ತುಮಕೂರು :
ಟೊಮೆಟೋ ಬೆಲೆ ಗಗನಕ್ಕೇರಿರುವ ನಡುವೆಯೇ ಹುಣಸೆ ಹಣ್ಣಿನ ಬೆಲೆಯೂ ಹೆಚ್ಚಳವಾಗುತ್ತಿದೆ. ಕೆಂಪುರಾಣಿ ಟೊಮೆಟೋ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದು, ಪರ್ಯಾಯವಾಗಿ ಹುಣಸೆ ಹಣ್ಣಿನತ್ತ ಮಾರುಹೋಗುತ್ತಿದ್ದಾರೆ. ಇದೇ ಸಮಯಕ್ಕೆ ಹುಳಿರಾಜ ಹುಣಸೆ ಹಣ್ಣಿನ ಬೆಲೆಯೂ ಏರು ಮುಖದಲ್ಲಿದೆ.
ಈ ವರ್ಷ ಹುಣಸೆ ಹಣ್ಣಿನ ದರ 100 ರೂ.ಗಳನ್ನು ದಾಟಿ ಮುಂದೆ ಹೋಗಿದೆ. ರಾಮನಗರ ಭಾಗದಲ್ಲಿ 200 ರೂ.ಗಳನ್ನು ತಲುಪಿರುವ ವರದಿಗಳಿವೆ. ಉತ್ತಮ ಹುಣಸೆ ಹಣ್ಣು ಕೆಜಿಗೆ ರಾಮನಗರದಲ್ಲಿ 200 ರೂ.ಗಳಿಗೆ ಮಾರಾಟವಾಗುತ್ತಿದೆ. ಹುಣಸೆ ಧಾರಣೆ ಹೆಚ್ಚಾಗಲು ಟೋಮೆಟೋ ದರ ಏರಿಕೆ ಒಂದೇ ಕಾರಣವಲ್ಲದಿದ್ದರೂ ಅದಕ್ಕೆ ಪೂರಕ ಎಂಬಂತೆ ದರ ಏರಿಕೆಯಾಗುತ್ತಿರುವುದು ಮಾತ್ರ ಸತ್ಯ. ಇಳುವರಿ ಕಡಿಮೆಯಾಗಿರುವುದು, ಮರಗಳನ್ನು ಕಟಾವು ಮಾಡುತ್ತಿರುವುದು, ಮುಂದಿನ ದಿನಗಳಲ್ಲಿ ಹುಣಸೆ ಹಣ್ಣಿನ ಕೊರತೆಯಾಗಲಿದೆ ಇವೆಲ್ಲವೂ ಹುಣಸೆ ಹಣ್ಣಿನ ದರ ಹೆಚ್ಚಳಕ್ಕೆ ಕಾರಣವಾಗಿವೆ. ಕಳೆದ 2 ವರ್ಷಗಳಿಂದ ಹೆಚ್ಚು ಮಳೆಯಾಗಿ ಹೂ ಉದುರಿ ಹೆಚ್ಚು ಕಾಯಿ ಕಟ್ಟದ ಕಾರಣ ಇಳುವರಿ ಕಡಿಮೆಯಾಗತೊಡಗಿದೆ.
ತುಮಕೂರು ಜಿಲ್ಲೆಯಲ್ಲಿ ಸೀಸನ್ ವೇಳೆ (ಮಾರ್ಚ್, ಏಪ್ರಿಲ್) ಕೆ.ಜಿ.ಗೆ 125 ರೂ.ಗಳಿಂದ 150 ರೂ.ಗ¼ವರೆಗೆ ಮಾರಾಟವಿತ್ತು. ಈಗ ಎರಡು ತಿಂಗಳಿನಲ್ಲಿ ಮತ್ತಷ್ಟು ಧಾರಣೆ ಏರಿಕೆಯಾಗಿದೆ.
ತುಮಕೂರು ಜಿಲ್ಲೆಯ ಬಹಳಷ್ಟು ಹುಣಸೆ ಬೆಳೆಗಾರರು ಮಡಕಶಿರಾ ಮತ್ತು ಹಿಂದೂಪುರದ ಕೋಲ್ಡ್ ಸ್ಟೋರೇಜ್‌ನಲ್ಲಿ ಹುಣಸೆ ಹಣ್ಣು ದಾಸ್ತಾನು ಇಡುತ್ತಾರೆ. ಅಗತ್ಯ ಬಿದ್ದಾಗ ಅಥವಾ ಅಕ್ಟೋಬರ್‌ನಿಂದ ಅದನ್ನು ಸಿದ್ಧಪಡಿಸಿ ಮಾರಾಟ ಮಾಡುವ ಪ್ರಯತ್ನದಲ್ಲಿ ನಿರತರಾಗುತ್ತಾರೆ. ಹೆಚ್ಚು ಹುಣಸೆ ಬೆಳೆಯುವವರು ಈ ವ್ಯವಸ್ಥೆಯೊಳಗೆ ಇದ್ದಾರೆ. ಕಡಿಮೆ ಮರಗಳನ್ನು ಹೊಂದಿರುವವರು ತುಮಕೂರಿನ ಎಪಿಎಂಸಿಗೆ ಮಾರಾಟ ಮಾಡುತ್ತಾರೆ.
ಕೆಲವು ವರ್ಷಗಳಿಂದ ಕುಸಿತದ ಹಾದಿಯಲ್ಲಿದ್ದ ಹುಣಸೆ ಹಣ್ಣಿನ ಬೆಲೆ ಕಳೆದ ಚೇತರಿಸಿಕೊಳ್ಳುತ್ತಲೇ ಸಾಗಿದೆ. ಫೆಬ್ರವರಿ ತಿಂಗಳಿನಿAದಲೂ ಆಶಾದಾಯಕ ಬೆಳವಣಿಗೆ ಇದೆ. ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಫೆಬ್ರವರಿ ತಿಂಗಳಿನಲ್ಲಿ ಉತ್ತಮ ಗುಣಮಟ್ಟದ ಹುಣಸೆ ಹಣ್ಣಿಗೆ ಕ್ವಿಂಟಾಲ್‌ಗೆ 13500 ರೂ.ಗಳಿಂದ 19,000 ರೂ.ಗಳ ತನಕ ಮಾರಾಟವಾಗಿತ್ತು. ಈ ದರ ಈಗ ಮತ್ತಷು ಏರಿಕೆಯಾಗಿದ್ದು, ಹುಣಸೆ ಹಣ್ಣು ಸಂಗ್ರಹಿಸಿ ಇಟ್ಟುಕೊಂಡಿರುವವರಲ್ಲಿ ಸಂತಸ ಮನೆ ಮಾಡಿದೆ.
ಕೋವಿಡ್ ಹಾಗೂ ಹಿಂದಿನ ವರ್ಷಗಳ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಇದ್ದ ಕಾರಣ ಕಳೆದ ವರ್ಷ ಬೆಲೆ ಕುಸಿದಿತ್ತು. ಇಡೀ ರಾಜ್ಯದಲ್ಲಿ ಆಂದ್ರಪ್ರದೇಶದ ಹಿಂದೂಪುರ, ಹುಣಸೆ ಹಣ್ಣಿನಲ್ಲಿ ಬಹುದೊಡ್ಡ ಮಾರುಕಟ್ಟೆ ಕೇದ್ರವಾದರೆ ತುಮಕೂರು 2ನೇ ಸ್ಥಾನದಲ್ಲಿದೆ. ತುಮಕೂರಿನಿಂದ ಸಾಕಷ್ಟು ಹುಣಸೆ ಹಣ್ಣು ಬೇರೆ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತದೆ. ಹೀಗಾಗಿ ತುಮಕೂರು ಎಪಿಎಂಸಿ ಹುಣಸೆ ಹಣ್ಣಿಗೆ ಪ್ರಸಿದ್ಧಿ ಪಡೆದಿದೆ.
ಈಗ ಟೊಮೆಟೋಗೆ ಪರ್ಯಾಯವಾಗಿ ಹುಣಸೆ ಹಣ್ಣು ಬಳಸುತ್ತಿದ್ದವರಿಗೂ ಈಗ ಅದರ ಬಿಸಿ ತಟ್ಟತೊಡಗಿದೆ. ಕಳೆದ 2 ವರ್ಷಗಳ ಹಿಂದೆ ಹುಣಸೆ ಹಣ್ಣಿನ ಬೆಲೆ ಇಳಿಕೆಯಾಗಿ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು. ಹಲವು ಭಾಗಗಳಲ್ಲಿ ಮರದಿಂದ ಹುಣಸೆ ಹಣ್ಣನ್ನು ಕೀಳಿಸುವ ಗೋಜಿಗೆ ಹೋಗಿರಲಿಲ್ಲ. ಹೀಗಾಗಿ ಸಾಕಷ್ಟು ಕಡೆ ಹಣ್ಣು ಮರದಲ್ಲಿಯೇ ಕೊಳೆತು ಹೋಗಿತ್ತು.
ಬಯಲು ಸೀಮೆ ಪ್ರದೇಶಗಳಾದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಭಾಗಗಳಲ್ಲಿ ಹುಣಸೆ ಹಣ್ಣನ್ನು ಹೆಚ್ಚು ಬೆಳೆಯಲಾಗುತ್ತಿದೆ. ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಮಧುಗಿರಿ ಭಾಗಗಳಲ್ಲಿ ಕೆಲವರು ಇದನ್ನೇ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಅವಲಂಬಿಸಿದ್ದಾರೆ. ಬಯಲು ಸೀಮೆಯಲ್ಲಿ ನೀರಾವರಿ ವ್ಯವಸ್ಥೆ ಹೆಚ್ಚು ಇಲ್ಲದ ಕಾರಣ ಹುಣಸೆ ಮರಗಳನ್ನು ಬೆಳೆಯಲಾಗುತ್ತದೆ. ವರ್ಷಕ್ಕೊಮ್ಮೆ ಇದರ ಇಳುವರಿ ಸಿಗುತ್ತದೆ. ನೀರು ಹಾಕಿ ಗೊಬ್ಬರ ಹಾಕುವಂತಿಲ್ಲ. ಮೂರು ವರ್ಷಗಳ ಕಾಲ ಸಸಿನೆಟ್ಟು ಬೆಳೆಸಿದರೆ 100 ವರ್ಷಗಳ ಕಾಲ ಅದರಲ್ಲಿ ಫಲ ತೆಗೆಯಬಹುದು.
ಮಳೆ ಕೈಕೊಟ್ಟರೂ ಹುಣಸೆ ಮಾತ್ರ ಬೆಳೆಗಾರರ ಕೈ ಹಿಡಿಯುತ್ತದೆ. ಹೀಗಾಗಿ ಕೆಲವು ಭಾಗಗಳಲ್ಲಿ ಇದನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಹುಣಸೆ ಬೆಳೆದು ಮಾರಾಟ ಮಾಡುವವರ ಸಂಖ್ಯೆ ಕ್ಷೀಣಿಸತೊಡಗಿದೆ. ಇದಕ್ಕೆ ಕಾರಣಗಳು ಹಲವು. ಲಾಭಕ್ಕಿಂತ ಖರ್ಚುಗಳೇ ಹೆಚ್ಚು. ರೈತರು ಹುಣಸೆ ಹಣ್ಣನ್ನು ಕೀಳಿಸಿ ಮಾರಾಟ ಮಾಡುವ ತನಕ ಹಲವು ಬಾಬತ್ತುಗಳ ಖರ್ಚುಗಳು ಬರಲಿವೆ. ಹಣ್ಣು ಕೀಳಿಸಲು ಮರ ಹತ್ತಿಸಬೇಕು.
ಇದಕ್ಕಾಗಿಯೇ ಕೂಲಿಗಾರರನ್ನು ಹುಡಕಬೇಕು. ಅಪ್ಪಿತಪ್ಪಿ ಮರದಿಂದ ಆತ ಬಿದ್ದರೆ ಆ ಅನಾಹುತಗಳನ್ನು ನಿಭಾಯಿಸಬೇಕು. ಇಂತಹ ಹಲವು ಪ್ರಸಂಗಗಳು ಜಿಲ್ಲೆಯಲ್ಲಿ ಘಟಿಸಿವೆ. ಇದನ್ನು ಗಮನಿಸಿಯೇ ಹುಣಸೆ ಬೆಳೆಗಾರರು ಹಣ್ಣು ಕೀಳಿಸಲು ಹಿಂದೇಟು ಹಾಕುತ್ತಾರೆ.
ಮರದಿಂದ ಹಣ್ಣು ಕೀಳಿಸಿದ ನಂತರ ಅದರ ಸಿಪ್ಪೆ ತೆಗೆಯಿಸಿ ಹಣ್ಣನ್ನು ಮಾಗಿಸಬೇಕು. ಮರದಲ್ಲಿನ ಕಾಯಿ ಇಳುವರಿ ಗಮನಿಸಿ ಒಂದು ಮರಕ್ಕೆ ಇಂತಿಷ್ಟು ಹಣ ಎಂದು ದಲ್ಲಾಳಿಗಳು, ವ್ಯಾಪಾರಸ್ಥರು ಗುತ್ತಿಗೆ ಪಡೆಯುತ್ತಾರೆ. ಕಳೆದ ವರ್ಷ ಹಾಕಿದ ಬಂಡವಾಳವೂ ಸಿಗಲಿಲ್ಲ ಎಂಬ ಹೇಳಿಕೆಗಳು ದಲ್ಲಾಳಿಗಳ ವಲಯದಲ್ಲಿ ಕೇಳಿಬರುತ್ತಿದೆ.
ಕೊರೋನಾ ನಂತರದ ದಿನಗಳಲ್ಲಿ ನಗರ ವಾಸಿಗಳು ಗ್ರಾಮೀಣ ಪ್ರದೇಶಗಳನ್ನು ಆಶ್ರಯಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳು ಜೋರು ಪಡೆದಿವೆ. ಎಲ್ಲ ಕಡೆ ಜಲವರ್ಗ ಕಾಣಿಸುತ್ತಿರುವ ಪರಿಣಾಮ ಸಿಕ್ಕ ಸಿಕ್ಕ ಕಡೆಗಳಲ್ಲಿ ಬೋರ್‌ವೆಲ್ ಕೊರೆಯಿಸಿ ನೀರಾವರಿ ಮಾಡುತ್ತಿದ್ದಾರೆ. ಎಲ್ಲರ ಮುಂದೆ ಈಗ ಅಡಿಕೆ ಕಾಣುತ್ತಿದೆ. ಕೆಲವೇ ವರ್ಷಗಳಲ್ಲಿ ಕೈತುಂಬ ಆದಾಯ ಪಡೆಯಬಹುದು ಎಂಬ ಧಾವಂತದಲ್ಲಿ ತೆಂಗು ಬದಲಿಗೆ ಅಡಿಕೆ ಮೊರೆ ಹೋಗುತ್ತಿದ್ದಾರೆ.
ಹೀಗಾಗಿ ಹುಣಸೆ ಬೆಳೆಯ ಕಡೆಗೆ ಆಸಕ್ತಿ ವಹಿಸುತ್ತಿಲ್ಲ. ಪರಿಣಾಮವಾಗಿ ಸಾಕಷ್ಟು ಮರಗಳಿಗೆ ಕೊಡಲಿ ಪೆಟ್ಟು ಬೀಳತೊಡಗಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಹುಣಸೆ ಹಣ್ಣು ಈಗ ಕ್ಷೀಣಿಸುತ್ತಿದೆ. ಮುಂದಿನ ದಿನಗಳಲ್ಲಿ ಹುಣಸೆ ಹಣ್ಣಿಗೂ ಶುಕ್ರದೆಸೆ ಶುರುವಾಗಲಿದೆ.
ತುಮಕೂರು ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುವ ಹುಣಸೆ ಹಣ್ಣಿಗೆ ವಿಶ್ವ ಮಟ್ಟದಲ್ಲಿ ಬೇಡಿಕೆ ಇದೆ. ದಪ್ಪ ತೊಳೆ, ದಟ್ಟ ತಿರುಳು, ಹುಳಿ ಹೊಂದಿರುವ ಕಾರಣಕ್ಕೆ ಸಾಕಷ್ಟು ಬೇಡಿಕೆ. ಇದಕ್ಕೆ ತಕ್ಕ ಮಣ್ಣಿನ ಗುಣ ಈ ಭಾಗದಲ್ಲಿದೆ. ವರ್ಷಕ್ಕೊಮ್ಮೆ ಬರುವ ಹುಣಸೆ ಬೆಳೆ ಸೀಸನ್ ಸಾಮಾನ್ಯವಾಗಿ ಸಂಕ್ರಾAತಿ ನಂತರ ಆರಂಭವಾಗಿ ಏಪ್ರಿಲ್‌ವರೆಗೂ ಇರುತ್ತದೆ. ಈ ಸಮಯದಲ್ಲಿ ಎಪಿಎಂಸಿಯಲ್ಲಿ ವಹಿವಾಟು ಜೋರಾಗಿಯೇ ನಡೆಯುತ್ತದೆ.
ಇಲ್ಲಿ ಖರೀದಿಸಿದ ಹುಣಸೆ ಹಣ್ಣು ತಮಿಳುನಾಡು, ಆಂಧ್ರ, ತೆಲಂಗಾಣಕ್ಕೆ ರವಾನೆಯಾಗಿ ಅಲ್ಲಿಂದ ವಿದೇಶಿ ಮಾರುಕಟ್ಟೆಗಳಿಗೆ ರಫ್ತಾಗುತ್ತದೆ. ಅಡಿಗೆ, ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳಿಗೆ ಹುಣಸೆ ಹಣ್ಣು ಬಳಸಲಾಗುತ್ತಿದ್ದು, ಹೆಚ್ಚಿನ ಬೇಡಿಕೆಯೂ ಇದಕ್ಕಿದೆ.
ಕೊಬ್ಬರಿ ದರ ಕ್ಷೀಣಿಸಿ ರೈತರು ಕೊಬ್ಬರಿ ಬೆಳೆಯಿಂದ ವಿಮುಖರಾಗದಂತೆ ಹೇಗೆ ನೋಡಿಕೊಳ್ಳಬೇಕೋ ಹಾಗೆಯೇ ಹುಣಸೆ ಹಣ್ಣು ಬೆಳೆಗಾರರತ್ತಲೂ ಸರ್ಕಾರಗಳ ಕೃಪಾ ಕಟಾಕ್ಷ ನೀಡಬೇಕು ಎಂಬುದು ಕೇಳಿಬರುತ್ತಿರುವ ಮಾತು. ರೈತರು ಕೊಯಲು ಕಾಲದಲ್ಲಿ ಹಣ್ಣು ಸಂಗ್ರಹಿಸಿಡಲು ಶೈತ್ಯಾಗಾರ ನಿರ್ಮಾಣಕ್ಕೆ ಶಿರಾದಂತಹ ಪ್ರದೇಶಗಳಲ್ಲಿ ಅವಕಾಶ ಮಾಡಿಕೊಡಬೇಕು. ದರ ಹೆಚ್ಚಳವಾದಾಗ ರೈತರಿಗೆ ಅದರ ಲಾಭ ಸಿಗಬೇಕು ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.
ತೋವಿನಕೆರೆ ಸುತ್ತಮುತ್ತ ಬಹಳಷ್ಟು ಜನ ಹುಣಸೆ ಬೆಳೆಯುತ್ತಿದ್ದರು. ಅಡಕೆ ಬೆಳೆಗೆ ಮಾರುಹೋಗಿ ಸುಮಾರು ಜನ ಹುಣಸೆ ಮರಗಳನ್ನು ಕಡಿದು ಹಾಕಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ತೋವಿನಕೆರೆಯ ಪ್ರಗತಿಪರ ಕೃಷಿಕ ಹಾಗೂ ಬರಹಗಾರರಾದ ಪದ್ಮರಾಜು.
ಅಡಿಕೆಗೆ ಕ್ವಿಂಟಾಲ್ ಧಾರಣೆ 50 ಸಾವಿರ ರೂ.ಗಳಿಗೂ ಹೆಚ್ಚಿರುವ ಹಿನ್ನೆಲೆಯಲ್ಲಿ ಎಲ್ಲರ ಮನಸ್ಸು ಅಡಿಕೆಯತ್ತ ಹೊರಳಿದೆ.
ಪರಿಣಾಮವಾಗಿ ಹುಣಸೆ ಮರಗಳನ್ನು ಕಡಿದು ಹಾಕಿ ಬಯಲಿನಲ್ಲೆಲ್ಲಾ ಅಡಿಕೆ ಬೆಳೆಯಲಾಗುತ್ತಿದೆ. ಮಳೆಗಾಲ ಮತ್ತು ನೀರಾವರಿ ಇರುವುದರಿಂದ ಸಮಸ್ಯೆ ಇಲ್ಲ. ಆದರೆ ಭವಿಷ್ಯದಲ್ಲಿ ಇವೆಲ್ಲ ತುಂಬಾ ಅಪಾಯಕಾರಿ ಅನುಸರಣೆಗಳು. ಎಲ್ಲರೂ ವಾಣಿಜ್ಯ ಬೆಳೆಯ ಹಿಂದೆ ಬೀಳುತ್ತಿದ್ದು, ಆಹಾರೋತ್ಪನ್ನ ಬೆಳೆಗಳು ಕ್ಷೀಣಿಸುತ್ತಿವೆ. ಈ ಬಗ್ಗೆ ಕೃಷಿ ಮತ್ತು ತೋಟಗಾರಿಕಾ ವಲಯದ ತಜ್ಞರು ಹೆಚ್ಚು ಯೋಚಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ