರಿನಲ್ಲಿ ಹಿನ್ನಡೆ ಆಗಿದೆ. ಇವರಿಗೆ ಎಷ್ಟೇ ಸಮಯಾವಕಾಶ ನೀಡಿದರೂ ಅಷ್ಟೇ ಎಂದು ಬೇಸರಿಸಿದರು.

   ಜೊತೆಗೆ ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಗಣತಿ ಕಾರ್ಯ ನಡೆಸಿದ್ದಾರೆ. ಆದರೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ನಡೆಸಿದ್ದು, ಅವರೇ ಬಿಎಲ್ಒಗಳು ಆಗಿರುವುದರಿಂದ ಸುಲಭವಾಗಿ ಸರ್ವೇ ನಡೆಸಿದ್ದಾರೆ ಎಂದರು.

   ನಾನು ಸೇರಿದಂತೆ ಅನೇಕರ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಜಾತಿಗಣತಿ ಸಂಬಂಧ ಕಾಲೋನಿ, ಬಡಾವಣೆ, ಸ್ಲಂ, ಕೇರಿಗಳಲ್ಲಿ ಆಂದೋಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವು. ಆದರೆ, ಬೆಂಗಳೂರಿನಲ್ಲಿ ಮಾದಿಗರು ವಿವಿಧ ಪ್ರದೇಶಗಳಲಿ ಹರಿದುಹಂಚಿ ಹೋಗಿದ್ದು, ಅವರನ್ನು ಗುರುತಿಸುವುದು ನಮಗೆ ಸವಾಲು ಆಗಿತ್ತು. ಜೊತೆಗೆ ಅವರಲ್ಲಿ ಬಹುತೇಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಮಯ ನೀಡುವ ತಾಳ್ಮೆ ವಹಿಸಿಲ್ಲ ಎಂದರು.

   ಆದ್ದರಿಂದ ಕೂಡಲೇ ಆಯೋಗವು ಸರ್ವೇ ಮಾಹಿತಿ ಪಡೆದು ಯಾವ ಜಾತಿ ಎಷ್ಟು ಸಂಖ್ಯೆಯಲ್ಲಿದೆ, ಅವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಾಗೂ ಸರ್ಕಾರಿ-ಅರೇ ಸರ್ಕಾರಿ ಸಂಸ್ಥೆಗಳಲ್ಲಿ ಎಷ್ಟು ಮಂದಿ ಉದ್ಯೋಗಸ್ಥರು ಇದ್ದಾರೆಂಬ ಸಮಗ್ರ ದತ್ತಾಂಶದ ವರದಿನ್ನು ಸಿದ್ಧಪಡಿಸಿ ಈ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ, ಅಗತ್ಯವಿದ್ದರೇ ವಿಶೇಷ ವಿಧಾನಸಭೆ ಅಧಿವೇಶನ ಕರೆದು ಚರ್ಚಿಸಿ ಒಳಮೀಸಲಾತಿ ಅನುಷ್ಠಾನಕ್ಕೆ ಜುಲೈ 15ರೊಳಗೆ ಶಾಸನಾತ್ಮಕ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

   ಒಳಮೀಸಲಾತಿ ಕಲ್ಪನೆ ಹುಟ್ಟಿಹಾಕಿದ್ದು ಮಾದಿಗರು, ಹೋರಾಟ ಮಾಡಿದ್ದು ಮಾದಿಗರು, ಈಗ ಮೀಸಲಾತಿಯಲ್ಲಿ ಹೆಚ್ಚು ಪಾಲು ನಮಗೆ ಸಿಗಬೇಕು. ಅದು ನ್ಯಾಯಯುತ ತೀರ್ಮಾನವಾಗಲಿದೆ. ಈ ವಿಷಯದಲ್ಲಿ ಸರ್ಕಾರ ಮತ್ತು ಆಯೋಗ ನಮಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸ ಇದೆ ಎಂದರು.

    ಸರ್ಕಾರ ಎಲ್ಲ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ತಡೆ ನೀಡಿ ಎಂಟು ತಿಂಗಳು ಆಯ್ತು. ಎಲ್ಲ ಜಾತಿಯ ಬಹಳಷ್ಟು ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಜೊತೆಗೆ ವಯೋಮಿತಿ ಮೀರುವ ಹಂತದಲ್ಲಿದ್ದಾರೆ. ಆದ್ದರಿಂದ ವಯೋಮಿತಿಯನ್ನು ಒಂದು ವರ್ಷ ಸಡಿಲಗೊಳಿಸಬೇಕು. ಜೊತೆಗೆ ಶೀಘ್ರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

   ಯಾವುದೇ ಶಕ್ತಿ ಒಳಮೀಸಲಾತಿ ಬೇಡವೆಂದು ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಇಲ್ಲ. ಅವರು ಕೂಡಲೇ ಒಳಮೀಸಲಾತಿ ಜಾರಿಗೊಳಿಸಲು ಸಿದ್ಧರಾಗಿದ್ದಾರೆ. ವರದಿ ಕೈಗೆ ಸಿಕ್ಕ ತಕ್ಷಣ ಜಾರಿಗೊಳಿಸಲಿದ್ದಾರೆ ಎಂದರು.ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಆರ್.ನರಸಿಂಹರಾಜು, ಮುಖಂಡರಾದ ಟಿ.ಹನುಮಂತಪ್ಪ, ಮಜಾದ್ ಖಾನ್, ರವಿಚಂದ್ರ, ಬಂಜಗೊಂಡನಹಳ್ಳಿ ಜಯಪ್ಪ, ಶರಣಪ್ಪ, ಮಂಜುನಾಥ್ ಕುಂದವಾಡ ಇತರರು ಉಪಸ್ಥಿತರಿದ್ದರು. 

ಮಾದಿಗರೆಂದೇ ಬರೆಯಿಸಿ:ಶಾಲೆಗಳು ಈಗ ಆರಂಭಗೊಂಡಿದ್ದು, ಶಾಲಾ ದಾಖಲಾತಿಗಳಲ್ಲಿ ಮೂಲ ಜಾತಿಯನ್ನು ಕಡ್ಡಾಯವಾಗಿ ಬರೆಯಿಸಬೇಕು ಎಂದು ಆಂಜನೇಯ ತಿಳಿಸಿದರು.ಸೂಚಕವಾಗಿ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಏನೆ ಇದ್ದರೂ ಮೂಲ ಜಾತಿ ಮಾದಿಗ ಬರೆಸಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಒಳಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಇಲ್ಲದಿದ್ದರೇ ಮತ್ತೆ ಗೊಂದಲಕ್ಕೆ ಸಿಲುಕಿ ಮೀಸಲಾತಿ ಸೌಲಭ್ಯದಿಂದ ಸಮುದಾಯದವರು ವಂಚಿತವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಆದ್ದರಿಂದ ಮೂಲ ಜಾತಿ ಬರೆಯಿಸಿದಿದರೇ ತಕ್ಷಣ ಶಾಲೆಗೆ ಹೋಗಿ ತಿದ್ದುಪಡಿ ಮಾಡಿಸಬೇಕು ಎಂದು ತಿಳಿಸಿದರು.

Recent Articles

spot_img

Related Stories

Share via
Copy link