ತುಮಕೂರು:
ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳು ನಡೆದಾಗ ರಾಷ್ಟ್ರೀಯ ಪಕ್ಷಗಳ ಚಿಹ್ನೆ ಬ್ಯಾಲೆಟ್ ಪೇಪರ್‍ಗಳಲ್ಲಿ ಕಾಣಿಸುತ್ತಿದ್ದವು (ಈಗ ಮತ ಯಂತ್ರಗಳಾಗಿ ಬದಲಾಗಿವೆ). ಆಯಾ ಪಕ್ಷಗಳ ಚಿಹ್ನೆ ಅಡಿಯಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಮೊದಲ ಚುನಾವಣೆಯಿಂದಲೂ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಲೇ ಬಂದಿದೆ. ಇದೇ ಪ್ರಥಮ ಬಾರಿಗೆ ಮತಯಂತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದೆ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಿತು.
ಮೈತ್ರಿ ಹೊಂದಾಣಿಕೆ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿತ್ತು. ಅಂತಹ ಕ್ಷೇತ್ರಗಳಲ್ಲಿ ಜೆಡಿಎಸ್ ಚಿಹ್ನೆ ಅಡಿಯಲ್ಲಿಯೇ ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದರು. ತುಮಕೂರು ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸಿದ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆ ಚಿಹ್ನೆ ಅಡಿಯಲ್ಲಿಯೇ ಅವರು ಕಣದಲ್ಲಿದ್ದರು.
ಕೆಲ ವಯೋವೃದ್ಧರು, ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಾಗಿ ಬದುಕು ಸವೆಸುತ್ತಿರುವವರು ಮೊದಲಿನಿಂದಲೂ ಕಾಂಗ್ರೆಸ್ ಚಿಹ್ನೆಯನ್ನು ಚೆನ್ನಾಗಿ ಬಲ್ಲರು. ಕೆಲ ಸಾಂಪ್ರದಾಯಿಕ ಮತದಾರ ವರ್ಗ ಹಿಂದಿನಿಂದಲೂ ಕಾಂಗ್ರೆಸ್‍ಗೆ ಮತ ಹಾಕುತ್ತಾ ಬಂದಿದೆ. ಗ್ರಾಮೀಣ ಸಮುದಾಯದಲ್ಲಿ, ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ, ಅನಕ್ಷರಸ್ಥರೇ ವಾಸ ಮಾಡುವ ಸ್ಥಳಗಳಲ್ಲಿ ಅಲ್ಲಿನ ಜನ ತಮ್ಮ ಪಕ್ಷ ಯಾವುದೆಂಬುದನ್ನು ಸಂಕೇತದ ಮೂಲಕವೇ ಗುರುತಿಸುತ್ತಾರೆ.
ಈ ಬಾರಿಯ ಚುನಾವಣೆಯಲ್ಲಿ ಹಸ್ತದ ಗುರುತಿಲ್ಲದ ಕಾರಣ ಬಹಳಷ್ಟು ಜನ ಮತ ಯಂತ್ರವನ್ನು ತಡಕಾಡಿದ್ದಾರೆ. ಚುನಾವಣಾ ಸಿಬ್ಬಂದಿಯನ್ನೇ ಪ್ರಶ್ನೆ ಮಾಡಿದ್ದಾರೆ. ಹಸ್ತದ ಗುರುತು ಇಲ್ಲ. ನಾನು ಓಟು ಮಾಡುವುದಿಲ್ಲ ಎಂದು ಹೇಳಿರುವವರೂ ಇದ್ದಾರೆ. ತಿಪಟೂರು ತಾಲ್ಲೂಕು ಬೆಳಗರ ಹಳ್ಳಿಯ ವೃದ್ಧೆಯೊಬ್ಬರು ಮತಯಂತ್ರದಲ್ಲಿ ಇಂದಿರಮ್ಮನ ಹಸ್ತದ ಗುರುತು ಇಲ್ಲವೆಂದು ಮತ ಚಲಾಯಿಸಲು ನಿರಾಕರಿಸಿದ ಪ್ರಸಂಗವೇ ಇದಕ್ಕೊಂದು ಉದಾಹರಣೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಇಂತಹ ಪ್ರಸಂಗಗಳು ನಡೆದಿವೆ.
ಕೊರಟಗೆರೆ ತಾಲ್ಲೂಕಿನ ಮತಗಟ್ಟೆ ಕೇಂದ್ರವೊಂದರಲ್ಲಿ ಮತ ಚಲಾಯಿಸಿದ ನಂತರ ರೈತನನ್ನು ಕೆಲವರು ಪ್ರಶ್ನಿಸಿ ಯಾರಿಗೆ ಓಟು ಮಾಡಿರುವೆ ಎಂದು ಕೇಳಿದರೆ ಓಟು ಮಾಡುವ ಮನಸ್ಸಾಗಲಿಲ್ಲ. ಆದರೂ ಇಲ್ಲಿಗೆ ಬಂದಿದ್ದೇನೆ. ಯಾರಿಗೋ ಒಬ್ಬರಿಗೆ ಒತ್ತಿ ಬಂದಿದ್ದೇನೆ. ಹಿಂದೆ ಇಂದಿರಾ ಗಾಂಧಿ ಜೋಳ ಕೊಟ್ಟು ಬರಗಾಲದಲ್ಲಿ ಕಾಪಾಡಿದ್ದಳಂತೆ. ಸಿದ್ದರಾಮಯ್ಯ ಈ ರಾಜ್ಯದಲ್ಲಿ ಅಕ್ಕಿಕೊಟ್ಟು ಬರಗಾಲದಲ್ಲಿ ನಮ್ಮ ಜೀವ ಉಳಿಸಿದ್ದಾರೆ. ಅಂತಹವರಿಗೆ ನಮ್ಮ ಓಟು. ಆದರೆ ಅವರ ಗುರುತು ಇಲ್ಲ. ಯಾರಿಗೋ ಹಾಕಿ ಬಂದಿದ್ದೇನೆ ಎನ್ನುವಾಗ ಬಡತನದ ತುಡಿತ, ಮತಯಂತ್ರದಲ್ಲಿ ಆತನಿಗೆ ಬೇಕಾದ ಚಿಹ್ನೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿತು.
ಈವರೆಗೆ 16 ಚುನಾವಣೆಗಳು ನಡೆದು ಹೋಗಿವೆ. ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕೆಲವು ಚುನಾವಣೆಗಳಲ್ಲಿ ಗೆಲ್ಲಲಾಗದಿದ್ದರೂ ಗೆದ್ದ ಅಭ್ಯರ್ಥಿಯೊಂದಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಇದೇ ಪ್ರಥಮ ಎನ್ನುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣಾ ಅಖಾಡದಲ್ಲಿ ಇದ್ದುದರಿಂದ ಈ ಬಾರಿ ಕಾಂಗ್ರೆಸ್ ಚಿಹ್ನೆಯನ್ನು ಕಾಣಲು ಸಾಧ್ಯವಾಗಲಿಲ್ಲ. ಇದುವರೆಗೆ ನಡೆದಿರುವ ಲೋಕಸಭಾ ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, ತಲಾ ಒಂದು ಬಾರಿ ಜನತದಳ ಮತ್ತು ಪಿಎಸ್‍ಪಿ ಗೆದ್ದಿದೆ.
ಖಾದ್ರಿ ಶಾಮಣ್ಣ ಸ್ಪರ್ಧೆ
1952 ರಲ್ಲಿ ಮೊದಲ ಚುನಾವಣೆ ನಡೆದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‍ಸಿ) ಸಿ.ಆರ್.ಬಸಪ್ಪ ಸ್ಪರ್ಧಿಸಿ ವಿಜೇತರಾಗಿದ್ದರು. ಖ್ಯಾತ ಪತ್ರಕರ್ತ ಖಾದ್ರಿ ಶಾಮಣ್ಣ ಅವರ ಸ್ಪರ್ಧೆಯಿಂದ ತುಮಕೂರು ಲೋಕಸಭಾ ಕ್ಷೇತ್ರ ಆಗ ಗಮನ ಸೆಳೆದಿತ್ತು. ಅವರು ಸಮಾಜ ವಾದಿ ಪಕ್ಷದಿಂದ ಸ್ಪರ್ಧಿಸಿದ್ದರು.
1957 ರಲ್ಲಿ ನಡೆದ 2ನೇ ಲೋಕಸಭಾ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನಿಂದ ಎಂ.ವಿ.ಕೃಷ್ಣಪ್ಪ ಆಯ್ಕೆಯಾಗಿದ್ದರು. ಇವರ ವಿರುದ್ಧ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಬಿ.ಪಿ.ಗಂಗಾಧರಯ್ಯ, ಬಿಜೆಎಸ್ ಅಭ್ಯರ್ಥಿ ಕೆ.ವಿ.ಸುಬ್ರಹ್ಮಣ್ಯ ಸ್ಪರ್ಧೆಯೊಡ್ಡಿದ್ದರು. 1962 ರಲ್ಲಿ ನಡೆದ ಮೂರನೇ ಲೋಕಸಭಾ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಎಂ.ವಿ.ಕೃಷ್ಣಪ್ಪ ಮತ್ತೆ ಆಯ್ಕೆಯಾದರು. 1967 ರಲ್ಲಿ ನಡೆದ ನಾಲ್ಕನೇ ಲೋಕಸಭಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಕೆ.ಲಕ್ಕಪ್ಪ ಆಯ್ಕೆಯಾದರು.
1980 ರಲ್ಲಿ ನಡೆದ ಚುನಾವಣೆಯಲ್ಲಿ ಐ.ಎನ್.ಸಿ.ಯಿಂದ ಕೆ.ಲಕ್ಕಪ್ಪ, 1984 ರಲ್ಲಿ ನಡೆದ ಚುನಾವಣೆಯಲ್ಲಿ ಐಎನ್‍ಸಿ ಯಿಂದ ಜಿ.ಎಸ್.ಬಸವರಾಜು, 1989 ರಲ್ಲಿ ಅದೇ ಪಕ್ಷದಿಂದ ಮತ್ತೆ ಜಿ.ಎಸ್.ಬಸವರಾಜು ಆಯ್ಕೆ, 1991 ರಲ್ಲಿ ಬಿಜೆಪಿಯಿಂದ ಎಸ್.ಮಲ್ಲಿಕಾರ್ಜುನಯ್ಯ, 1996 ರಲ್ಲಿ ಜನತಾದಳದಿಂದ ಸಿ.ಎನ್.ಭಾಸ್ಕರಪ್ಪ, 1998 ರಲ್ಲಿ ಬಿಜೆಪಿಯ ಎಸ್.ಮಲ್ಲಿಕಾರ್ಜುನಯ್ಯ, 1999 ರಲ್ಲಿ ಐಎನ್‍ಸಿಯ ಜಿ.ಎಸ್.ಬಸವರಾಜು, 2004 ರಲ್ಲಿ ಬಿಜೆಪಿಯಿಂದ ಎಸ್.ಮಲ್ಲಿಕಾರ್ಜುನಯ್ಯ, 2009 ರಲ್ಲಿ ಬಿಜೆಪಿಯಿಂದ ಜಿ.ಎಸ್.ಬಸವರಾಜು, 2014 ರಲ್ಲಿ ಐಎನ್‍ಸಿಯಿಂದ ಎಸ್.ಪಿ.ಮುದ್ದಹನುಮೇಗೌಡ ಆಯ್ಕೆಯಾಗಿದ್ದಾರೆ. ಈ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.