ನಿನ್ನೆ ಒಂದೇ ದಿನದಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ 6 ಜನ ಸಾವು…..!

ಬೆಂಗಳೂರು:

    ರಾಜ್ಯದಲ್ಲಿ ಹೃದಯಾಘಾತಕ್ಕೆ ಮಂಗಳವಾರ ಮತ್ತೆ ಆರು ಜನ ಬಲಿಯಾಗಿದ್ದಾರೆ. ಈ ಪೈಕಿ ಹಾಸನದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಹೊಳೆನರಸೀಪುರದ ಸಂಜಯ್, ಹಾಸನ ತಾಲೂಕು ಕೊಮ್ಮೇನಹಳ್ಳಿ ಹರ್ಷಿತಾ ಹಾಗೂ ಬೇಲೂರು ತಾಲೂಕಿನ ರವಿಕುಮಾರ್ ಮೃತರು. ಶಿವಮೊಗ್ಗ ಹೊರವಲಯದಲ್ಲಿ ಶ್ರೀನಿಧಿ ಎಂಬ ವಿದ್ಯಾರ್ಥಿ, ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಇಬ್ಬರು ಹೃದಯಸ್ತಂಭನದಿಂದ  ಸಾವನ್ನಪ್ಪಿದ್ದಾರೆ. 

   ಹಾಸನ ಜಿಲ್ಲೆಯ ಸೋಮನಹಳ್ಳಿಯ ಸಂಜಯ್ (25) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಎದೆನೋವು ಎಂದು ಆಸ್ಪತ್ರೆಗೆ ಹೋಗಿದ್ದರು.ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ್ದರು. ನಂತರ ಬೇರೆ ಆಸ್ಪತ್ರೆಗೆ ಹೋಗುವಾಗ ಮೃತಪಟ್ಟಿದ್ದಾರೆ. ಸಂಜಯ್ ಅವರಿಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಇವರ ಸಾವಿನಿಂದ ಕುಟುಂಬಸ್ಥರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 

   ಹಾಸನದ ಕೊಮ್ಮೆನಹಳ್ಳಿಯಲ್ಲಿ ಒಂದುವರೆ ತಿಂಗಳ ಬಾಣಂತಿ ಹರ್ಷಿತಾ ಎಂಬವರು ಸಾವನ್ನಪ್ಪಿದ್ದಾರೆ. ಬಾಣಂತನಕ್ಕೆ ಆಯನೂರು ಗ್ರಾಮದ ತವರು ಮನೆಯಲ್ಲಿದ್ದ ಹರ್ಷಿತಾ (22) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಹಾಸನದ ಕೊಮ್ಮೇನಹಳ್ಳಿಯ ನಿವಾಸಿಯಾಗಿದ್ದು, ಹೆರಿಗೆ ಬಳಿಕ ತವರಿಗೆ ತೆರಳಿದ್ದರು. ಮೊನ್ನೆ ರಾತ್ರಿ ಹರ್ಷಿತಾಗೆ ಎದೆ ನೋವು ಕಾಣಿಸಿಕೊಂಡಿತ್ತು. ತಮ್ಮ ಪತಿಯನ್ನು ಕರೆಸಿಕೊಂಡಿದ್ದಾರೆ. ಆದರೆ ನಿನ್ನೆ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. 

   ಶಿವಮೊಗ್ಗದಲ್ಲಿ ಹೃದಯಾಘಾತಕ್ಕೆ ಸರ್ಕಾರಿ ವೈದ್ಯರೊಬ್ಬರು ಬಲಿಯಾಗಿದ್ದಾರೆ. ಹೃದಯಾಘಾತದಿಂದ ಸರ್ಕಾರಿ ವೈದ್ಯ ಸಂದೀಪ್ (48) ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಘಟನೆ ನಡೆದಿದೆ. ಸಂದೀಪ್ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾಗಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. 

   ಚಿಕ್ಕಮಂಗಳೂರಿನಲ್ಲೂ ಕೂಡ ಹೃದಯಾಘಾತ ಆತಂಕ ಸೃಷ್ಟಿಸಿದ್ದು, ಮೆಡಿಕಲ್‌ನಲ್ಲಿ ಮಾತ್ರೆ ಖರೀದಿಸುವಾಗಲೇ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದೆ. ಮಾತ್ರೆ ಸೇವಿಸಲು ನೀರು ಬೇಡುತ್ತಿದ್ದಂತೆ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತರು ಕೋಟೆ ಬಡಾವಣೆಯ ವಿಶ್ವನಾಥ್ (50). ವಿಶ್ವನಾಥ್ ಅವರು ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೂನ್ 26ರಂದು ದೀಪ ನರ್ಸಿಂಗ್ ಹೋಂ ಬಳಿ ಈ ಘಟನೆ ನಡೆದಿತ್ತು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರುದೃಢಪಡಿಸಿದ್ದಾರೆ. ಚಿಕ್ಕಮಗಳೂರಲ್ಲಿ ಎರಡು ತಿಂಗಳಲ್ಲಿ ಒಟ್ಟು 13 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 

   ಇನ್ನು ತುಮಕೂರಿನಲ್ಲಿ ಬಿಜೆಪಿಯ ಯುವ ಮುಖಂಡ ನೀಲಕಂಠ ಸ್ವಾಮಿ (36) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತುಮಕೂರು ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ನೀಲಕಂಠ ಸ್ವಾಮಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

   ದಕ್ಷಿಣಕನ್ನಡ ಜಿಲ್ಲೆಯ ಗಂಪದಕೋಡಿಯ ವಜ್ರಾಕ್ಷ ಪೂಜಾರಿ (53) ಎನ್ನುವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಪದಕೋಡಿ ಗ್ರಾಮದ ನಿವಾಸಿಯಾಗಿದ್ದಾರೆ. ನಿನ್ನೆ ರಾತ್ರಿ ವಜ್ರಾಕ್ಷ ಪೂಜಾರಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಉಜಿರೆಯ ಖಾಸಗಿ ಆಸ್ಪತ್ರೆಗೆ ವಜ್ರಾಕ್ಷ ಪೂಜಾರಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link