ರೀಲ್ಸ್‌ ಹುಚ್ಚಾಟ : ಬಿತ್ತು ಭಾರಿ ದಂಡ …!

ನವದೆಹಲಿ :

   ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕು. ಆದರೆ ಈಗಿನ ಕಾಲದಲ್ಲಿ ಈ ನಿಯಮವನ್ನು ಬ್ರೇಕ್ ಮಾಡುವವರೇ ಹೆಚ್ಚು. ಕೆಲವರು ಬಿಸಿ ರಕ್ತದ ಯುವಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಮಧ್ಯೆ ಅಪಾಯಕಾರಿ ಬೈಕ್‌ ಸ್ಟಂಟ್‌ ಮಾಡುತ್ತಾ ಹುಚ್ಚಾಟಗಳನ್ನು ಮೆರೆಯುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಮೂವರು ವ್ಯಕ್ತಿಗಳು ರೀಲ್ಸ್‌ಗಾಗಿ ಚಲಿಸುವ ಕಾರಿನಲ್ಲಿ ಅಪಾಯಕಾರಿ ಸ್ಟಂಟ್‌ ಮಾಡಿದ್ದಾರೆ. ಇದರ ಪರಿಣಾಮವಾಗಿ 33 ಸಾವಿರ ರೂ. ದಂಡ ವಿಧಿಸಿಕೊಂಡಿರುವ ಘಟನೆಯೂ ನೋಯ್ಡಾದಲ್ಲಿ ನಡೆದಿದೆ.

   ಸಚಿನ್ ಗುಪ್ತ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೋಯ್ಡಾ ಪೊಲೀಸರ ಗಮನಕ್ಕೆ ಬಂದಿದೆ. ಯುವಕರ ಈ ಹುಚ್ಚಾಟಕ್ಕೆ ಕ್ರಮ ಕೈಗೊಂಡಿರುವ ಟ್ರಾಫಿಕ್ ಪೋಲೀಸರು ಅಜಾಗರೂಕ ಚಾಲನೆ, ಟಿಂಟೆಡ್ ಗ್ಲಾಸ್ ಬಳಕೆ, ವಿಮೆ ಇಲ್ಲದೆ ವಾಹನ ಚಲಾಯಿಸಿರುವುದು ಹಾಗೂ ಸೀಟ್ ಬೆಲ್ಟ್ ಧರಿಸದೆ ಇರುವುದಕ್ಕೆ 33,000 ರೂ. ದಂಡ ವಿಧಿಸಿದ್ದಾರೆ. ಪೊಲೀಸರು ತಕ್ಷಣವೇ ಕ್ರಮಕೈಗೊಂಡದ್ದಕ್ಕೆ ನೆಟ್ಟಿಗರೊಬ್ಬರು, ಈ ರೀತಿ ಕ್ರಮ ಕೈಕೊಂಡರೇನೇ ಬುದ್ಧಿ ಕಲಿಯುವುದು ಎಂದು ಶ್ಲಾಘಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಅಪಾಯಕಾರಿ ನಡವಳಿಕೆಗೆ ಇದು ಹೆಚ್ಚು ಅಗತ್ಯವಿರುವ ಪ್ರತಿಕ್ರಿಯೆ ಎಂದಿದ್ದಾರೆ.