ಬೆಂಗಳೂರು:
ರಾಜ್ಯ ಸರ್ಕಾರಕ್ಕೆ ತಾಕತ್ತು ಇದ್ದರೆ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಜಾರಿಗೆ ತರಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಮಂಗಳವಾರ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪ್ರತಿದಿನ (ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ) ಕಾಂತರಾಜು ಅವರ ವರದಿಯ ಬಗ್ಗೆ ಮಾತನಾಡುತ್ತಾರೆ. ನಾವು (ಬಿಜೆಪಿ ಮತ್ತು ಜೆಡಿಎಸ್) ಅಧಿಕಾರದಲ್ಲಿದ್ದಾಗ ವರದಿಯನ್ನು ಸ್ವೀಕರಿಸಲಿಲ್ಲ ಎಂದು ಆರೋಪಿಸುತ್ತಾರೆ. ಈಗ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ನೀವೇಕೆ ವರದಿಯನ್ನು ಸ್ವೀಕರಿಸಿಲ್ಲ, ಜಾರಿಗೆ ತಂದಿಲ್ಲ? ವರದಿ ಸ್ವೀಕರಿಸಿ, ಜಾರಿಗೆ ತರಲು ಇರುವ ಅಡ್ಡಿಯಾದರೂ ಏನು? ಸಿದ್ದರಾಮಯ್ಯ ಅವರಿಗೆ ಅವರಿಗೆ ತಾಕತ್ತು ಇದ್ದರೆ ಕಾಂತರಾಜು ವರದಿಯನ್ನು ಸ್ವೀಕರಿಸಿ ಜಾರಿ ಮಾಡಲಿ ಎಂದು ನೇರವಾಗಿ ಸವಾಲು ಹಾಕಿದರು.
2ಎ ಮೀಸಲು ವ್ಯಾಪ್ತಿಯಲ್ಲಿ ಸುಮಾರು 108 ಉಪ ಜಾತಿಗಳು ಇವೆ. ಆದರೆ, ಮೀಸಲಾತಿ ಸೌಲಭ್ಯದ ಸಿಂಹಪಾಲು ಯಾರ ಪಾಲಾಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಆಮೇಲೆ ಕಾಂತರಾಜು ವರದಿ, ಇನ್ನೊಂದು ವರದಿಯ ಬಗ್ಗೆ ಮಾತನಾಡಿ ಎಂದು ಪಂಥಾಹ್ವಾನ ನೀಡಿದರು.ಇದೇ ವೇಳೆ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು 9ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ದಾಖಲೆಯಾಗಿದೆ ಎಂದು ಹೇಳಿದರು.
2018ರಲ್ಲಿ ನರೇಂದ್ರ ಮೋದಿಯವರು ಕಾಂಗ್ರೆಸ್ ತೊರೆದು ಬಿಜೆಪಿಯೊಂದಿಗೆ ಕೈಜೋಡಿಸುವಂತೆ ಹಾಗೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಹೇಳಿದ್ದರು, ಆಗ ಅವರ ಮಾತು ಕೇಳಿದ್ದರೆ ನಿತೀಶ್ ಕುಮಾರ್ ಅವರಂತೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಿದ್ದೆ. ಆದರೆ, ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಅನ್ನು ನಂಬಿ ಆ ಅವಕಾಶ ಕಳೆದುಕೊಂಡಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದರು.
ಈಗ ಯಾರೂ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಲು ಬಯಸುವುದಿಲ್ಲ. ಎಲ್ಲರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಿತೀಶ್ ಆಯಿತು, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಯಾರಿಗೂ ಆ ಪಕ್ಷದ ಸಹವಾಸ ಬೇಡವಾಗಿದೆ. ಇವರ ನಡವಳಿಕೆ ನೋಡಿ ಎಲ್ಲರೂ ಬೇಸತ್ತು ಒಬ್ಬೊಬ್ಬರಾಗಿ ಹೋಗುತ್ತಿದ್ದಾರೆಂದು ಲೇವಡಿ ಮಾಡಿದರು.