ಬೆಂಗಳೂರು
ಸಮಾಜವಾದಿ ಪ್ರಜಾಪ್ರಭುತ್ವದ ಹಣೆಪಟ್ಟಿಯನ್ನು ಕಿತ್ತು ಭಾರತಕ್ಕೆ ಬಂಡವಾಳಷಾಹಿ ಪ್ರಜಾಪ್ರಭುತ್ವದ ಹಣೆಪಟ್ಟಿ ಅಂಟಿಸಲು ನಿರಂತರವಾಗಿ ಶ್ರಮಿಸಿದ ಬಿಜೆಪಿ ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕುಸಿಯುವ ಮೂಲಕ ತನ್ನ ಮೂಲ ಶಕ್ತಿಯನ್ನು ಕಳೆದುಕೊಂಡಿದೆ.
ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಡ, ಮಿಜೋರಾಂ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಒಂದು ರಾಜ್ಯವನ್ನೂ ಗೆಲ್ಲಲಾಗದೆ ಬಿಜೆಪಿ ಕುಸಿದಿದ್ದರೆ ಪ್ರಮುಖ ರಾಜ್ಯಗಳಲ್ಲಿ ಗಮನಾರ್ಹ ವಿಜಯ ಸಾಧಿಸುವ ಮೂಲಕ ಕಾಂಗ್ರೆಸ್ ಮತ್ತೆ ಮೇಲಕ್ಕೆದ್ದಿದೆ.
ನೋಟುಗಳ ಅಮಾನ್ಯೀಕರಣ, ಜಿಎಸ್‍ಟಿ ಸೇರಿದಂತೆ ದೇಶದ ಬಡ, ಮಧ್ಯಮ ವರ್ಗದ ಬದುಕನ್ನೇ ಬಡಿದು ಹಾಕುವ ಕ್ರಮಗಳ ಮೂಲಕ ಬಂಡವಾಳಷಾಹಿಗಳ ಹಿತ ಕಾಪಾಡಲು ಹೊರಟ ಬಿಜೆಪಿಗೆ ದೇಶದ ಹೃದಯ ಭಾಗವೆನಿಸಿದ ರಾಜ್ಯಗಳಲ್ಲೇ ಭರ್ಜರಿ ಹೊಡೆತ ಬಿದ್ದಿದೆ.
ಒಂದು ವೇಳೆ ಅದು ಕೈಗೊಂಡ ಈ ಕ್ರಮಗಳು ನಿಜಕ್ಕೂ ಬಡ, ಮಧ್ಯಮ ವರ್ಗದ ಪರವಾಗಿದ್ದರೆ ನಿಶ್ಚಿತವಾಗಿಯೂ ಅದು ಈ ಹಿಂದೆ ತನ್ನ ಕೈಲಿದ್ದ ರಾಜ್ಯಗಳನ್ನು ಗೆಲ್ಲುವುದು ಸೇರಿದಂತೆ ಬೇರೆ ರಾಜ್ಯಗಳಲ್ಲೂ ಗಣನೀಯ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು.
ಆದರೆ ಐದು ರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ನಿಶ್ಚಿತವಾಗಿ ದೇಶದ ಜನ ಸಾಮಾನ್ಯರ ಬದುಕಿನ ಮೇಲೆ ಯಾವ ಮಟ್ಟದ ಆಘಾತವಾಗಿದೆ ಎಂಬುದಕ್ಕೆ ಪುರಾವೆ ಸಿಕ್ಕಂತಾಗಿದೆ.
ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಶಕ್ತಿಗಳ ಮಹಾ ಮೈತ್ರಿಗೆ ವೇದಿಕೆ ಸಜ್ಜಾಗಿದ್ದು, ಅಭಿವೃದ್ದಿಯ ಶಸ್ತ್ರಗಳಿಲ್ಲದೆ ಭಾವನಾತ್ಮಕ ವಿಷಯಗಳ ಮೂಲಕವೇ ಬಿಜೆಪಿ ಈ ಮಹಾಮೈತ್ರಿಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತನ್ನ ಕ್ರಮಗಳ ಮೂಲಕ ದೇಶದಲ್ಲಿ ಕಾಳಧನಿಕರನ್ನು ಬಗ್ಗುಬಡಿಯುವ ಭರವಸೆ ನೀಡಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇದರ ಭರದಲ್ಲೇ ದೇಶದಲ್ಲಿ ಒಂದು ಸನ್ನಿಯನ್ನು ಸೃಷ್ಟಿಸಿ, ಈ ಸನ್ನಿ ದಶಕಗಳ ಕಾಲ ನಿರಾತಂಕವಾಗಿ ಮುಂದುವರಿಯಲಿದೆ ಎಂದು ಭಾವಿಸಿತ್ತು.
ವಿಪರ್ಯಾಸವೆಂದರೆ, ಕಾಳಧನಿಕರನ್ನು ಬಗ್ಗು ಬಡಿಯುವ ಮೋದಿ ಸರ್ಕಾರದ ನಡೆಯಿಂದ ಕಾಳಧನಿಕರಿಗಿಂತ ಅಪಾರ ಪ್ರಮಾಣದ ಕಷ್ಟ, ನಷ್ಟ ಅನುಭವಿಸಿ ನರಳಿದ್ದು ಬಡ, ಮಧ್ಯಮ ವರ್ಗದ ಜನ.
ಆದರೆ ಇದನ್ನು ಪ್ರಶ್ನಿಸಿದರೆ ಅಂತವರು ದೇಶದ್ರೋಹಿಗಳು ಎಂಬ ಸರ್ಟಿಫಿಕೇಟುಗಳನ್ನು ಹಂಚಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದುದರಿಂದ ವಿರೋಧಿಗಳು ಆತಂಕದಿಂದ ಮೌನವಾಗಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಆದರೆ ಕಾಲಕ್ರಮೇಣ ಮೋದಿ ಸರ್ಕಾರದ ಕ್ರಮಗಳಿಂದ ತಮ್ಮ ಬದುಕು ದುಸ್ತರವಾಗುತ್ತಿದೆ ಎಂಬ ಅರಿವು ವ್ಯಾಪಕವಾಗುತ್ತಿದ್ದಂತೆಯೇ ಮೋದಿ ಸರ್ಕಾರ ಅಭಿವೃಧ್ದಿಯ ಮಾತನ್ನು ಬಿಟ್ಟು ಭಾವನಾತ್ಮಕ ವಿಷಯಗಳತ್ತ ಹೊರಳಿಕೊಳ್ಳುವ ಮುನ್ಸೂಚನೆ ನೀಡಿತ್ತು.
ಸರ್ದಾರ್ ಪಟೇಲರ ಪ್ರತಿಮೆ ಸ್ಥಾಪನೆಯಿಂದ ಹಿಡಿದು, ರಾಮಮಂದಿರದ ವಿವಾದ ಮತ್ತೆ ಮೇಲಕ್ಕೇಳುವ ತನಕ ಹಲವು ಭಾವನಾತ್ಮಕ ವಿಷಯಗಳಿಗೆ ಒತ್ತುಕೊಟ್ಟ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಭರ್ಜರಿ ಏಟು ತಿಂದಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಮುಂದಿನ ದಿನಗಳಲ್ಲಿ ದೇಶದ ರಾಜಕೀಯದ ಮೇಲೆ ಗಣನೀಯ ಪರಿಣಾಮ ಬೀರಲಿದೆಯಲ್ಲದೆ, ಕರ್ನಾಟಕದಲ್ಲೂ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಮತ್ತಷ್ಟು ಭದ್ರವಾದಂತಾಗಿದೆ.
ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಕರ್ನಾಟಕವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಕಸರತ್ತು ನಡೆಸುತ್ತಿದ್ದ ಬಿಜೆಪಿ ಮುಂದಿನ ದಿನಗಳಲ್ಲಿ ತಾನೇ ಆಪರೇಷನ್‍ಗೆ ಒಳಗಾಗುವ ಆತಂಕಕ್ಕೆ ಒಳಗಾಗಿದೆ.
ಹಾಗೆಯೇ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಮಹಾಮೈತ್ರಿಯ ಶಕ್ತಿ ಮತ್ತಷ್ಟು ಹೆಚ್ಚುವ ಲಕ್ಷಣಗಳು ಕಂಡಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಬಿಜೆಪಿ ಏನೇ ಹೇಳಿದರೂ ಮತದಾರ ನಂಬುವ ಸ್ಥಿತಿ ಇಲ್ಲದೆ ಇರುವ್ಯದರಿಂದ, ಅದೀಗ ರಾಮಮಂದಿರದಂತಹ ಭಾವನಾತ್ಮಕ ವಿಷಯಗಳನ್ನೇ ಮುಂದಿಟ್ಟುಕೊಂಡು ಹೋರಾಡಬೇಕಾದ ಸ್ಥಿತಿ ಇದೆ.
ಅಷ್ಟೇ ಅಲ್ಲ, ಬದುಕಿಗಾಗಿ ಪಡಿಪಾಟಲು ಪಡುವ ಸ್ಥಿತಿ ಬಂದರೆ ಮತದಾರ ಯಾರನ್ನೂ ಸಹಿಸಿಕೊಳ್ಳುವುದಿಲ್ಲ ಎಂಬುದು ಅನುಮಾನಕ್ಕೆಡೆ ಇಲ್ಲದಂತೆ ಮತ್ತೊಮ್ಮೆ ಸಾಬೀತಾದಂತಾಗಿದೆ.
ಸಿಕ್ಕಷ್ಟೇ ಲಾಭ ಎಂದುಕೊಂಡು ಬಿಜೆಪಿ ಯಾವುದೇ ರಾಜ್ಯಗಳಲ್ಲಿ ಆಟವಾಡಲು ಯತ್ನಿಸಿದರೂ ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅದು ಕಮಲ ಪಾಳೆಯದ ಆತ್ಮಹತ್ಯಾತ್ಮಕ ಕ್ರಮವಾಗಲಿದೆಯೇ ಹೊರತು ಬೇರೇನೂ ಆಗುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ