ಗದಗ:
ಬಸವರಾಜ ಬೊಮ್ಮಾಯಿ ದಾವಣಗೆರೆ ಚಾರ್ಲಿ ಇದ್ದಂತೆ. ಆದರೆ ಇದೀಗ ಮುದುಕರಾಗಿದ್ದಾರೆ. ಆದರೆ ಹೊಸ ಕುಸ್ತಿ ಪಟು ಬಿಟ್ಟಾಗ ಯಾರು ಗೆಲ್ಲುತ್ತಾರೆಂದು ಗೊತ್ತಾಗುತ್ತದೆ. ದಾವಣಗೆರೆ ಚಾರ್ಲಿ ಜೊತೆಗೆ ಹೊಸ ಜಾಣ ಕುಸ್ತಿಪಟು ಇಂದು ಕಣದಲ್ಲಿ ಇದ್ದಾನೆ. ಹೀಗಾಗಿ ಆನಂದ ಗಡ್ಡದ್ದೇವರಮಠ ಗೆಲುವು ನಿಶ್ಚಿತ ಎಂದು ಸಚಿವ ಎಚ್.ಕೆ.ಪಾಟೀಲ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಸ್ತಿಯಲ್ಲಿ ಬೊಮ್ಮಾಯಿ ಅವರು ದಾವಣಗೆರೆ ಚಾರ್ಲಿ ಇದ್ದರು ಆದರೆ ಇದೀಗ ಮುದುಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಹಿಂದೆ ದೊಡ್ಡದೊಂದು ಲಗೇಜ್ ಇದೆ. ದೊಡ್ಡ ಭಾರ ಇದೆ. ಅವರು ಜನರಿಗೆ ಏನು ಹೇಳುತ್ತಾರೋ ಗೊತ್ತಿಲ್ಲ.
ಮೋದಿ ಅಂತ ಹೇಳಿದಾಕ್ಷಣ 15 ಲಕ್ಷ ಆಪ್ ಕಿ ಅಕೌಂಟ್ ಗೆ ಪಂದ್ರಾಲಾಕ್ ಡಾಲೂಂಗಾ ಇದು ಜನರ ಮನಸ್ಸಿಗೆ ಒಮ್ಮೆಲೆ ಥಟ್ಟನೆ ಅಂತ ಬರುತ್ತದೆ. ರೈತರಿಗೆ ಆದಾಯ ದುಪ್ಪಟ್ಟಾಗುತ್ತೆ ಅಂತ ಹೇಳಿದ್ದರು. ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡ್ತಿವಿ ಅಂದಿದ್ರು ಇವೆಲ್ಲ ಅವರ ಹಿಂದೆ ದೊಡ್ಡ ಭಾರಗಳಿವೆ ಬಿಜೆಪಿಯ ಸುಳ್ಳು ಭರವಸೆಗಳಿಂದ ಬೊಮ್ಮಾಯಿ ಎದ್ದು ನಿಲ್ಲಲಾರದಷ್ಟು ಅನಾನುಕೂಲತೆ ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ದಾವಣಗೆರೆ ಚಾರ್ಲಿ ಎಂಬ ಸಚಿವ ಹೆಚ್ ಕೆ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಹೆಚ್ ಕೆ ಪಾಟೀಲ್ ನಮ್ಮ ಹಿರಿಯರು ಚುನಾವಣೆ ಸಂದರ್ಭದಲ್ಲಿ ವಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ.
ಅವರು ಈ ವಯಸ್ಸಿನಲ್ಲಿ ಮಂತ್ರಿಗಿರಿಯಲ್ಲಿದ್ದಾರೆ, ನಾನು ಸಂಸದ ಆಗಿ ಕೆಲಸ ಮಾಡಲು ಏನು ತೊಂದರೆ ಇದೆ? ಅವರಿಗೆ ಬೇರೆ ಏನೂ ಮಾತನಾಡಲು ಅವಕಾಶ ಇಲ್ಲ. ಅವರನ್ನು ಸುಸಂಸ್ಕೃತ ಮಂತ್ರಿ ಅಂತ ನಾವು ತಿಳಕೊಂಡಿದ್ದೇವೆ. ಅವರು ನಮ್ಮ ಹಿರಿಯರು, ಅವರಿಗೆ ಒಳ್ಳೆದಾಗಲಿ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು. ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ, ಕೋಲಾರ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಗುಂಪುಗಾರಿಕೆ ಇದೆ. ಶಿವಕುಮಾರ್ ಬಿಜೆಪಿಯಲ್ಲಿ ಬಂಡಾಯದ ಬಗ್ಗೆ ಮಾತನಾಡಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಬಂಡಾಯದ ಬಗ್ಗೆ ಅವರ ಪ್ರತಿಕ್ರಿಯೆ ಏನು? ಅವರು ತಿರುಗೇಟು ನೀಡಿದರು.