ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಪ್ರಕರಣ : ಸರ್ಕಾರದ ಮನವಿಗೆ ನಾವು ಬೆಂಬಲಿಸುತ್ತೇವೆ : HDK

ಬೆಂಗಳೂರು:

    ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಡಿದ ಮನವಿಯನ್ನು ಬೆಂಬಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. 

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಅದನ್ನು ಬೆಂಬಲಿಸಲಿದ್ದೇವೆ. ಕೇಂದ್ರವು ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ನಿರ್ಧರಿಸಿದರೆ ನಾವು ಸ್ವಾಗತಿಸುತ್ತೇವೆ’ ಎಂದು ಭಾನುವಾರ ಹೇಳಿದರು.

   ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತು ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಆರೋಪಿಸಿರುವ ಗೃಹ ಸಚಿವ ಜಿ ಪರಮೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ರಾಜ್ಯದ ಗೃಹ ಸಚಿವರಾಗಿರುವ ಅವರು ಈ ವಿಷಯದಲ್ಲಿ ಅನುಸರಿಸಬೇಕಾದ ಕಾನೂನು ಮತ್ತು ಪ್ರೋಟೋಕಾಲ್ ಬಗ್ಗೆ ತಿಳಿದಿರಬೇಕು ಎಂದು ಹೇಳಿದರು. 

   ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಪಡಿಸಲು ಮತ್ತು ಅವರ ಹಸ್ತಾಂತರ ಮತ್ತು ಬಂಧನಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಪತ್ರ ಬರೆದಿತ್ತು.

   ‘ಗೃಹ ಸಚಿವರಿಗೆ ಪ್ರೋಟೋಕಾಲ್ ತಿಳಿದಿದೆಯೇ ಅಥವಾ ಇಲ್ಲವೇ? ಕಾನೂನುಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. 24 ಗಂಟೆಗಳಲ್ಲಿ ತಕ್ಷಣ ರದ್ದುಗೊಳಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಕಾರ್ಯವಿಧಾನವಿದೆ’ ಎಂದು ಕುಮಾರಸ್ವಾಮಿ ಹೇಳಿದರು. 

   ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ಮಾಡಿರುವ ಮನವಿಯನ್ನು ಮೇ 21ರಂದು ವಿದೇಶಾಂಗ ಸಚಿವಾಲಯವು ಸ್ವೀಕರಿಸಿದೆ ಎಂದಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿಕೆಗೆ ಪರಮೇಶ್ವರ ತರಾಟೆಗೆ ತೆಗೆದುಕೊಂಡಿದ್ದರು.

   ‘ಪ್ರಧಾನಿ ಕಾರ್ಯಾಲಯ (ಪಿಎಂಒ) ವಿದೇಶಾಂಗ ಸಚಿವಾಲಯದ ಕಚೇರಿಗೆ ಮಾಹಿತಿ ನೀಡಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ನಮ್ಮ ಸಿಎಂ ಪ್ರಧಾನಿಗೆ ಬರೆದ ಪತ್ರ ಏನಾಯಿತು?. ಆದರೆ, ಈ ವಿಚಾರದಲ್ಲಿ ಎಂಇಎಯಿಂದ ಯಾವುದೇ ಲಿಖಿತ ಸಂವಹನ ಬಂದಿಲ್ಲ’ ಎಂದು ಪ್ರಶ್ನಿಸಿದ್ದರು.

Recent Articles

spot_img

Related Stories

Share via
Copy link
Powered by Social Snap