ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

ಬೆಂಗಳೂರು:

    ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳು ಇನ್ನು ಮುಂದೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

     ಚೀನಾದ ಉತ್ತರ ಭಾಗದ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಪ್ರಕರಣಗಳು ರಾಜ್ಯದಲ್ಲಿ ಪಸರಿಸದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.ಸೋಮವಾರ ನಡೆದ ಇಲಾಖೆಯ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.

     ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನ್ಯುಮೋನಿಯಾ ಚಿಕಿತ್ಸೆಗೆ ಅಗತ್ಯವಿರುವ ಒಸೆಲ್ಟಾಮಿವಿರ್ ಮಾತ್ರೆಗಳು ಹಾಗೂ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಅಗತ್ಯವಿರುವಷ್ಟು ಪಿಪಿಇ ಕಿಟ್‌ಗಳನ್ನು ದಾಸ್ತಾನು ಮಾಡಿಕೊಳ್ಳುವಂತೆಯೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

     ಶೀತ, ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆಗಳುಳ್ಳ (ಸಾರಿ) ಪ್ರಕರಣಗಳನ್ನು ಆರೋಗ್ಯ ಇಲಾಖೆಯ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಯಾವುದೇ ಪ್ರದೇಶಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಅನಿಯಮಿತ ಪ್ರಮಾಣದಲ್ಲಿ ಹೆಚ್ಚಳವಾದರೆ ವಿಶೇಷ ನಿಗಾ ಇರಿಸಬೇಕು.

    ಇಂತಹ ಪ್ರಕರಣಗಳ ಪರೀಕ್ಷಾ ವರದಿಗಳ ಕುರಿತು ಆರೋಗ್ಯ ಇಲಾಖೆಯ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.ಕೋವಿಡ್ ನಿಯಂತ್ರಣಕ್ಕೆ ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್ ಚಿಕಿತ್ಸೆಗೆ ನಿಗದಿಪಡಿಸಿದ್ದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸನ್ನದ್ಧತೆ ಕುರಿತು ಪರಿಶೀಲನೆ ನಡೆಸಬೇಕು. ಹಾಸಿಗೆಗಳ ಲಭ್ಯತೆ, ವೈದ್ಯರು, ಅರೆವೈದ್ಯಕೀಯ ಮತ್ತು ಇತರ ಸಿಬ್ಬಂದಿಯ ಲಭ್ಯತೆ, ಪಿಪಿಇ ಕಿಟ್, ಆಮ್ಲಜನಕ, ಔಷಧಿಗಳ ದಾಸ್ತಾನಿನ ಕುರಿತು ಖಚಿತಪಡಿಸಿಕೊಳ್ಳಬೇಕು. ನ್ಯುಮೋನಿಯಾ ಸೋಂಕಿನಿAದ ಉದ್ಬವಿಸಬಹುದಾದ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

       ಸಮುದಾಯ ಹಂತದಲ್ಲಿ ತೀವ್ರ ನಿಗಾ ಇರಿಸಬೇಕು. ಒಂದೇ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ನ್ಯುಮೋನಿಯಾ ಪ್ರಕರಣಗಳು ಪತ್ತೆಯಾದಲ್ಲಿ (ಕ್ಲಸ್ಟರ್) ಆ ಬಗ್ಗೆ ವಿಶೇಷ ನಿಗಾ ಇರಿಸಬೇಕು. ಕೋವಿಡ್ ಸೋಂಕು ದೃಢಪಡದೇ ತೀವ್ರ ಉಸಿರಾಟದಿಂದ ಸಾವು ಸಂಭವಿಸಿದ ಪ್ರಕರಣಗಳಲ್ಲಿ ಹೆಚ್ಚಿನ ಪರೀಕ್ಷೆಗಳು ಮತ್ತು ಪ್ರಯೋಗಾಲಯಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಡಬೇಕು ಎಂದು ಸೂಚಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap