ಕುರುಬ ಸಮುದಾಯದ ಎಸ್.ಟಿ ಮೀಸಲಾತಿ ಬೇಡಿಕೆ ಈಡೇರಿಸುವೆ -ಸಿಎಂ

ಹರಿಹರ :

     ಕುರುಬ ಸಮುದಾಯದ ಬಹುದೊಡ್ಡ ಬೇಡಿಕೆಯಾದ ಎಸ್.ಟಿ ಮೀಸಲಾತಿಯನ್ನು ಈಗಾಗಲೇ ಸುಪ್ರಿಂ ಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಲಾಗಿದ್ದು ಆದೊಷ್ಟು ಬೇಗ ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದರು.

      ತಾಲೂಕಿನ ಬೆಳ್ಳೂಡಿ ಹೊರವಲಯದಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಶಾಖಾ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಲಯ, ಸಮುದಾಯ ಭವನ, ಮುಖ್ಯಮಹಾದ್ವಾರ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಮಠವು ಎರಡು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಮಕ್ಕಳಿಗೆ ಅನುಕೂಲವಾಗಲು ನಿರ್ಮಿಸಿರುವ ವಿದ್ಯಾರ್ಥಿ ನಿಲಯವನ್ನು ನಾನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.
ಕುರುಬ ಸಮುದಾಯದ ಬೇಡಿಕೆಯಾದ ಎಸ್.ಟಿ ಮೀಸಲಾತಿಯನ್ನು ಪಡೆಯಲು ಸಮಾಜದ ಶ್ರೀಗಳು, ಸಚಿವರು ಹಾಗೂ ಶಾಸಕರು ಹೋರಾಟವನ್ನು ಹಮ್ಮಿಕೊಂಡು ಪಾದಯಾತ್ರೆಯನ್ನು ನಡೆಸಿದ್ದರು. ಈ ಕುರಿತು ನಾನು ಈಗಾಗಲೇ ಸುಪ್ರೀಂ ಕೋರ್ಟ್ ಮುಂದೆ ಅಫಿಡೆವಿಟ್ ಸಲ್ಲಿಸಿದ್ದೇನೆ. ಆದಷ್ಟು ಬೇಗ ನಿಮ್ಮ ಸಮುದಾಯದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಪೂಜ್ಯ ನಿರಂಜನಾನಂದಪುರಿ ಶ್ರೀಗಳು ಹೇಳಿದಂತೆ ಭಾರತದಲ್ಲಿ ಅತಿ ಎತ್ತರದ ಕನಕದಾಸ ಪ್ರತಿಮೆ ನಿರ್ಮಾಣಕ್ಕೆ 5 ಕೋಟಿ ಬಿಡುಗಡೆ ಮತ್ತು ರಾಯಣ್ಣ ಪ್ರಾಧಿಕಾರಕ್ಕೆ ಬಾಕಿ ಇರುವ 30 ಕೋಟಿ ಹಣವನ್ನು ನೀಡುವಂತೆ ಸೂಚಿಸುತ್ತೇನೆ ಎಂದು ಹೇಳಿದರು.

     ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಪೀಠಾಧಿಪತಿ ಶ್ರೀ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, 2020 ನಮ್ಮ ದೇಶಕ್ಕೆ ಕರಾಳ ದಿನ. ಕಳೆದ ವರ್ಷದಲ್ಲಿ ಈ ಉದ್ಘಾಟನೆಗಳನ್ನು ಮಾಡಬೇಕಿತ್ತು. ಕೊರೋನಾ ಹಾವಳಿಯಿಂದ ಈ ಶುಭ ಕಾರ್ಯಗಳು ನಡೆದಿರಲಿಲ್ಲ. ಈ ವರ್ಷವೂ ಸಹ ಕೊರೋನಾದ ಎರಡನೆ ಅಲೆ ಪ್ರಾರಂಭವಾಗಿದೆ. ಇದರ ಮಧ್ಯದಲ್ಲಿಯೆ ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ನಿಯಮಗಳನ್ನು ಪಾಲಿಸುತ್ತಾ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದರು.

      ಈ ಕಾರ್ಯಕ್ರಮಕ್ಕೆ ಬರಬೇಡಿ ಎಂದು ಭಕ್ತರಿಗೆ ಹೇಳಲಾಗಿತ್ತು. ಕೊರೋನಾಕ್ಕೆ ಸೆಡ್ಡು ಒಡೆದು ಭಕ್ತರು ಬಂದಿದ್ದೀರಿ, ಆದರೂ ನೀವು ಕೊರೋನಾ ನಿಯಮಗಳನ್ನು ಪಾಲಿಸಿ ಎಂದು ಸೂಚಿಸಿದರು. ನಲ್ವತ್ತು ಕೋಟಿ ವೆಚ್ಚದಲ್ಲಿ ಬೆಳ್ಳೂಡಿ ಮಠದ ಆವರಣದಲ್ಲಿ ಅಭಿವೃದ್ಧಿಯ ಕಾಮಗಾರಿಗಳು ನಡೆದಿವೆ. ಮುಂದಿನ ದಿನದಲ್ಲಿ ಇಲ್ಲಿ ಒಂದು ಇಟ್ಟಿಗೆ ಇಡಲು ಸ್ಥಳವಿಲ್ಲ. ಇನ್ನು ನಮ್ಮ ನಡಿಗೆ ಶ್ರೀಕ್ಷೇತ್ರ ಮೈಲಾರದ ಕಡೆಗೆ ಎಂದರು.

      ಎಸ್.ಟಿ ಮೀಸಲಾತಿಗಾಗಿ ನಮ್ಮ ಹೋರಾಟ ಪ್ರಾರಂಭವಾಗಿ ಅದು ಬೆಂಗಳೂರಿನವರೆಗೂ ತಲುಪುವಂತೆ ಗೃಹ ಇಲಾಖೆ ನಮಗೆ ಸಹಕಾರ ನೀಡಿತ್ತು. ಅಂದು ನಾವು ಸರ್ಕಾರಕ್ಕೆ ಮನವಿ ನೀಡಿದಾಗ ಆರ್. ಅಶೋಕ್ ಅವರು ಬಂದು ನಮ್ಮ ಮನವಿಯನ್ನು ಸ್ವೀಕರಿಸಿದ್ದರು.
ಮುಖ್ಯಮಂತ್ರಿಯಲ್ಲಿ ನಾವು ಮತ್ತೊಮ್ಮೆ ಈ ಕಾರ್ಯಕ್ರಮದಲ್ಲಿ ಮನವಿ ಮಾಡುತ್ತೇನೆ. ಎಸ್.ಟಿ ಮೀಸಲಾತಿ ಬಗ್ಗೆ ನಮ್ಮ ಸಮುದಾಯ ಖುಷಿ ಪಡುವಂತ ಸಂದೇಶವನ್ನು ನೀಡಿ. ನಿಮ್ಮ ಮಾತಿಗಾಗಿ ಅಖಂಡ ಕುರುಬ ಸಮಾಜ ಕಾಯುತ್ತಿದೆ ಎಂದರು

      ಸಂಗೊಳ್ಳಿ ಪ್ರಾಧಿಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ ಅಲ್ಲಿಗೆ ಹಣ ಬಿಡುಗಡೆಯಾಗಿಲ್ಲ ಎಂಬುದು ಕೇಳಿಬಂದಿವೆ. ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ. ರಾಜ್ಯದಲ್ಲಿ ಅನೇಕ ಪುತ್ಥಳಿಗಳ ನಿರ್ಮಾರ್ಣಕ್ಕೆ ನೀವು ಅನುದಾನ ನೀಡಿದ್ದೀರಿ. ಅದೇ ರೀತಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ನೀಡುವ ಮೂಲಕ ಮಲಗಿರುವ ಕನಕದಾಸನನ್ನು ಎಬ್ಬಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳು ಬಿಡುವಿಲ್ಲದ ಸಮಯದಲ್ಲಿಯೂ ಸಹ ಅಷ್ಟು ದೂರದಿಂದ ರಸ್ತೆಯ ಮೂಲಕ ಶ್ರೀಮಠಕ್ಕೆ ಆಗಮಿಸಿ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿರುವುದು ಸಂತೋಷ ತಂದಿದೆ ಎಂದರು.

      ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಸಿದ್ದಗಂಗಾ ಮಠ ಎಂದಾಕ್ಷಣ ನಮಗೆ ನೆನಪಾಗುವುದು ಅಲ್ಲಿ ನೀಡುವ ದಾಸೋಹ ಮತ್ತು ಶಿಕ್ಷಣ. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯೋಣ. ಕನಕ ದಾಸರ ಜಯಂತಿಯನ್ನು ಜಾರಿಗೆ ಮಾಡಿದ ಕೀರ್ತಿ ಬಿ.ಎಸ್.ವೈ ಅವರಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ಕನಕದಾಸರ ಪರವಾಗಿ ನಡೆಯುವ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು.

      ಮೀಸಲಾತಿ ಹೋರಾಟ ಪ್ರಾರಂಭವಾಗಿ, ಶ್ರೀಗಳು ಪಾದಯಾತ್ರೆ ಹಮ್ಮಿಕೊಂಡಾಗ ನಮಗೆ ಭಯ ಶುರುವಾಯಿತು. ಆದರೆ ಆ ಯಾತ್ರೆ ಬೆಂಗಳೂರನ್ನು ತಲುಪಿ, ಅಲ್ಲಿ ನಡೆದ ಬೃಹತ್ ಸಮಾವೇಶವನ್ನು ನೋಡಿದರೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತಹ ಸಮಾವೇಶ ನಡೆಯಿತು. ಕುರುಬ ಸಮುದಾಯಕ್ಕೆ ಸಿಗಬೇಕಿರುವ ಮೀಸಲಾತಿಯನ್ನು ಸರ್ಕಾರ ನೀಡಬೇಕು. ಜಾತಿಯನ್ನು ಮೀರಿ ನಡೆದ ಮಹಾತ್ಮ ಕನಕದಾಸರು. ಅವರ ಪ್ರತಿಮೆಯನ್ನು ಹೊಸದುರ್ಗದಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಬೇಡಿಕೆಯನ್ನು ಶ್ರೀಗಳು ಇಟ್ಟಿರುವುದು ಸಂತೋಷದ ವಿಷಯ. ಸರ್ಕಾರ ಇದನ್ನು ಈಡೇರಿಸಬೇಕು ಎಂದು ಹೇಳಿದರು.


      ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಹೋರಾಟ ಹಾಗೂ ಪ್ರಯತ್ನಗಳು ನಡೆಯುತ್ತಲೆ ಇವೆ. ಇದೇ ರೀತಿ ವಾಲ್ಮೀಕಿ ಸಮಾಜ 3.5 ರಿಂದ 7.5 ಮೀಸಲಾತಿ ನೀಡುವುದು. ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸುವುದು ಹಾಗೂ ಇತರೆ ಸಮುದಾಯಗಳ ಅನೇಕ ಬೇಡಿಕೆಗಳನ್ನು ಇಂದಿನ ನಮ್ಮ ಸರ್ಕಾರ ಈಡೇರಿಸುವಲ್ಲಿ ಸತತ ಪ್ರಯತ್ನದಲ್ಲಿದೆ. ಬಿ.ಎಸ್.ವೈ ಅವರ ಆಡಳಿತದಲ್ಲಿ ಯಾವುದೇ ಮಠಗಳನ್ನು ದೂರವಿಟ್ಟಿಲ್ಲ. ಮಠಗಳು ಎಂದರೆ ಮುಖ್ಯಮಂತ್ರಿ ಗೌರವದ ಭಾವನೆಯನ್ನು ಹೊಂದಿದ್ದಾರೆ. ಮೈಲಾರ ಮಠಕ್ಕೆ 10 ಕೋಟಿ ಅನುದಾನವನ್ನು ನೀಡಿದ್ದಾರೆ. ಅವರು ವಿವಿಧ ಮಠಗಳ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ನೀಡುವ ಮೂಲಕ ಸಮುದಾಯಗಳ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

    ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಅವರು, 30 ವರ್ಷಗಳ ಹಿಂದೆ ಈ ಸಮಾಜವನ್ನು ಕಟ್ಟಲು ಮುಂದಾದಾಗ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ. ಅಂದಿಗೂ ಇಂದಿಗೂ ಅನೇಕ ವ್ಯತ್ಯಾಸಗಳಿವೆ. ಇಂದು ಬಿ.ಎಸ್.ವೈ ಅವರು ಮಠಗಳಿಗೆ ಕೋಟಿ ಕೋಟಿ ಅನುದಾನಗಳನ್ನು ನೀಡುತ್ತಿದ್ದೀರಿ. ನಮ್ಮ ಸಮುದಾಯಕ್ಕೆ ಅನುದಾನ ನೀಡುವ ಜೊತೆಯಲ್ಲಿ ಸಮುದಾಯದ ಜನರ ಬೇಡಿಕೆಯಾದ ಮೀಸಲಾತಿಯನ್ನು ಕೊಡುವ ಮೂಲಕ ನಮ್ಮ ಬೇಡಿಕೆ ಈಡೇರಿಸಿ ಎಂದರು.

      ಈ ವೇಳೆ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ರೇಷ್ಮೆ ಮತ್ತು ತೋಟಗಾರಿಕೆ ಸಚಿವ ಆರ್. ಶಂಕರ್, ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕರುಗಳಾದ ಎಂ.ಪಿ ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ, ಎಸ್.ರಾಮಪ್ಪ, ಎಸ್. ವಿ ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಅರುಣ್‍ಕುಮಾರ್ ಪೂಜಾರ್, ಬಳ್ಳಾರಿ ಮಾಜಿ ಸಂಸದ ವಿರೂಪಾಕ್ಷಪ್ಪ. ತಾ.ಪಂ ಮತ್ತು ಜಿ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap