ನವದೆಹಲಿ:
ಲೋಕಸಭಾ ಕಲಾಪದ ವೇಳೆ ಭದ್ರತಾ ಲೋಪವಾಗಿದ್ದನ್ನು ಖಂಡಿಸಿದ ರೈತ ನಾಯಕ ರಾಕೇಶ್ ಟಿಕಾಯತ್ ಅವರು, ಮಾಧ್ಯಮದ ಒಂದು ವಿಭಾಗ ವರದಿ ಮಾಡಿದಂತೆ ಆರೋಪಿಗಳೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಅಥವಾ ಭಾರತೀಯ ಕಿಸಾನ್ ಯೂನಿಯನ್ ಯಾವುದೇ ಸಂಬಂಧ ಹೊಂದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ.
ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು, ನಿರುದ್ಯೋಗದಂತಹ ಸಮಸ್ಯೆಗಳಿಂದ ಆಕ್ರೋಶಗೊಂಡು ಈ ಕೃತ್ಯ ಎಸಗಿರುವುದಾಗಿ ಬಂಧಿತ ಆರೋಪಿ ಅಮೋಲ್ ಶಿಂಧೆ ಪೊಲೀಸರ ವಿಚಾರಣೆ ವೇಳೆ ಹೇಳಿರುವುದಾಗಿ ಮೂಲವೊಂದು ಪಿಟಿಐಗೆ ತಿಳಿಸಿದೆ.ಮತ್ತೋರ್ವ ಆರೋಪಿ ನೀಲಂ ಈ ಹಿಂದೆ ರೈತರ ಪ್ರತಿಭಟನೆ ಸೇರಿದಂತೆ ಹಲವು ಆಂದೋಲನಗಳಲ್ಲಿ ಭಾಗವಹಿಸಿದ್ದರು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.
ಹೀಗಾಗಿ ಈ ಬಗ್ಗೆ ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟಿಕಾಯತ್ ಅವರು, ‘ಇಂದು ಸಂಸತ್ತಿನಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ. ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಸಂಪೂರ್ಣ ಆಧಾರ ರಹಿತ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.