ನವದೆಹಲಿ:
ಗಾಜಾ, ಪ್ಯಾಲೆಸ್ತೀನ್‌ನಲ್ಲಿ ಶಾಂತಿ ಸ್ಥಾಪನೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಣ ತೊಟ್ಟಿರುವ ಬೆನ್ನಲ್ಲೇ ಹಾಮಾ ಉಗ್ರರು ನಡುರಸ್ತೆಯಲ್ಲಿ ಬರೋಬ್ಬರಿ ಎಂಟು ಜನ ಒತ್ತೆಯಾಳುಗಳಿಗೆ ಮರಣದಂಡನೆಗೆ ಗುರಿಪಡಿಸಿದೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಜೊತೆಗಿನ ಕದನ ವಿರಾಮದ ಘೋಷಣೆ ಬೆನ್ನಲ್ಲೇ ಗಾಜಾ ಪಟ್ಟಿಯ ನಿಯಂತ್ರಣವನ್ನು ಉಳಿಸಿಕೊಳ್ಳಲು ಹಮಾಸ್ ಉಗ್ರರ ಗುಂಪು ಪ್ಯಾಲೆಸ್ತೀನ್‌ನಲ್ಲಿರುವ ವಿರೋಧಿ ಬಣದ ಜೊತೆಗೆ ಸಂಘರ್ಷಕ್ಕಿಳಿದಿದೆ. ಇದರ ಪರಿಣಾಮವಾಗಿ ಅನಾಗರಿಕರ ಮೇಲೆ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಇದರ ಭಯಾನಕ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಸೋಮವಾರ ಸಂಜೆ ಹಮಾಸ್ ಉಗ್ರರು ಬರೋಬ್ಬರಿ ಎಂಟು ಜನರನ್ನು ಸಾರ್ವಜನಿಕವಾಗಿ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ವೈರಲಾಗುತ್ತಿರುವ ವಿಡಿಯೊದಲ್ಲಿ, ಹಮಾಸ್‌ಗೆ ಸಂಬಂಧಿಸಿದ ಹಸಿರು ಹೆಡ್‌ಬ್ಯಾಂಡ್ ಧರಿಸಿದ ಬಂದೂಕುಧಾರಿಗಳು ಕಣ್ಣಿಗೆ ಬಟ್ಟೆ ಕಟ್ಟಿ ರಸ್ತೆಯಲ್ಲಿ ಕೂರಿಸಿರುವ ಎಂಟು ಜನರನ್ನು ಮೊದಲಿಗೆ ಬರ್ಬರವಾಗಿ ಥಳಿಸುತ್ತಾರೆ. ನಂತರ ಗುಂಡು ಹಾರಿಸಿ ಹತ್ಯೆ ಮಾಡುವುದನ್ನು ಕಾಣಬಹುದಾಗಿದೆ. ಶವಗಳ ಸುತ್ತ ಉಗ್ರರು ‘ಅಲ್ಲಾಹು ಅಕ್ಬರ್’ (ಅರೇಬಿಕ್‌ನಲ್ಲಿ ದೇವರು ಶ್ರೇಷ್ಠ) ಎಂದು ಜೋರಾಗಿ ಕಿರುಚಾಡಿದ್ದಾರೆ. ಘೋಷಣೆಗಳು ಕೇಳಿಬರುತ್ತಿವೆ.ಕೆಲವು ಹೋರಾಟಗಾರರು ಕೆಲವು ಕೈದಿಗಳನ್ನು ಗಲ್ಲಿಗೇರಿಸಲು ಸಾಲಾಗಿ ನಿಲ್ಲಿಸಿದಾಗ ಅವರನ್ನು ಹೊಡೆಯುತ್ತಿರುವುದು ಕಂಡುಬರುತ್ತದೆ.
ಹಿಂಸಾಚಾರದ ವರದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಒಂದು ಭಯಾನಕ ವಿಡಿಯೊದಲ್ಲಿ ಮುಖವಾಡ ಧರಿಸಿದ ಹೋರಾಟಗಾರರ ಗುಂಪೊಂದು, ಸುತ್ತ ನೆರೆದಿರುವ ಜನರ ಎದುರೇ ಒತ್ತೆಯಾಳುಗಳನ್ನು ಸುಟ್ಟು ಕೊಂದಿದ್ದಾರೆ. ಇನ್ನು ಈ ಭೀಕರ ಘಟನೆ ನಡೆದಿರುವುದು ಪಶ್ಚಿಮ ಗಾಜಾ ನಗರದ ಅಲ್ ಸಬ್ರಾದಲ್ಲಿ ಎನ್ನಲಾಗಿದೆ. ಆದರೆ ಇದು ಯಾವಾಗ ನಡೆದಿರುವುದು ಎಂಬುದು ತಿಳಿದಿಲ್ಲ. ಆದಾಗ್ಯೂ, ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಜಾರಿಗೆ ಬಂದ ನಂತರ ಈ ಘಟನೆ ನಡೆದಿರಬಹುದು, ಏಕೆಂದರೆ ಅದಕ್ಕೂ ಮೊದಲು ಇಸ್ರೇಲಿ ಪಡೆಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು.
ಗಾಜಾದಲ್ಲಿ ಕದನ ವಿರಾಮ ಜಾರಿಯಲ್ಲಿದ್ದು, ಹಮಾಸ್ ಉಗ್ರರು ನಿಧಾನವಾಗಿ ಗಾಜಾ ಪಟ್ಟಿಯನ್ನು ಮತ್ತೆ ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಹೀಗಾಗಿ ತಮ್ಮ ವಿರೋಧಿಗಳನ್ನು ಹುಡುಕಿ ಹುಡುಕಿ ಅವರನ್ನು ಬಲಿ ಪಡೆಯುತ್ತಿದ್ದಾರೆ.
