ಒಳಮೀಸಲಾತಿ ಜಾರಿ ತಕ್ಷಣ ಸಂಭ್ರಮ ಶೀಘ್ರ ಆಯೋಜನೆ : ಎಚ್.ಆಂಜನೇಯ

ನಾಯಕನಹಟ್ಟಿ

    ಮೂರು ದಶಕದ ಹೋರಾಟದ ಫಲ, ಸುಪ್ರೀಂ ಕೋರ್ಟ್ ತೀರ್ಪು ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಗೆ ಅಲ್ಲಿನ ಸರ್ಕಾರಗಳು ಕ್ರಮಕೈಗೊಂಡಿರುವುದು ಸಂತಸದ ವಿಷಯ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

    ಈಗಾಗಲೇ ತೆಲಂಗಾಣದಲ್ಲಿ ಏ.14 ಅಂಬೇಡ್ಕರ್ ಜಯಂತಿ ದಿನದಂದು ಒಳಮೀಸಲಾತಿ ಅನುಷ್ಠಾನಗೊಳಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಖರ ದತ್ತಾಂಶ ಸಂಗ್ರಹಕ್ಕಾಗಿ ಸರ್ವೇ ಮೂಲಕ ಅವರವರ ಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಹಂಚಿಕೆ ಮಾಡಲು ದಿಟ್ಟ ಕ್ರಮಕೈಗೊಂಡಿದ್ದು, ಜೂನ್ ತಿಂಗಳಲ್ಲಿ ಒಳಮೀಸಲಾತಿ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

   ಆದ್ದರಿಂದ ಒಳಮೀಸಲಾತಿ ಜಾರಿ ವಿಷಯದಲ್ಲಿ ದಿಟ್ಟ ಕ್ರಮಕೈಗೊಂಡಿರುವ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ, ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಮೂಲಕ ನೊಂದ, ಸೌಲಭ್ಯ ವಂಚಿತ, ಅಸ್ಪೃಶ್ಯ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಅಧಿಕಾರ ಬಳಸಿದ ಇಬ್ಬರು ಮುಖ್ಯಮಂತ್ರಿಯನ್ನು ಗೌರವಿಸಿ, ಕೃತಜ್ಞತೆ ಸಲ್ಲಿಸಲಾಗುವುದು ಎಂದಿದ್ದಾರೆ.

    ಲಕ್ಷಾಂತರ ಸಂಖ್ಯೆಯಲ್ಲಿ ಮಾದಿಗ ಸಮುದಾಯ ಒಂದೇಡೆ ಸೇರಿ ಸಂಭ್ರಮಿಸಬೇಕಾಗಿದೆ. ಮುಖ್ಯವಾಗಿ ಒಗ್ಗಟ್ಟು ಪ್ರದರ್ಶನದ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ನ್ಯಾಯಯುತ ಹಕ್ಕುಗಳನ್ನು ಪಡೆಯಲು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

   ಆಂಧ್ರಪ್ರದೇಶದಲ್ಲಿ ಮೊದಲ ಬಾರಿಗೆ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಆರಂಭಗೊಂಡ ಒಳಮೀಸಲಾತಿ ಹೋರಾಟ ದೇಶದ ವಿವಿಧ ರಾಜ್ಯಗಳಲ್ಲಿ ಕಿಚ್ಚನ್ನು ಹಚ್ಚಿದ್ದು, ಕರ್ನಾಟಕದಲ್ಲಿ ಬಹಳಷ್ಟು ನಾಯಕರು, ಹೋರಾಟಗಾರರು ಚಳವಳಿಯನ್ನು ಮುನ್ನೆಡೆಸಿದ್ದಾರೆ, ರಾಜಕಾರಣಿಗಳು ಧ್ವನಿಯೆತ್ತಿದ್ದಾರೆ. ಅವರೆಲ್ಲರ ಹೋರಾಟದ ಫಲ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ಇದೆ ಎಂಬ ಮಹತ್ವದ ತೀರ್ಪನ್ನು ಆಗಸ್ಟ್ 1, 2024ರಂದು ಸುಪ್ರೀಂ ಕೋರ್ಟ್ ನೀಡಿದ್ದು, ಈಗಾಗಲೇ ತೆಲಂಗಾಣದಲ್ಲಿ ಅನುಷ್ಠಾನಗೊಂಡಿರುವುದು ಸಂತಸದ ವಿಷಯ ಆಗಿದೆ.

   ಅದೇ ರೀತಿ ರಾಜ್ಯದಲ್ಲೂ ಶೀಘ್ರ ಅನುಷ್ಠಾನಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಸರ್ಕಾರಿ ಉದ್ಯೋಗ ನೇಮಕಾತಿಗಳಿಗೆ ಅಲ್ಲಿಯವರೆಗೆ ತಡೆ ಹಾಕಲಾಗಿದೆ.ಇಂತಹ ನಡೆಗಳು ಒಳಮೀಸಲಾತಿ ಜಾರಿಗೊಳಿಸುವುದು ಕಡ್ಡಾಯವೆಂಬ ಸಂದೇಶವನ್ನು ನೀಡುತ್ತದೆ. ಯಾವುದೆ ಸಂಶಯಗಳು ಸಮುದಾಯದವರಲ್ಲಿ ಬೇಕಿಲ್ಲ. ಒಂದೆರಡು ತಿಂಗಳು ತಡವಾಗಿರಬಹುದು. ಆದರೆ, ಜಾರಿಗೊಳಿಸುವುದು ಮಾತ್ರ ಶತಃಸಿದ್ಧ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದ್ಧತೆ ಪ್ರಶ್ನಾತೀತವಾಗಿದ್ದು, ನಾವೆಲ್ಲರೂ ಅವರ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ ಎಂದಿದ್ದಾರೆ.

   ಪರಿಶಿಷ್ಟ ಸಮುದಾಯದಲ್ಲಿ ಯಾವ ಜಾತಿ ಜನರಿಗೂ ಸಣ್ಣ ಅನ್ಯಾಯ ಆಗದ ರೀತಿ ಕ್ರಮಕೈಗೊಳ್ಳಲು ದಿಟ್ಟ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿದ್ದಾರೆ. ಅದರ ಕಾರ್ಯವೇ ದತ್ತಾಂಶ ಸಂಗ್ರಹಕ್ಕಾಗಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯ ಕೈಗೊಂಡಿರುವುದು. ಈಗಾಗಲೇ ಸರ್ವೇ ಕಾರ್ಯಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಸಮುದಾಯದವರು ಸರ್ವೇ ಸಂದರ್ಭ ಮೂಲ ಜಾತಿ ಮಾದಿಗ ಎಂದು ದಾಖಲಿಸುವ ಮೂಲಕ ಒಳಮೀಸಲಾತಿಯಲ್ಲಿ ನಮ್ಮ ಪಾಲನ್ನು ಪಡೆಯಲು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಹಟ್ಟಿ, ಕಾಲೋನಿ, ಬಡಾವಣೆಗಳಲ್ಲಿ ಜಾಗೃತಿ ಮೂಡಿಸು ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

   ಜೂನ್ ಮೊದಲ ವಾರದಲ್ಲಿಯೇ ಒಳಮೀಸಲಾತಿ ಜಾರಿಗೊಳ್ಳುವುದು ಖಚಿತವಾಗಿದ್ದು, ಜಾರಿಗೊಂಡ ತಕ್ಷಣವೇ ನಮ್ಮ ಮೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ರಾಯಚೂರಿನಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಿ ಅಭಿನಂದಿಸಲಾಗುವುದು ಎಂದು ಎಚ್.ಆಂಜನೇಯ ತಿಳಿಸಿದ್ದಾರೆ.